IPL 2025 | ಭರ್ಜರಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಕಿʼಶಾನ್ʼ; ಆರ್ ಸಿ ಬಿ ಗೆ ಸೋಲು
pc : x/SunRisers
ಲಕ್ನೊ: ಎಡಗೈ ಬ್ಯಾಟರ್ ಇಶಾನ್ ಕಿಶನ್(94 ರನ್, 48 ಎಸೆತ, 7 ಬೌಂಡರಿ,5 ಸಿಕ್ಸರ್)ಭರ್ಜರಿ ಬ್ಯಾಟಿಂಗ್ ಹಾಗೂ ಪ್ಯಾಟ್ ಕಮಿನ್ಸ್ (3-28)ನೇತೃತ್ವದಲ್ಲಿ ಬೌಲರ್ ಗಳ ಕರಾರುವಾಕ್ ಬೌಲಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 42 ರನ್ ಗಳ ಅಂತರದಿಂದ ಮಣಿಸಿದೆ.
ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಎಸ್ ಆರ್ ಎಚ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 231 ರನ್ ಗಳಿಸಿತು. ಗೆಲ್ಲಲು 232 ರನ್ ಗುರಿ ಬೆನ್ನಟ್ಟಿದ ಆರ್ ಸಿ ಬಿ 19.5 ಓವರ್ ಗಳಲ್ಲಿ 189 ರನ್ ಗಳಿಸಿ ಆಲೌಟಾಯಿತು.
ಇನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ (62 ರನ್, 32 ಎಸೆತ, 4 ಬೌಂಡರಿ, 5 ಸಿಕ್ಸರ್)ಹಾಗೂ ವಿರಾಟ್ ಕೊಹ್ಲಿ(43 ರನ್, 25 ಎಸೆತ, 7 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್ ಗೆ 7 ಓವರ್ ಗಳಲ್ಲಿ 80 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
ಆದರೆ ಈ ಇಬ್ಬರು ಬೇರ್ಪಟ್ಟ ನಂತರ ಆರ್ ಸಿ ಬಿ ಹಿನ್ನಡೆ ಕಂಡಿತು. ಜಿತೇಶ್ ಶರ್ಮಾ(24 ರನ್), ರಜತ್ ಪಾಟಿದಾರ್(18 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಹೈದರಾಬಾದ್ ಪರ ಇಶಾನ್ ಮಾಲಿಂಗ(2-37) ಹಾಗೂ ಕಮಿನ್ಸ್(3-28) ಐದು ವಿಕೆಟ್ ಗಳನ್ನು ಹಂಚಿಕೊಂಡರು.
ಇದಕ್ಕೂ ಮೊದಲು ಎಸ್ ಆರ್ ಎಚ್ ಮೊದಲ 12 ಓವರ್ ಗಳಲ್ಲಿ 147 ರನ್ ಗಳಿಸಿತು. ಮುಂದಿನ 5 ಓವರ್ ಗಳಲ್ಲಿ ಕೇವಲ 41 ರನ್ ಗಳಿಸಿತು. ಆದರೆ ಕೊನೆಯ 3 ಓವರ್ ಗಳಲ್ಲಿ 43 ರನ್ ಕಲೆ ಹಾಕಿ ಆರ್ ಸಿ ಬಿ ಗೆಲುವಿಗೆ ಕಠಿಣ ಗುರಿ ನೀಡಿತು. ಕಿಶನ್ 195.83ರ ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿ ಔಟಾಗದೆ 94 ರನ್ ಗಳಿಸಿದರು. ಟ್ರಾವಿಸ್ ಹೆಡ್(17 ರನ್) ಹಾಗೂ ಅಭಿಷೇಕ್ ಶರ್ಮಾ(34 ರನ್,17 ಎಸೆತ) ಮೊದಲ 4 ಓವರ್ ಗಳಲ್ಲಿ 54 ರನ್ ಸೇರಿಸಿ ಹೈದರಾಬಾದ್ ತಂಡದ ದೊಡ್ಡ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಈ ಇಬ್ಬರು ಆಟಗಾರರು ಉತ್ತಮ ಆರಂಭವನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲ.
ಜವಾಬ್ದಾರಿಯುತವಾಗಿ ಆಡಿದ ಕಿಶನ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ತಲುಪಿಸಿದರು. ಹೆನ್ರಿಕ್ ಕ್ಲಾಸೆನ್ ಹಾಗೂ ಅನಿಕೇತ್ ಅವರು ರನ್ ವೇಗ ಕಾಯ್ದುಕೊಳ್ಳಲು ನೆರವಾದರು.
ಕಿಶನ್ 4 ಬೌಂಡರಿ, 2 ಸಿಕ್ಸರ್ ಗಳ ಸಹಾಯದಿಂದ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕ್ಲಾಸೆನ್ ಜೊತೆ 3ನೇ ವಿಕೆಟ್ ಗೆ 48 ರನ್ ಹಾಗೂ ಅನಿಕೇಶ್ ವರ್ಮಾ ಅವರೊಂದಿಗೆ 4ನೇ ವಿಕೆಟ್ ಗೆ 43 ರನ್ ಸೇರಿಸಿ ತಂಡದ ಮೊತ್ತವನ್ನು 230ರ ಗಡಿ ದಾಟಿಸಿದರು.
ಅನಿಕೇತ್ ವರ್ಮಾ(26 ರನ್), ಹೆನ್ರಿಕ್ ಕ್ಲಾಸೆನ್(24 ರನ್) ಹಾಗೂ ನಾಯಕ ಪ್ಯಾಟ್ ಕಮಿನ್ಸ್(ಔಟಾಗದೆ 13)ಎರಡಂಕೆಯ ಸ್ಕೋರ್ ಗಳಿಸಿದರು.
ರೊಮಾರಿಯೊ ಶೆಫರ್ಡ್(2-14)ಯಶಸ್ವಿ ಬೌಲರ್ ಎನಿಸಿಕೊಂಡರು. ಕೃನಾಲ್ ಪಾಂಡ್ಯ(1-38), ಭುವನೇಶ್ವರ ಕುಮಾರ್(1-43), ಸುಯಶ್ ಶರ್ಮಾ(1-45)ಹಾಗೂ ಲುಂಗಿಗಿಡಿ(1-51)ತಲಾ ಒಂದು ವಿಕೆಟ್ ಪಡೆದರು.