×
Ad

ಢಾಕಾದಲ್ಲಿ ಐತಿಹಾಸಿಕ ಕ್ಷಣ | ಬಾಂಗ್ಲಾ ವಿರುದ್ಧ 50 ಓವರ್ ಸ್ಪಿನ್ ಬೌಲಿಂಗ್ ಮಾಡಿದ ವೆಸ್ಟ್ ಇಂಡೀಸ್‌!

Update: 2025-10-21 20:17 IST

PC : Windies Cricket


ಢಾಕಾ, ಅ. 21: ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ನಲ್ಲಿ ಅಪರೂಪದ ಘಟನೆಯೊಂದು ದಾಖಲಾಗಿದ್ದು, ವೆಸ್ಟ್ ಇಂಡೀಸ್ ತಂಡವು ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸಂಪೂರ್ಣ 50 ಓವರ್‌ಗಳ ಬೌಲಿಂಗ್‌ ನಲ್ಲಿ ಕೇವಲ ಸ್ಪಿನ್ ಬೌಲರ್‌ಗಳನ್ನೇ ಬಳಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಈ ವಿಶಿಷ್ಟ ಸಾಧನೆಗೆ ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಕ್ಷಿಯಾಯಿತು.

ಮೂರು ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆಯಲ್ಲಿದ್ದ ವೆಸ್ಟ್ ಇಂಡೀಸ್ ತಂಡವು ಪಿಚ್‌ ನ ಗಮನಿಸಿ ಸಂಪೂರ್ಣ ಸ್ಪಿನ್ ಆಧಾರಿತ ತಂತ್ರವನ್ನು ಅಳವಡಿಸಿಕೊಂಡಿತು. ಅಕೇಲ್ ಹೊಸೇನ್, ರೋಸ್ಟನ್ ಚೇಸ್, ಗುಡಕೇಶ್ ಮೋಟೀ, ಖಾರಿ ಪಿಯರೆ ಮತ್ತು ಅಲಿಕ್ ಅಥಾನಾಝೆ ತಲಾ 10 ಓವರ್‌ ಸ್ಪಿನ್ ಬೌಲಿಂಗ್ ಮಾಡಿದರು.

2027ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ ಗೆ ನೇರ ಅರ್ಹತೆ ಪಡೆಯುವ ಗುರಿ ಹೊಂದಿರುವ ವೆಸ್ಟ್ ಇಂಡೀಸ್, ಮೊದಲ ಏಕದಿನ ಪಂದ್ಯದಲ್ಲಿಯೇ ಕಂಡಿದ್ದಂತೆಯೇ ಒಣ ಮತ್ತು ಬಿರುಕು ಬಿಟ್ಟ ಪಿಚ್‌ನಲ್ಲಿ ಈ ತಂತ್ರವನ್ನು ಪ್ರಯೋಗಿಸಿತು.

ಬಾಂಗ್ಲಾದೇಶವು ತನ್ನ 50 ಓವರ್‌ಗಳಲ್ಲಿ 213/7 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಸೌಮ್ಯ ಸರ್ಕಾರ್ 89 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 45 ರನ್ ಗಳಿಸಿ ಶ್ರೇಷ್ಠ ಪ್ರದರ್ಶನ ನೀಡಿದರು. ನಾಯಕ ಮೆಹಿದಿ ಹಸನ್ ಮಿರಾಜ್ (32 ನಾಟ್ ಔಟ್) ಮತ್ತು ರಿಷದ್ ಹೊಸೈನ್ (39 ನಾಟ್ ಔಟ್, 14 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್) ನಡುವಿನ ಏಳನೇ ವಿಕೆಟ್ ಜೊತೆಯಾಟ ತಂಡವನ್ನು 163/7ರಿಂದ ಕುಸಿಯುವುದರಿಂದ ಕಾಪಾಡಿದರು.

ವೆಸ್ಟ್ ಇಂಡೀಸ್ ಪರ ಗುಡಕೇಶ್ ಮೋಟೀ 10 ಓವರ್‌ ಗಳಲ್ಲಿ 3/65 ವಿಕೆಟ್ ಪಡೆದು ಮಿಂಚಿದರು. ಅಲಿಕ್ ಅಥಾನಾಜೆ 2/14 ಹಾಗೂ ಅಕೇಲ್ ಹೊಸೇನ್ 2/41 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.

ಮೊದಲ ಪಂದ್ಯದಲ್ಲಿ 208 ರನ್ ಗುರಿ ಬೆನ್ನಟ್ಟಿ ಕೇವಲ 133 ರನ್‌ಗಳಿಗೆ ಆಲೌಟ್ ಆಗಿದ್ದ ವೆಸ್ಟ್ ಇಂಡೀಸ್, ಈ ಬಾರಿ ವಿಶಿಷ್ಟ ಸ್ಪಿನ್ ತಂತ್ರದ ಮೂಲಕ ಪುನಃ ಆತ್ಮವಿಶ್ವಾಸ ತುಂಬಿಕೊಳ್ಳಲು ಪ್ರಯತ್ನಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News