"ಗೌತಮ್ ಗಂಭೀರ್ ಕೋಚ್ ಅಲ್ಲ...": ಕಪಿಲ್ ದೇವ್ ಹೇಳಿದ್ದೇನು?
ಕಪಿಲ್ ದೇವ್ / ಗೌತಮ್ ಗಂಭೀರ್ (Photo credit: PTI)
ಹೊಸದಿಲ್ಲಿ: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡದ ಮ್ಯಾನೇಜರ್ ಆಗಬಹುದೇ ಹೊರತು, ಕೋಚ್ ಆಗಲು ಸಾಧ್ಯವಿಲ್ಲ ಎಂದು ಗುರುವಾರ ಭಾರತಕ್ಕೆ ಪ್ರಪ್ರಥಮ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-2ರ ಅಂತರದಲ್ಲಿ ಭಾರತ ತಂಡ ಪರಾಭವಗೊಂಡ ನಂತರ ಗೌತಮ್ ಗಂಭೀರ್ ಅವರ ಕಾರ್ಯವೈಖರಿ ತೀವ್ರ ಟೀಕೆಗೆ ಗುರಿಯಾಗಿರುವ ಬೆನ್ನಿಗೇ ಅವರಿಂದ ಇಂತಹ ಹೇಳಿಕೆ ಹೊರ ಬಿದ್ದಿದೆ.
ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಪಿಲ್ ದೇವ್, “ಆಧುನಿಕ ಕ್ರಿಕೆಟ್ ಕಾಲಘಟ್ಟದಲ್ಲಿ ತಂಡದ ಮುಖ್ಯ ಕೋಚ್ ನ ಕೆಲಸ ತಂಡದ ಸದಸ್ಯರನ್ನು ನಿರ್ವಹಿಸುವುದೇ ಹೊರತು, ತರಬೇತಿ ನೀಡುವುದಲ್ಲ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ವರ್ತಮಾನದ ಕ್ರಿಕೆಟ್ ನಲ್ಲಿ ಕೋಚ್ ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
“ಇಂದು ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಪದ ಕೋಚ್. ಗೌತಮ್ ಗಂಭೀರ್ ಕೋಚ್ ಆಗಲು ಸಾಧ್ಯವಿಲ್ಲ. ಅವರು ತಂಡದ ಮ್ಯಾನೇಜರ್ ಮಾತ್ರ ಆಗಲು ಸಾಧ್ಯ” ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.
“ನೀವು ಕೋಚ್ ಎಂದು ಹೇಳುವಾಗ, ಶಾಲೆ ಮತ್ತು ಕಾಲೇಜುಗಳಲ್ಲಿ ಕಲಿಯುವುದು ಕೋಚ್ ಆಗಿದೆ. ಅಲ್ಲಿನವರು ನನ್ನ ಕೋಚ್ ಆಗಿದ್ದಾರೆ. ಅವರು ನನ್ನನ್ನು ನಿರ್ವಹಿಸಲು ಸಾಧ್ಯವಿದೆ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
“ಕೋಚ್ ಎಂದು ಹೆಸರು ನೀಡಿ, ಯಾರನ್ನಾದರೂ ಕೋಚ್ ಎಂದು ಕರೆಯಲಾದರೂ ಹೇಗೆ ಸಾಧ್ಯ? ಉದಾಹರಣೆಗೆ ಲೆಗ್ ಸ್ಪಿನ್ನರ್ ಒಬ್ಬರಿಗೆ ಗೌತಮ್ ಗಂಭೀರ್ ಹೇಗೆ ಕೋಚ್ ನೀಡಲು ಸಾಧ್ಯ? ಅಥವಾ ವಿಕೆಟ್ ಕೀಪರ್ ಗೆ ಹೇಗೆ ಕೋಚ್ ನೀಡಲು ಸಾಧ್ಯ? ಎಂದು ಪ್ರಶ್ನಿಸಿದರು. ನೀವು ಸಾಧಿಸಬಲ್ಲಿರಿ ಎಂದು ಅವರಿಗೆ ಉತ್ತೇಜನ ನೀಡುವುದು ಮ್ಯಾನೇಜರ್ ಕೆಲಸವಾಗಿದೆ. ಯಾಕೆಂದರೆ, ನೀವು ಮ್ಯಾನೇಜರ್ ಆದಾಗ, ಯುವ ಆಟಗಾರರನ್ನು ನಿಮ್ಮ ಮಾತುಗಳನ್ನು ಆಲಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
ನಾಯಕನಾಗಿ ತಮ್ಮ ದೃಷ್ಟಿಕೋನದ ಬಗ್ಗೆ ಮಾತನಾಡಿದ ಕಪಿಲ್ ದೇವ್, ದುರ್ಬಲ ಹಂತದಲ್ಲಿರುವ ಆಟಗಾರರನ್ನು ಬೆಂಬಲಿಸುವುದೇ ಮುಖ್ಯ ಎಂದು ಹೇಳಿದರು.
“ಚೆನ್ನಾಗಿ ಆಡದ ಆಟಗಾರರಿಗೆ ಪ್ರೋತ್ಸಾಹದಾಯಕ ವಾತಾವರಣ ನೀಡಬೇಕು. ಯಾರಾದರೂ ಶತಕ ಬಾರಿಸಿದರೆ, ಅವರೊಂದಿಗೆ ಕುಳಿತು ಪಾರ್ಟಿ ಅಥವಾ ಭೋಜನ ಮಾಡುವ ಅಗತ್ಯವಿಲ್ಲ” ಎಂದರು.
“ತಂಡದಲ್ಲಿ ಯಾವಾಗಲೂ ಉತ್ತಮ ಪ್ರದರ್ಶನ ನೀಡಿವವರು ಇರುತ್ತಾರೆ. ನಾಯಕನಾಗಿ ನಾನು ಪ್ರದರ್ಶನ ನೀಡದವರ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇನೆ. ಅವರೊಂದಿಗೆ ಕುಳಿತು ಮಾತನಾಡಬೇಕು, ಧೈರ್ಯ ತುಂಬಬೇಕು” ಎಂದು ಅವರು ಹೇಳಿದರು.
ಭಾರತ ತಂಡದ ಆಟಗಾರರನ್ನು ನಿರಂತರವಾಗಿ ಬದಲಿಸುತ್ತಿರುವುದು ಹಾಗೂ ಅರೆಕಾಲಿಕ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗುತ್ತಿರುವ ಬಗ್ಗೆ ಗೌತಮ್ ಗಂಭೀರ್ ಕ್ರಿಕೆಟ್ ವಿಶ್ಲೇಷಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಪಿಲ್ ದೇವ್ ಅವರ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.