×
Ad

ನಾಳೆ ಐಪಿಎಲ್ ಎಲಿಮಿನೇಟರ್ ಪಂದ್ಯ | ಗುಜರಾತ್ ಟೈಟಾನ್ಸ್- ಮುಂಬೈ ಇಂಡಿಯನ್ಸ್ ಹಣಾಹಣಿ

Update: 2025-05-29 21:22 IST

PC : PTI 

ಮುಲ್ಲನ್‌ಪುರ : ಎರಡು ತಿಂಗಳಿಗೂ ಹೆಚ್ಚು ಸಮಯ ನಡೆದ ಲೀಗ್ ಹಂತದ ಪಂದ್ಯದ ನಂತರ 18ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ಶುಕ್ರವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಸೋಲುವ ತಂಡ ಪಂದ್ಯಾವಳಿಯಿಂದ ನಿರ್ಗಮಿಸಲಿದೆ. ಗೆಲ್ಲುವ ತಂಡ ಫೈನಲ್‌ಗೆ ಟಿಕೆಟ್ ಗಿಟ್ಟಿಸಲು 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕ್ವಾಲಿಫೈಯರ್-1ರಲ್ಲಿ ಸೋಲುವ ತಂಡದೊಂದಿಗೆ ಸೆಣಸಾಡಲಿದೆ.

ಈ ವರ್ಷದ ಐಪಿಎಲ್‌ನಲ್ಲಿ ಉಭಯ ತಂಡಗಳು 3ನೇ ಬಾರಿ ಮುಖಾಮುಖಿಯಾಗಲು ಸಜ್ಜಾಗಿವೆ. ಗುಜರಾತ್ ಹಾಗೂ ಮುಂಬೈ ತಂಡಗಳು ವ್ಯತಿರಿಕ್ತ ಆರಂಭ ಪಡೆದಿದ್ದವು. ಗುಜರಾತ್ ತಂಡವು ಮೊದಲ 8 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿ ಭರ್ಜರಿ ಆರಂಭ ಪಡೆದಿದ್ದರೆ, ಮತ್ತೊಂದೆಡೆ ಮುಂಬೈ ತಂಡವು ಮೊದಲ 5 ಪಂದ್ಯಗಳಲ್ಲಿ 4ರಲ್ಲಿ ಸೋತಿತ್ತು. 5 ಬಾರಿಯ ಚಾಂಪಿಯನ್ ಮುಂಬೈ ತಂಡವು ಆನಂತರ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿತ್ತು.

ಗುಜರಾತ್ ತಂಡವು ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿತ್ತು. ಆದರೆ ಕೊನೆಯ 2 ಲೀಗ್ ಹಂತದ ಪಂದ್ಯಗಳಲ್ಲಿನ ಸೋಲು ದುಬಾರಿಯಾಯಿತು. ಮುಂಬೈ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲುಂಡಿದೆ.

ಗುಜರಾತ್ ಟೈಟಾನ್ಸ್ ತಂಡವು ಈಗಾಗಲೇ ಎರಡು ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 2022ರಲ್ಲಿ ಚಾಂಪಿಯನ್‌ಪಟ್ಟಕ್ಕೇರಿದರೆ, 2023ರಲ್ಲಿ ರನ್ನರ್ಸ್ ಅಪ್ ಆಗಿತ್ತು.

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳ ಪೈಕಿ ಒಂದಾಗಿರುವ ಮುಂಬೈ ಇಂಡಿಯನ್ಸ್ ತಂಡವು ಐದು ಬಾರಿ ಐಪಿಎಲ್ ಟ್ರೋಫಿ ಜಯಿಸಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ದಾಖಲೆ ಹಂಚಿಕೊಂಡಿದೆ.

ಉಭಯ ತಂಡಗಳು ಪ್ರಮುಖ ವಿದೇಶಿ ಆಟಗಾರರ ಸೇವೆಯಿಂದ ವಂಚಿತವಾಗಲಿವೆ. ಶುಭಮನ್ ಗಿಲ್ ನೇತೃತ್ವದ ಟೈಟಾನ್ಸ್ ತಂಡವು ಜೋಸ್ ಬಟ್ಲರ್ ಹಾಗೂ ಕಾಗಿಸೊ ರಬಾಡರಿಲ್ಲದೆ ಆಡಬೇಕಾಗಿದೆ. 3ನೇ ಕ್ರಮಾಂಕದಲ್ಲಿ ಟೂರ್ನಿಯುದ್ದಕ್ಕೂ ಮಿಂಚಿದ್ದ ಬಟ್ಲರ್ ಅನುಪಸ್ಥಿತಿಯು ಟೈಟಾನ್ಸ್ ತಂಡವನ್ನು ಕಾಡಬಹುದು. ಬಟ್ಲರ್ ಅನುಪಸ್ಥಿತಿಯು ಕ್ರಮವಾಗಿ 679 ರನ್ ಹಾಗೂ 649 ರನ್ ಗಳಿಸಿರುವ ಸಾಯಿ ಸುದರ್ಶನ್ ಹಾಗೂ ಗಿಲ್ ಮೇಲೆ ಹೆಚ್ಚುವರಿ ಒತ್ತಡವುಂಟು ಮಾಡಿದೆ.

ಹಾರ್ದಿಕ್ ಪಾಂಡ್ಯನಾಯಕತ್ವದ ಮುಂಬೈ ತಂಡ ಕೂಡ ವಿಕೆಟ್‌ಕೀಪರ್-ಬ್ಯಾಟರ್ ರಯಾನ್ ರಿಕೆಲ್ಟನ್ ಹಾಗೂ ಆಲ್‌ರೌಂಡರ್ ವಿಲ್ ಜಾಕ್ಸ್ ಇಲ್ಲದೆ ಪ್ರಮುಖ ಪಂದ್ಯವನ್ನು ಆಡಬೇಕಾಗಿದೆ. ಅಗ್ರ ಸರದಿಯಲ್ಲಿ ರಿಕೆಲ್ಟನ್ ಅವರು ರೋಹಿತ್ ಶರ್ಮಾರೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಲ್ ಜಾಕ್ಸ್ ಅವರು ಬಿರುಸಿನ ಬ್ಯಾಟಿಂಗ್ ಹಾಗೂ ಆಫ್ ಬ್ರೇಕ್ ಬೌಲಿಂಗ್‌ನ ಮೂಲಕ ತಂಡಕ್ಕೆ ಸಮತೋಲನ ತಂದಿದ್ದಾರೆ.

ಈ ಆಟಗಾರರ ಅನುಪಸ್ಥಿತಿಯಿಂದ ಪಂದ್ಯದ ಹೊಳಪು ಕಡಿಮೆಯಾಗಬಹುದು. ಆದರೆ ಎರಡೂ ತಂಡಗಳಲ್ಲಿ ಪಂದ್ಯವನ್ನು ಗೆಲ್ಲುವ ಸಾಮರ್ಥ್ಯವಿರುವ ಸಾಕಷ್ಟು ಮ್ಯಾಚ್ ವಿನ್ನರ್‌ಗಳಿದ್ದಾರೆ.

ಹೆಡ್-ಟು-ಹೆಡ್

ಆಡಿರುವ ಒಟ್ಟು ಪಂದ್ಯ: 7

ಗುಜರಾತ್‌ಗೆ ಗೆಲುವು: 5

ಮುಂಬೈಗೆ ಗೆಲುವು: 2

2025ರ ಐಪಿಎಲ್‌ನಲ್ಲಿ ಪ್ರದರ್ಶನ

► ಗುಜರಾತ್ ಟೈಟಾನ್ಸ್: ಪಂದ್ಯ: 14, ಗೆಲುವು: 9, ಸೋಲು: 5

ಮುಂಬೈ ಇಂಡಿಯನ್ಸ್: ಪಂದ್ಯ: 14, ಗೆಲುವು: 8, ಸೋಲು: 6

► ಗುಜರಾತ್ ಪರ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರು

ಸಾಯಿ ಸುದರ್ಶನ್: 679 ರನ್, -ಪ್ರಸಿದ್ಧ ಕೃಷ್ಣ: 23 ವಿಕೆಟ್‌ಗಳು

► ಮುಂಬೈ ಪರ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರು

ಸೂರ್ಯಕುಮಾರ್ ಯಾದವ್: 640 ರನ್, -ಟ್ರೆಂಟ್ ಬೌಲ್ಟ್: 19 ವಿಕೆಟ್‌ಗಳು

► ಸಂಭಾವ್ಯ ಆಡುವ 11ರ ಬಳಗ

► ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್(ನಾಯಕ), ಕುಶಾಲ್ ಮೆಂಡಿಸ್(ವಿಕೆಟ್‌ಕೀಪರ್), ಶೆರ್ಫಾನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾತಿಯಾ, ರಶೀದ್ ಖಾನ್, ಅರ್ಷದ್ ಖಾನ್, ಜೆರಾಲ್ಡ್ ಕೊಯೆಟ್ಝಿ, ಸಾಯಿ ಸುದರ್ಶನ್, ಮುಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ

ಇಂಪ್ಯಾಕ್ಟ್ ಪ್ಲೇಯರ್: ಸಾಯಿ ಸುದರ್ಶನ್.

► ಮುಂಬೈ ಇಂಡಿಯನ್ಸ್ : ಜಾನಿ ಬೈರ್‌ಸ್ಟೋವ್(ವಿಕೆಟ್‌ಕೀಪರ್), ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್‌ಪ್ರಿತ್ ಬುಮ್ರಾ.

► ಇಂಪ್ಯಾಕ್ಟ್ ಪ್ಲೇಯರ್: ಕರ್ಣ್ ಶರ್ಮಾ.

ಪಂದ್ಯ ಆರಂಭ ಸಮಯ: ರಾತ್ರಿ 7:30

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News