×
Ad

ಗುಕೇಶ್- ಪ್ರಜ್ಞಾನಂದ ಪಂದ್ಯ ಡ್ರಾ: ಇನ್ನೂ ಗೆಲುವು ಕಾಣದ ಎರಿಗೈಸಿ

Update: 2025-01-27 08:03 IST

PC: x.com/chesscom_in

ಹೊಸದಿಲ್ಲಿ: ಟಾಟಾ ಸ್ಟೀಲ್ ಚೆಸ್ ಟೂರ್ನಿ-2025ರ ಎಂಟನೇ ಸುತ್ತಿನಲ್ಲಿ ಭಾರತದ ಸ್ಟಾರ್ ಚೆಸ್ ಪಟುಗಳಾದ ಪ್ರಜ್ಞಾನಂದ ರಮೇಶ್ ಬಾಬು ಮತ್ತು ಗುಕೇಶ್ ದೊಮ್ಮರಾಜು ನಡುವಿನ ಪಂದ್ಯ ಭಾನುವಾರ ಡ್ರಾನಲ್ಲಿ ಅಂತ್ಯಗೊಂಡಿದೆ. ಹಾಲೆಂಡ್ ನ ವಿಜ್ಕ್ ಆನ್ ಝೀನಲ್ಲಿ ನಡೆಯುತ್ತಿರುವ ಪಂದ್ಯ ದೊಡ್ಡ ಸಂಖ್ಯೆಯ ಪ್ರೇಕ್ಷಕ ವರ್ಗಕ್ಕೆ ಸಾಕ್ಷಿಯಾಗಿದೆ. ವಿಶ್ವದ ಅತ್ಯಂತ ಕಿರಿಯ ಚಾಂಪಿಯನ್ ಇದರಲ್ಲಿ ಭಾಗವಹಿಸಿದ್ದಾರೆ.

ಕಪ್ಪುಕಾಯಿಗಳೊಂದಿಗೆ ರಕ್ಷಣಾತ್ಮಕವಾಗಿ ಆಡಿದ ಗುಕೇಶ್ ಬರ್ಲಿನ್ ಡಿಫೆನ್ಸ್ ತಂತ್ರ ಅನುಸರಿಸಿದರು. ಉಭಯ ಆಟಗಾರರು ಸಮತೋಲನದ ಆಟ ಪ್ರದರ್ಶಿಸಿದರು. ಪಂದ್ಯದಲ್ಲಿ ಒಂದು ಹಂತದಲ್ಲಿ ಮೇಲುಗೈ ಸಾಧಿಸಿದ್ದ ಗುಕೇಶ್ ಒಂದು ನಿರ್ಲಕ್ಷ್ಯದ ನಡೆಯಿಂದ (ಎ3) ಪ್ರಜ್ಞಾನಂದ ಅವರಿಗೆ ಅವಕಾಶ ಕಲ್ಪಿಸಿಕೊಟ್ಟರು. ಕೊನೆಗೆ 33ನೇ ನಡೆ ಬಳಿಕ ಉಭಯ ಆಟಗಾರರು ಡ್ರಾಗೆ ಒಪ್ಪಿಕೊಂಡರು.

ಆದರೆ ಈ ಪಂದ್ಯದ ಫಲಿತಾಂಶದಿಂದ ಅಂಕಪಟ್ಟಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಜಂಟಿಯಾಗಿ ಅಗ್ರಸ್ಥಾನ ಹೊಂದಿರುವ ನೊದಿರ್‌ಬೆಕ್ ಅಬ್ದುಸತ್ತರೋವ್ ಕೂಡಾ ರಷ್ಯಾದ ವ್ಲಾದಿಮಿರ್ ಫೆಡೊಸೀವ್ ವಿರುದ್ಧದ ಪಂದ್ಯದಲ್ಲಿ ಅಂಕ ಹಂಚಿಕೊಂಡರು. ಇದರಿಂದಾಗಿ ಎಂಟನೇ ಸುತ್ತಿನ ಕೊನೆಗೆ ನೊದಿರ್‌ಬೆಕ್, ಪ್ರಜ್ಞಾನಂದ ಮತ್ತು ಗುಕೇಶ್ ತಲಾ 5.5 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಈ ಟೂರ್ನಿಯಲ್ಲಿ ಇದುವರೆಗೆ ಯಾವುದೇ ಜಯ ಕಾಣದ ಅರ್ಜುನ್ ಎರಿಗೈಸಿ, ಸೆರ್ಬಿಯಾದ ಅಲೆಕ್ಸಿ ಸರೇನಾ ವಿರುದ್ಧದ ಪಂದ್ಯ ಡ್ರಾ ಮಾಡಿಕೊಂಡರು. ವಿಶ್ವ ರ‍್ಯಾಂಕಿಂಗ್ ನಲ್ಲಿ 4ನೇ ಹಾಗೂ ಭಾರತದಲ್ಲಿ 1ನೇ ರ‍್ಯಾಂಕ್ ಹೊಂದಿರುವ ಎರಿಗೈಸಿ ಕಳೆದ ವಾರ ನೀರಸ ಪ್ರದರ್ಶನದಿಂದ ಸುಮಾರು 30 ಇಎಲ್ಓ ಅಂಕಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಅವರು ನೊದಿರ್‌ಬೆಕ್ ಅವರಿಗಿಂತ ಹಿಂದೆ ಆರನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News