ಸಿಂಕ್ವೆಫೀಲ್ಡ್ ಕಪ್ ಚೆಸ್ ಟೂರ್ನಿ ಗುಕೇಶ್, ಪ್ರಜ್ಞಾನಂದ ಪಂದ್ಯ ಡ್ರಾ
ಆರ್.ಪ್ರಜ್ಞಾನಂದ | PC : X
ಸೇಂಟ್‌ಲೂಯಿ(ಅಮೆರಿಕ), ಆ.23: ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಸಿಂಕ್ವೆಫೀಲ್ಡ್ ಕಪ್ ಚೆಸ್ ಟೂರ್ನಿಯ ಐದನೇ ಸುತ್ತಿನಲ್ಲಿ ಫ್ರಾನ್ಸ್ ನ ಮ್ಯಾಕ್ಸಿಂ ವೇಶಿಯರ್ ಲಗ್ರಾವ್ ಜೊತೆ ಸುಲಭ ಡ್ರಾ ಮಾಡಿಕೊಂಡರು.
ಆದರೆ ವಿಶ್ವ ಚಾಂಪಿಯನ್ ಡಿ.ಗುಕೇಶ್, ಪೋಲ್ಯಾಂಡ್ ನ ಡೂಡಾ ಯಾನ್ ಕ್ರಿಸ್ಟೋಫ್ ವಿರುದ್ಧ ಡ್ರಾ ಮಾಡಿಕೊಳ್ಳುವ ಮೊದಲು ಆತಂಕದ ಕ್ಷಣಗಳನ್ನು ಎದುರಿಸಿದರು.
ಶುಕ್ರವಾರ 5ನೇ ಸುತ್ತಿನಲ್ಲಿ ಎಲ್ಲ ಐದೂ ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
9 ಸುತ್ತುಗಳ ಈ ಟೂರ್ನಿಯು ಅರ್ಧದಷ್ಟು ಮುಗಿದಿದೆ. ಫ್ಯಾಬಿಯಾನೊ ಕರುವಾನ ಅವರು 3.5 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನದಲ್ಲಿದ್ದಾರೆ. ಕರುವಾನ ಅವರು 5ನೇ ಸುತ್ತಿನಲ್ಲಿ ಅಮೆರಿಕದ ವೆಸ್ಲಿ ಸೊ ಅವರೊಂದಿಗೆ ಡ್ರಾ ಮಾಡಿಕೊಂಡರು.
ಪ್ರಜ್ಞಾನಂದ ಹಾಗೂ ಲಗ್ರಾವ್ ನಡುವಿನ ಪಂದ್ಯವು ಕೇವಲ 26 ನಡೆಗಳಲ್ಲಿ ಡ್ರಾ ಆಯಿತು. ಗುಕೇಶ್ ಹಾಗೂ ಡೂಡಾ ಪಂದ್ಯ 45 ನಡೆಗಳ ತನಕ ನಡೆಯಿತು.
ಅಮೆರಿಕದ ಸಾಮ್ಯುಯೆಲ್ ಸೆವಿಯನ್ ಅವರು ಉತ್ತಮ ಪ್ರದರ್ಶನ ಮುಂದುವರಿಸಿ ಉಜ್ಬೇಕಿಸ್ತಾನದ ಅಬ್ದುಲ್ ಸತ್ತಾರ್ ಅವರೊಂದಿಗೆ ಡ್ರಾ ಮಾಡಿಕೊಂಡರು. ಅಮೆರಿಕದ ಇನ್ನೊಬ್ಬ ಆಟಗಾರ ಲೆವೋನ್ ಅರೋನಿಯನ್ ಫ್ರಾನ್ಸ್‌ನ ಅಲಿರೇಝಾ ಫಿರೋಝ್ ಅವರೊಂದಿಗೆ ಅಂಕ ಹಂಚಿಕೊಂಡರು.
ಪ್ರಜ್ಞಾನಂದ ಹಾಗೂ ಅರೋನಿಯನ್ ತಲಾ 3 ಅಂಕ ಸಂಗ್ರಹಿಸಿದ್ದು, 2ನೇ ಸ್ಥಾನದಲ್ಲಿದ್ದಾರೆ. ಐವರು ಚೆಸ್ ತಾರೆಯರಾದ ಗುಕೇಶ್, ಫಿರೋಝ್, ವೆಸ್ಲಿ ಸೊ, ಸೆವಿಯನ್ ಹಾಗೂ ವೇಶಿಯರ್ ಲಗ್ರಾವ್ ತಲಾ 2.5 ಅಂಕ ಕಲೆ ಹಾಕಿದ್ದಾರೆ. ಡುಡಾ 2 ಪಾಯಿಂಟ್ ಹಾಗೂ ಸತ್ತಾರ್ 1 ಅಂಕ ಗಳಿಸಿದ್ದಾರೆ.