Indian Cricket | ರೆಡ್ ಬಾಲ್ ಕೋಚ್ ಆಗಿ ಗೌತಮ್ ಗಂಭೀರ್ ಭವಿಷ್ಯವೇನು?
ಟಿ20 ಸರಣಿಯಲ್ಲಿ ಜಯಭೇರಿ ಬಾರಿಸಿದ ನಂತರವೂ ತೂಗುತ್ತಿರುವ 'ಗಂಭೀರ' ತೂಗುಗತ್ತಿ
ಗೌತಮ್ ಗಂಭೀರ್ | Photo Credit : PTI
ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ತಂಡದ ಭಾರತ ಪ್ರವಾಸದ ವೇಳೆ ಭಾರತ ತಂಡ ಏಕದಿನ ಸರಣಿ ಹಾಗೂ ಟಿ-20 ಸರಣಿಯಲ್ಲಿ ಅಮೋಘ ಜಯಭೇರಿ ಬಾರಿಸಿದರೂ, ಅದಕ್ಕೂ ಮುನ್ನ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಪರಾಭವಗೊಂಡಿತ್ತು. ಹೀಗಾಗಿ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವುದು ಅನುಮಾನ ಎಂಬ ಮಾತುಗಳು ಬಿಸಿಸಿಐ ಅಂಗಳದಲ್ಲಿ ಕೇಳಿ ಬರುತ್ತಿವೆ.
ಏಕದಿನ ಪಂದ್ಯಗಳು ಹಾಗೂ ಟಿ-20 ಟ್ವೆಂಟಿ ಪಂದ್ಯಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ರೆಡ್ ಬಾಲ್ ಕ್ರಿಕೆಟ್ ಆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅದೇ ಗುಣಮಟ್ಟದ ಪ್ರದರ್ಶನ ನೀಡಿಲ್ಲ. ಮೇಲಾಗಿ SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ) ತಂಡಗಳ ವಿರುದ್ಧ ಭಾರತ ತಂಡದ ಇತ್ತೀಚಿನ ಪ್ರದರ್ಶನ ತೀರಾ ಕಳಪೆಯಾಗಿದೆ.
ಇಂಗ್ಲೆಂಡ್ ತಂಡದ ವಿರುದ್ಧ ಅದರ ತವರಿನಲ್ಲೇ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 2-2 ಅಂತರದಲ್ಲಿ ಸಮಬಲ ಸಾಧಿಸಿದ್ದು ಬಿಟ್ಟರೆ, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಸರಣಿ ಹಾಗೂ ತವರಿನಲ್ಲೇ ನಡೆದಿದ್ದ ನ್ಯೂಝಿಲೆಂಡ್ ತಂಡದ ಎದುರಿನ ಸರಣಿಯಲ್ಲಿ ಹೀನಾಯ ಪರಾಭವ ಎದುರಿಸಿತ್ತು.
ದಕ್ಷಿಣ ಆಫ್ರಿಕಾ ತಂಡದೆದುರಿನ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಹೀನಾಯ ಸೋಲು ಅನುಭವಿಸಿದ ಬೆನ್ನಿಗೇ, ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಅನೌಪಚಾರಿಕವಾಗಿ ತಂಡದ ಕೋಚ್ ಆಗುವಂತೆ ವಿವಿಎಸ್ ಲಕ್ಷ್ಮಣ್ ಅವರನ್ನು ಸಂಪರ್ಕಿಸಿದ್ದರು ಎಂದು ವಿಶ್ವಾರಸಾರ್ಹ ಮೂಲಗಳು ತಿಳಿಸಿವೆ. ಆದರೆ, ವಿವಿಎಸ್ ಲಕ್ಷ್ಮಣ್ ಟೆಸ್ಟ್ ತಂಡದ ಕೋಚ್ ಆಗಲು ಆಸಕ್ತಿ ತೋರದ್ದರಿಂದ ಆ ಪ್ರಸ್ತಾವ ನೆನಗುದಿಗೆ ಬಿದ್ದಿತ್ತು ಎನ್ನಲಾಗಿದೆ.
ಆದರೆ, ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಸಂಸ್ಥೆಯ ಕ್ರಿಕೆಟ್ ಮುಖ್ಯಸ್ಥರಾಗಿಯೇ ಮುಂದುವರಿಯಲು ದಂತಕತೆ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಸಂತೃಪ್ತಿ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.
20207ರ ಏಕದಿನ ವಿಶ್ವಿಕಪ್ ವರೆಗೂ ಗೌತಮ್ ಗಂಭೀರ್ ರೊಂದಿಗಿನ ಗುತ್ತಿಗೆ ಅವಧಿ ಮಂದುವರಿಯಲಿದ್ದರೂ, ಇನ್ನು ಐದು ವಾರಗಳಲ್ಲಿ ಪ್ರಾರಂಭಗೊಳ್ಳಲಿರುವ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡ ತೋರುವ ಸಾಧನೆಯ ಮೇಲೆ ಅವರ ಗುತ್ತಿಗೆ ಅವಧಿಯ ಕುರಿತು ಪರಾಮರ್ಶೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
2025-27ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಋತುವಿನಲ್ಲಿ ಇನ್ನೂ ಒಂಭತ್ತು ಟೆಸ್ಟ್ ಪಂದ್ಯಗಳನ್ನಾಡುವುದು ಭಾರತ ತಂಡಕ್ಕೆ ಬಾಕಿ ಇದ್ದು, ಅಲ್ಲಿಯವರೆಗೆ ಗೌತಮ್ ಗಂಭೀರ್ ಅವರನ್ನು ಟೆಸ್ಟ್ ತಂಡದ ಮುಖ್ಯಯ ಕೋಚ್ ಆಗಿ ಮುಂದುವರಿಸುವುದು ಸೂಕ್ತವೇ ಎಂಬ ಕುರಿತು ಬಿಸಿಸಿಐ ಮುಖ್ಯಸ್ಥರು ಗಂಭೀರವಾಗಿ ಆಲೋಚಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇಂಗ್ಲೆಂಡ್ ತಂಡದ ವಿರುದ್ಧ 2-2 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡ ನಂತರ, ಭಾರತ ತಂಡ ಇನ್ನೂ ಒಂದೆರಡು ಸಾಗರೋತ್ತರ ಟೆಸ್ಟ್ ಸರಣಿಯನ್ನು ಆಡಬೇಕಿದೆ. 2026ರ ಆಗಸ್ಟ್ ನಲ್ಲಿ ಶ್ರೀಲಂಕಾ ವಿರುದ್ಧ ಹಾಗೂ ಅಕ್ಟೋಬರ್ ತಿಂಗಳಲ್ಲಿ ನ್ಯೂಝಿಲೆಂಡ್ ತಂಡದ ವಿರುದ್ಧ ತಲಾ ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಇದಾದ ಬಳಿಕ ಜನವರಿ-ಫೆಬ್ರವರಿ 2027ರಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯಲಿರುವ ಐದು ಟೆಸ್ಟ್ ಪಂದ್ಯಗಳ ಆತಿಥ್ಯವನ್ನೂ ವಹಿಸಲಿದೆ.
“ಭಾರತೀಯ ಕ್ರಿಕೆಟ್ ನ ಶಕ್ತಿ ಕೇಂದ್ರದಲ್ಲಿ ಗೌತಮ್ ಗಂಭೀರ್ ಗೆ ಬಲವಾದ ಬೆಂಬಲವಿದ್ದರೂ, ಒಂದು ವೇಳೆ ಭಾರತ ತಂಡ ಟಿ-20 ವಿಶ್ವಕಪ್ ಅನ್ನು ಉಳಿಸಿಕೊಳ್ಳುವುದು ಅಥವಾ ವಿಶ್ವಕಪ್ ಫೈನಲ್ ಗೆ ತಲುಪುವುದರ ಮೇಲೆ ನಿಶ್ಚಿತವಾಗಿ ಗೌತಮ್ ಗಂಭೀರ್ ಅವರ ಭವಿಷ್ಯ ನಿರ್ಧಾರವಾಗಲಿದೆ. ಆದರೆ, ಒಂದು ವೇಳೆ ಗೌತಮ್ ಗಂಭೀರ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿಯೂ ಮುಂದುವರಿದರೆ, ಅದು ಆಸಕ್ತಿಕರ ಸಂಗತಿಯಾಗಲಿದೆ” ಎಂದು ಹೆಸರೇಳಲಿಚ್ಛಿಸದ ಬಿಸಿಸಿಐ ಮೂಲವೊಂದು ತಿಳಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.