"ನನಗೆ ಜೀವ ಬೆದರಿಕೆ ಇದೆ": ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘದ ಅಧ್ಯಕ್ಷ ಮುಹಮ್ಮದ್ ಮಿತುನ್
Photo Credit : X
ಢಾಕಾ,ಜ.16: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಅವಹೇಳನಕಾರಿ ಹೇಳಿಕೆ ನೀಡಿದ ನಂತರ ಆಟಗಾರರ ಪರವಾಗಿ ಮಾತನಾಡಿದ್ದಕ್ಕೆ ತನಗೆ ಜೀವ ಬೆದರಿಕೆ ಬಂದಿದೆ ಎಂದು ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘದ ಅಧ್ಯಕ್ಷ ಮುಹಮ್ಮದ್ ಮಿತುನ್ ಬಹಿರಂಗಪಡಿಸಿದ್ದಾರೆ.
‘‘ಮುಂದಿನ ತಿಂಗಳು ಟಿ-20 ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಕಾರಣ ಆಟಗಾರರ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿ ಒಂದು ನಿಲುವಿಗೆ ಬಂದಿದ್ದೇನೆ. ನನಗೆ ಈ ರೀತಿಯ ಅನುಭವ ಎಂದಿಗೂ ಆಗಿಲ್ಲ. ನನ್ನ ಜೀವನದಲ್ಲಿ ಮೊದಲ ಬಾರಿ ಇದು ಆಗಿದೆ. ನಾನು ದೇಶದ ವಿರುದ್ಧ ಯಾವುದೇ ಪದ ಬಳಸಿಲ್ಲ. ನಾನು ಕ್ರಿಕೆಟ್ ಹಾಗೂ ಆಟಗಾರರ ಹಿತಾಸಕ್ತಿಗಾಗಿ ಮಾತ್ರ ಮಾತನಾಡಿದ್ದೇನೆ. ನಾನು ಒಂದು ಸಂಸ್ಥೆಯ ಅಧ್ಯಕ್ಷನಾಗಿರುವುದರಿಂದ ಆಟಗಾರರ ಹಕ್ಕುಗಳ ಬಗ್ಗೆ ಮಾತನಾಡದಿದ್ದರೆ ಆ ಸ್ಥಾನದಲ್ಲಿರುವುದರ ಅರ್ಥವೇನು? ಯಾರೂ ಕೂಡ ದೇಶಕ್ಕಿಂತ ದೊಡ್ಡವರಲ್ಲ’’ ಎಂದು ಮಿತುನ್ ಹೇಳಿದರು.
‘‘ನಾನು ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿಲ್ಲ. ನನ್ನ ಮೊಬೈಲ್‌ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಆದರೆ ವಾಟ್ಸ್ಯಾಪ್‌ನಲ್ಲಿ ಸಂದೇಶಗಳು ಅಥವಾ ಧ್ವನಿ ಟಿಪ್ಪಣಿಗಳನ್ನು ನಿಲ್ಲಿಸಲು ನನಗೆ ಸಾಧ್ಯವಿಲ್ಲ’’ಎಂದು ಮಿತುನ್ ಹೇಳಿದರು.
ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಆಟಗಾರರ ಭಾಗವಹಿಸುವಿಕೆಯ ಬಗ್ಗೆ ಮಾತನಾಡಿದ ಮಿತುನ್, ‘‘ನಾವು ಖಂಡಿತವಾಗಿಯೂ ಆಟಗಾರರ ಸುರಕ್ಷತೆ ಹಾಗೂ ಭದ್ರತೆಯನ್ನು ಬಯಸುತ್ತೇವೆ. ಜೀವ ಬೆದರಿಕೆಯಡಿಯಲ್ಲಿ ಯಾರೂ ಹೋಗಿ ಆಡುವುದನ್ನು ಎಂದಿಗೂ ಬಯಸುವುದಿಲ್ಲ. ಇದು ವಿಶ್ವಕಪ್ ಟೂರ್ನಿ ಆಗಿರುವುದರಿಂದ ಆಟಗಾರರು ಇದರಲ್ಲಿ ಆಡಬೇಕೆಂದು ನಾವು ಇಷ್ಟಪಡುತ್ತೇವೆ. ಆಟಗಾರರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟ್ ಮಂಡಳಿ ಹಾಗೂ ಸರಕಾರ ನಿರ್ಧಾರ ತೆಗೆದುಕೊಳ್ಳುತ್ತದೆ’’ ಎಂದು ಮಿತುನ್ ಅಭಿಪ್ರಾಯಪಟ್ಟರು.