×
Ad

ಅಶ್ವಿನ್ ದಿಢೀರ್ ನಿವೃತ್ತಿಗೆ ಕೋಚ್ ಗೌತಮ್ ಗಂಭೀರ್ ನಿರ್ಧಾರ ಪರಿಣಾಮ ಬೀರಿತೇ?

Update: 2024-12-19 21:42 IST

ರವಿಚಂದ್ರನ್ ಅಶ್ವಿನ್ | PTI

ಮುಂಬೈ: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯವನ್ನು ಡ್ರಾಕ್ಕೆ ಹಿಡಿದಿಡಲು ಪಟ್ಟ ಪರಿಶ್ರಮ ಕೊನೆಗೂ ಫಲ ನೀಡಿದಾಗ ಭಾರತೀಯ ಪಾಳಯದಲ್ಲಿ ತೃಪ್ತಿಯ ಭಾವ ತುಂಬಿತ್ತು. ಆದರೆ, ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮಧ್ಯದಲ್ಲೇ ನಿವೃತ್ತಿಯಾಗಲು ರವಿಚಂದ್ರನ್ ಅಶ್ವಿನ್ ತೆಗೆದುಕೊಂಡ ನಿರ್ಧಾರದಿಂದ ಪ್ರತಿಯೊಬ್ಬರೂ ಆಘಾತಗೊಂಡಿದ್ದರು.

ಸರಣಿಯ ಮೂರನೇ ಟೆಸ್ಟ್ ಬುಧವಾರ ಮುಕ್ತಾಯಗೊಂಡ ಬೆನ್ನಲ್ಲೇ ಅಶ್ವಿನ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಅವರ ನಿವೃತ್ತಿಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಅಶ್ವಿನ್ ಕಾಣಿಸಿಕೊಂಡರು. ಆ ಪತ್ರಿಕಾಗೋಷ್ಠಿಯಲ್ಲಿ ಅವರು ತನ್ನ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಆದರೆ, ಯಾವುದೇ ಪ್ರಶ್ನೆಗಳನ್ನು ಸ್ವೀಕರಿಸಲಿಲ್ಲ.

ಅಶ್ವಿನ್‌ರ ನಿವೃತ್ತಿ ನಿರ್ಧಾರವು ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳಿಗೆ ಆಘಾತವನ್ನುಂಟುಮಾಡಿದರೂ, ಎಲ್ಲವೂ ಸರಿಯಾಗಿಲ್ಲ ಎನ್ನುವುದು ಕ್ರಿಕೆಟ್ ಮೈದಾನದಲ್ಲಿ ಅಶ್ವಿನ್‌ರನ್ನು ಹತ್ತಿರದಿಂದ ಗಮನಿಸಿದವರಿಗೆ ಗೊತ್ತಿತ್ತು. ಬಾರ್ಡರ್-ಗವಾಸ್ಕರ್ ಟ್ರೋಫಿಯ ಮಧ್ಯದಲ್ಲೇ ನಿವೃತ್ತಿಯಾಗಲು ಅಶ್ವಿನ್ ತೆಗೆದುಕೊಂಡ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿಯೊಂದನ್ನು ಪ್ರಕಟಿಸಿದೆ. ಅವರ ನಿರ್ಧಾರದಲ್ಲಿ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ವಹಿಸಿದ ಪಾತ್ರದ ಬಗ್ಗೆಯೂ ಉಲ್ಲೇಖವಿದೆ.

ಅವರ ನಿರ್ಧಾರದಲ್ಲಿ ಪಾತ್ರ ವಹಿಸಿರಬಹುದು ಎನ್ನಲಾದ ಕೆಲವು ಅಂಶಗಳು ಇಲ್ಲಿವೆ.

ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಖಾತರಿ ಇಲ್ಲದಿದ್ದರೆ, ಆಸ್ಟ್ರೇಲಿಯಕ್ಕೆ ಪ್ರಯಾಣಿಸಲು ಆರ್. ಅಶ್ವಿನ್ ಉತ್ಸುಕರಾಗಿರಲಿಲ್ಲ. ರೋಹಿತ್ ಶರ್ಮಾ ಬಳಗದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಝಿಲ್ಯಾಂಡ್ 3-0 ಅಂತರದಿಂದ ಕ್ಲೀನಸ್ವೀಪ್ ಮಾಡಿದಾಗ, ತಂಡದಲ್ಲಿನ ತನ್ನ ಭವಿಷ್ಯದ ಬಗ್ಗೆ ಯೋಚಿಸಲು ಅಶ್ವಿನ್ ಆರಂಭಿಸಿದ್ದರು. ಆಸ್ಟ್ರೇಲಿಯ ಪ್ರವಾಸದಲ್ಲಿ, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಬಗ್ಗೆ ಖಾತರಿಯನ್ನೂ ಅವರು ಆಯ್ಕೆಗಾರರಿಂದ ಕೇಳಿದ್ದರು. ಅವರಿಗೆ ಕೆಲವೊಂದು ಖಾತರಿಗಳನ್ನು ನೀಡಲಾಗಿತ್ತು ಎನ್ನಲಾಗಿದೆ. ಆದರೆ ರವೀಂದ್ರ ಜಡೇಜ ಜೊತೆಗೆ ವಾಶಿಂಗ್ಟನ್ ಸುಂದರ್‌ರನ್ನೂ ಮೂರನೇ ಸ್ಪಿನ್ನರ್ ಆಯ್ಕೆ ಮಾಡಲಾಗಿತ್ತು.

ಪರ್ತ್ ಟೆಸ್ಟ್‌ನಲ್ಲಿ ಅಶ್ವಿನ್ ಬದಲಿಗೆ ವಾಶಿಂಗ್ಟನ್ ಸುಂದರ್‌ರನ್ನು ಮೈದಾನಕ್ಕೆ ಇಳಿಸಲಾಗಿತ್ತು. ಅದು ಅಶ್ವಿನ್ ಅನುಭವಿಸಿದ ಮೊದಲ ಹಿನ್ನಡೆಯಾಗಿತ್ತು. ತನ್ನಷ್ಟೇ ನಿರ್ವಹಣೆಯನ್ನು ನೀಡಿರುವ ಸುಂದರ್‌ರನ್ನು ಆಡುವ ಹನ್ನೊಂದರ ಬಳಗಕ್ಕೆ ಆಯ್ಕೆ ಮಾಡಿದ್ದರಿಂದ ಹಿರಿಯ ಆಫ್ ಸ್ಪಿನ್ನರ್ ನೊಂದುಕೊಂಡಿದ್ದರೆನ್ನಲಾಗಿದೆ. ಹಾಗಾಗಿ, ಸರಣಿಯ ಕೊನೆಯವರೆಗೂ ತಾನು ತಂಡದಲ್ಲಿ ಮುಂದುವರಿಯಬೇಕೇ ಎಂಬ ಬಗ್ಗೆ ಯೋಚಿಸಿದ್ದರು ಎನ್ನಲಾಗಿದೆ.

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಸ್ಥಾನ ನೀಡಿದ ರೋಹಿತ್:

ಅಶ್ವಿನ್ ತನ್ನ ಪರಿಸ್ಥಿತಿಯ ಬಗ್ಗೆ ನಾಯಕ ರೋಹಿತ್ ಶರ್ಮಾ ಜೊತೆಗೆ ಮಾತನಾಡಿದ್ದಾರೆ. ತಂಡಕ್ಕೆ ತನ್ನ ಸೇವೆಯ ಅಗತ್ಯ ಇಲ್ಲದಿರುವುದರಿಂದ ನಿವೃತ್ತಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಸರಣಿಯ ಎರಡನೇ ಪಿಂಕ್-ಬಾಲ್ ಟೆಸ್ಟ್ (ಹಗಲು-ರಾತ್ರಿ ಪಂದ್ಯದಲ್ಲಿ ಕೆಂಪು ಚೆಂಡಿನ ಬದಲಿಗೆ ಬಳಸುವ ಗುಲಾಬಿ ಬಣ್ಣದ ಚೆಂಡು)ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಕಲ್ಪಿಸುವ ಭರವಸೆಯನ್ನು ಶರ್ಮ ನೀಡಿದ್ದರು. ತನ್ನ ಭರವಸೆಯನ್ನು ರೋಹಿತ್ ಶರ್ಮಾ ನೆರವೇರಿಸಿದರು ಕೂಡ.

ಆದರೆ, ಮೂರನೇ ಟೆಸ್ಟ್‌ನಲ್ಲಿ ಅಶ್ವಿನ್‌ರನ್ನು ಹಿಂದೆ ಸರಿಸಿ ರವೀಂದ್ರ ಜಡೇಜ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರು. ಈ ಬೆಳವಣಿಗೆಯು ಮುಂದೆ ಏನು ಕಾದಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣವೊಂದನ್ನು ಅಶ್ವಿನ್‌ಗೆ ನೀಡಿತು. ಅಶ್ವಿನ್ ಅದಾಗಲೇ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದರು ಹಾಗೂ ಜಡೇಜರ ಆಯ್ಕೆಯು ಅದನ್ನು ಖಚಿತಪಡಿಸಿತು.

ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೇ?:

ಸಿಡ್ನಿ ಟೆಸ್ಟ್‌ಗೆ ತಂಡವು ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವ ದೊಡ್ಡ ಸಾಧ್ಯತೆಯಿದ್ದರೂ, ಆಡುವ ಹನ್ನೊಂದರಲ್ಲಿ ತನಗೆ ಸ್ಥಾನ ಸಿಗುವುದಿಲ್ಲ ಎನ್ನುವುದನ್ನು ಅಶ್ವಿನ್ ತಿಳಿದುಕೊಂಡಿದ್ದರು. ಪ್ರಸಕ್ತ ಆಯ್ಕೆ ಕ್ರಮಾಂಕದಲ್ಲಿ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ. ಸುಂದರ್ ಮತ್ತು ಜಡೇಜ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಅದು ತಂಡದಲ್ಲಿ ಅಶ್ವಿನ್‌ರ ಭವಿಷ್ಯವನ್ನು ಸ್ಪಷ್ಟವಾಗಿ ನುಡಿದಿತ್ತು.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ಗೆ ನಾಯಕ ರೋಹಿತ್ ಲಭ್ಯರಿರಲಿಲ್ಲ. ಭಾರತದ ಮೊದಲ ಆಯ್ಕೆಯ ಸ್ಪಿನ್ನರ್‌ಗೆ ಅವಕಾಶವಿದೆ ಎಂಬುದಾಗಿ ಪ್ರಧಾನ ಕೋಚ್ ಗೌತಮ್ ಗಂಭೀರ್ ಅಂದು ಘೋಷಿಸಿದ್ದರು. ಆ ಸ್ಪಿನ್ನರ್ ತಾನಲ್ಲ ಎನ್ನುವುದು ಅಶ್ವಿನ್‌ಗೆ ತಿಳಿಯಿತು.

ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರವನ್ನು ಸಂಪೂರ್ಣಗೊಳಿಸಲು ತನಗೆ ಸಾಧ್ಯವಾಗದು ಎನ್ನುವುದು 537 ಟೆಸ್ಟ್ ವಿಕೆಟ್‌ಗಳನ್ನು ಪಡೆದಿರುವ 38 ವರ್ಷದ ಸ್ಪಿನ್ನರ್‌ಗೆ ತಿಳಿದಿತ್ತು. ಆ ಚಕ್ರವು 2027ರಲ್ಲಿ ಸಮಾಪ್ತಿಗೊಳ್ಳುತ್ತದೆ. ಹಾಲಿ ಚಕ್ರದ ಫೈನಲ್‌ನಲ್ಲಿ ಭಾರತವು ಕಷ್ಟಪಟ್ಟು ಸ್ಥಾನ ಪಡೆದರೂ, ಆಯ್ಕೆ ಕ್ರಮಾಂಕದಲ್ಲಿ ತಾನು ಎಷ್ಟು ಕೆಳಗೆ ಬಿದ್ದಿದ್ದೇನೆ ಎನ್ನುವುದು ಅಶ್ವಿನ್‌ಗೆ ಗೊತ್ತಿತ್ತು.

ಈ ಎಲ್ಲಾ ಅಂಶಗಳು ಅಂತಿಮವಾಗಿ ಅಶ್ವಿನ್‌ರ ನಿವೃತ್ತಿ ನಿರ್ಧಾರದ ಮೇಲೆ ಪರಿಣಾಮ ಬೀರಿದವು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News