ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್; ಕಠಿಣ ಗುರಿ ಬೆನ್ನಟ್ಟಿದ ಬರೋಡ
ಹಾರ್ದಿಕ್ ಪಾಂಡ್ಯ |Photo Credit : PTI
ಹೊಸದಿಲ್ಲಿ, ಡಿ.2: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಗ್ರೂಪ್ ಹಂತದ ಪಂದ್ಯದಲ್ಲಿ ಅಜೇಯ ಅರ್ಧಶತಕವನ್ನು ಸಿಡಿಸುವ ಮೂಲಕ ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಿದ್ದಲ್ಲದೆ, ಪಂಜಾಬ್ ತಂಡದ ವಿರುದ್ಧ ಬರೋಡ ತಂಡಕ್ಕೆ ಏಳು ವಿಕೆಟ್ ಗಳ ರೋಚಕ ಜಯ ತಂದುಕೊಟ್ಟಿದ್ದಾರೆ.
ಸೆಪ್ಟಂಬರ್ ನಲ್ಲಿ ಏಶ್ಯ ಕಪ್ ನಂತರ ತನ್ನ ಮೊದಲ ಪಂದ್ಯವನ್ನು ಆಡಿರುವ ಪಾಂಡ್ಯ ಅವರು 42 ಎಸೆತಗಳಲ್ಲಿ 7 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ಸಹಿತ ಔಟಾಗದೆ 77 ರನ್ ಗಳಿಸಿ ಬರೋಡ ತಂಡವು 223 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡುವಲ್ಲಿ ನೆರವಾದರು. ಬರೋಡಾ ತಂಡವು ಪಂದ್ಯಾವಳಿಯ ಇತಿಹಾಸದಲ್ಲಿ ಮೂರನೇ ಗರಿಷ್ಠ ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದೆ.
ಒತ್ತಡವನ್ನು ಮೀರಿ ಆಡಿದ ಪಾಂಡ್ಯ ಅವರು ಸತತ ಮೂರು ಸಿಕ್ಸರ್ ಗಳನ್ನು ಸಿಡಿಸಿ ಬರೋಡ ತಂಡಕ್ಕೆ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.
32ರ ವಯಸ್ಸಿನ ಪಾಂಡ್ಯ ತನ್ನ ನಾಲ್ಕು ಓವರ್ ಗಳ ಸ್ಪೆಲ್‌ನಲ್ಲಿ ಒಂದು ವಿಕೆಟ್‌ನ್ನು ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು ಅನ್ಮೋಲ್ ಪ್ರೀತ್ ಸಿಂಗ್(69 ರನ್, 32 ಎಸೆತ)ಹಾಗೂ ಅಭಿಷೇಕ್ ಶರ್ಮಾ(50 ರನ್, 19 ಎಸೆತ)ಅರ್ಧಶತಕಗಳ ಕೊಡುಗೆ ಸಹಾಯದಿಂದ 8 ವಿಕೆಟ್‌ಗಳ ನಷ್ಟಕ್ಕೆ 222 ರನ್ ಗಳಿಸಿತು.
ಪಾಕಿಸ್ತಾನ ವಿರುದ್ಧ ಏಶ್ಯ ಕಪ್ ಫೈನಲ್ ಹಾಗೂ ಆಸ್ಟ್ರೇಲಿಯ ಪ್ರವಾಸದಿಂದ ಹೊರಗುಳಿಯಲು ಕಾರಣವಾಗಿದ್ದ ಗಾಯದ ಸಮಸ್ಯೆಯಿಂದ ಪಾಂಡ್ಯ ಇದೀಗ ಹೊರ ಬಂದಂತೆ ಕಂಡುಬಂದಿದ್ದಾರೆ.