×
Ad

ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್: ಸಂಸ್ಕಾರ್ ಸಾರಸ್ವತ್ ಗೆ ಸಿಂಗಲ್ಸ್ ಪ್ರಶಸ್ತಿ, ತನ್ವಿ ಶರ್ಮಾ ರನ್ನರ್- ಅಪ್

Update: 2025-12-07 23:52 IST

Photo : Badminton Association of India

ಗುವಾಹಟಿ: ಭಾರತದ ಸಂಸ್ಕಾರ್ ಸಾರಸ್ವತ್ ತಮ್ಮದೇ ದೇಶದ ಮಿಥುನ್ ಮಂಜುನಾಥ್ ಅವರನ್ನು ಮಣಿಸಿ ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಮೂಲಕ ವೃತ್ತಿಜೀವನದಲ್ಲಿ ಮೊದಲ ಬಾರಿ ಸೂಪರ್-100 ಪ್ರಶಸ್ತಿಯನ್ನು ಎತ್ತಿಹಿಡಿದಿದ್ದಾರೆ.

ಜೋಧ್ಪುರದ 19ರ ವಯಸ್ಸಿನ ಸಂಸ್ಕಾರ್ ಸಾರಸ್ವತ್ ಅವರು ರವಿವಾರ 50 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಮಂಜುನಾಥ್ ಅವರನ್ನು 21-11, 17-21, 21-13 ಗೇಮ್ ಗಳ ಅಂತರದಿಂದ ಮಣಿಸಿದರು.

ವಿಶ್ವ ಜೂನಿಯರ್ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತೆ ತನ್ವಿ ಶರ್ಮಾ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಚೈನೀಸ್ ತೈಪೆಯ ಟಂಗ್ ಸಿಯೊ-ಟಾಂಗ್ ವಿರುದ್ಧ 18-21, 18-21 ಗೇಮ್ಗಳ ಅಂತರದಿಂದ ಸೋತಿದ್ದಾರೆ. ಇದರೊಂದಿಗೆ ರನ್ನರ್-ಅಪ್ಗೆ ತೃಪ್ತಿಪಟ್ಟಿದ್ದಾರೆ.

16ರ ವಯಸ್ಸಿನ ಪಂಜಾಬ್ ಆಟಗಾರ್ತಿ ಇತ್ತೀಚೆಗೆ ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಸೂಪರ್-300 ಟೂರ್ನಿಯಲ್ಲಿ ಸೆಮಿ ಫೈನಲ್ಗೆ ತಲುಪಿದ್ದರು. ಕಳೆದ ವರ್ಷ ನಡೆದ ಒಡಿಶಾ ಮಾಸ್ಟರ್ಸ್ ಟೂರ್ನಿ, ಯು.ಎಸ್. ಓಪನ್ ಸೂಪರ್ 300 ಹಾಗೂ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ಸ್ ನಲ್ಲೂ ರನ್ನರ್-ಅಪ್ ಆಗಿದ್ದರು.

ಪೃಥ್ವಿ ಕೃಷ್ಣಮೂರ್ತಿ ರಾಯ್ ಹಾಗೂ ಸಾಯಿ ಪ್ರತೀಕ್ ಅವರನ್ನೊಳಗೊಂಡ ಭಾರತದ ಪುರುಷರ ಡಬಲ್ಸ್ ತಂಡವು ಮಲೇಶ್ಯದ ಆರನೇ ಶ್ರೇಯಾಂಕದ ಕಾಂಗ್ ಖೈ ಕ್ಸಿಂಗ್ ಹಾಗೂ ಆರೊನ್ ಟೈ ವಿರುದ್ಧ 13-21, 18-21 ಗೇಮ್ಗಳ ಅಂತರದಿಂದ ಸೋತಿದೆ.

ಗುವಾಹಟಿಯ ನ್ಯಾಶನಲ್ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ತರಬೇತಿ ಪಡೆದಿರುವ ಸಾರಸ್ವತ್, ದೇಶೀಯ ಪಂದ್ಯಾವಳಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ಅರ್ಷ್ ಮುಹಮ್ಮದ್ ಅವರೊಂದಿಗೆ ತನ್ನ ಚೊಚ್ಚಲ ಸೀನಿಯರ್ ನ್ಯಾಶನಲ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಅದಕ್ಕೂ ಮೊದಲು ಜೂನಿಯರ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News