ವೈಭವ್ ಸೂರ್ಯವಂಶಿಗೆ ಯಶಸ್ಸಿನ ಸರಿಯಾದ ಶ್ರೇಯವನ್ನು ಗಿಲ್ ನೀಡಿಲ್ಲ: ಅಜಯ್ ಜಡೇಜ ಆಕ್ಷೇಪ
ವೈಭವ್ ಸೂರ್ಯವಂಶಿ , ಶುಭಮನ್ ಗಿಲ್ | NDTV
ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ತಂಡದ 14 ವರ್ಷದ ಪ್ರತಿಭೆ ವೈಭವ್ ಸೂರ್ಯವಂಶಿಯ ಬಗ್ಗೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಆಡಿರುವ ಮಾತುಗಳಿಗೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೈಭವ್‌ರ ದಾಖಲೆಯ ಶತಕದ ನೆರವಿನಿಂದ, 210 ರನ್‌ಗಳ ಕಠಿಣ ಗುರಿಯನ್ನು ರಾಜಸ್ಥಾನ ರಾಯಲ್ಸ್ ಸುಲಭವಾಗಿ ತಲುಪಿದ ಬಳಿಕ, ಇಂದಿನದು ಎಳೆಯನ ದಿನವಾಗಿತ್ತು ಎಂದು ಶುಭಮನ್ ಗಿಲ್ ಹೇಳಿದ್ದರು. ‘‘ಇಂದಿನದು ಅವರ ದಿನವಾಗಿತ್ತು. ಅವರ ಬ್ಯಾಟಿಂಗ್ ಅಮೋಘವಾಗಿತ್ತು. ಅವರು ಅದರ ಸಂಪೂರ್ಣ ಪ್ರಯೋಜನವನ್ನು ಪಡೆದರು’’ ಎಂದಿದ್ದರು.
‘ಸ್ಟಾರ್ ಸ್ಪೋರ್ಟ್ಸ್’ನಲ್ಲಿ ಪಂದ್ಯನಂತರದ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿದ್ದ ವೇಳೆ ಜಡೇಜ ಅಸಮಾಧಾನಗೊಂಡಂತೆ ಕಂಡುಬಂದರು. ‘‘14 ವರ್ಷದ ಬಾಲಕನೊಬ್ಬ ತನ್ನ ಸಾಮರ್ಥ್ಯದ ಮೇಲೆ ಅಷ್ಟೊಂದು ಆತ್ಮವಿಶ್ವಾಸ ಹೊಂದಿದ್ದಾರೆ.. ಹಾಗಿರುವಾಗ, ಅದೊಂದು ಕೇವಲ ಅದೃಷ್ಟದ ದಿನ ಎಂದಷ್ಟೇ ಹೇಳಿಬಿಡಬಹುದೇ? ಇಲ್ಲಿ ಯಶಸ್ಸಿನ ಶ್ರೇಯವನ್ನು ಸರಿಯಾಗಿ ನೀಡಲಾಗಿಲ್ಲ’’ ಎಂದು ಅವರು ಹೇಳಿದರು.
ಸೂರ್ಯವಂಶಿಯ ಈ ಶ್ರೇಷ್ಠ ನಿರ್ವಹಣೆಗೆ ಇನ್ನೂ ಹೆಚ್ಚಿನ ಪ್ರಶಂಸೆಯ ಅಗತ್ಯವಿತ್ತು, ಅದರಲ್ಲೂ ಮುಖ್ಯವಾಗಿ ಅವರ ವಯಸ್ಸು ಮತ್ತು ಅವರ ಮೇಲಿದ್ದ ಒತ್ತಡವನ್ನು ಗಮನಿಸಬೇಕಾಗಿತ್ತು ಎಂದು ಜಡೇಜ ನುಡಿದರು.