ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ
PC : ICC
ದುಬೈ: ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಜೂನ್ 11ರಿಂದ ಆರಂಭವಾಗಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್(ಡಬ್ಲ್ಯುಟಿಸಿ)ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಫೈನಲ್ ಪಂದ್ಯಕ್ಕಿಂತ ಮೊದಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಟೆಸ್ಟ್ ಕ್ರಿಕೆಟ್‌ನ ಅತಿ ದೊಡ್ಡ ಸ್ಪರ್ಧೆಗೆ ಬಹುಮಾನ ಮೊತ್ತವನ್ನು ಪ್ರಕಟಿಸಿದೆ. ಡಬ್ಲ್ಯುಟಿಸಿ 2023-25ರ ಫೈನಲ್ ಗೆ ಒಟ್ಟು ಬಹುಮಾನ ಮೊತ್ತ 5.76 ಮಿಲಿಯನ್(49.28 ಕೋ.ರೂ.)ನಿಗದಿಪಡಿಸಲಾಗಿದ್ದು, ಇದು ಕಳೆದ ಎರಡು ಆವೃತ್ತಿಯ ಟೂರ್ನಿಗಳಿಗಿಂತ ಎರಡು ಪಟ್ಟು ಹೆಚ್ಚು.
ಚಾಂಪಿಯನ್ ತಂಡವು 3.6 ಮಿಲಿಯನ್ ಯುಎಸ್ ಡಾಲರ್(30.80 ಕೋ.ರೂ.)ಗೆಲ್ಲಲಿದೆ. ರನ್ನರ್ಸ್ ಅಪ್ 2.16 ಮಿಲಿಯನ್ ಯುಎಸ್ ಡಾಲರ್(18.48 ಕೋ.ರೂ.)ಗೆಲ್ಲಲಿದೆ.
2021 ಹಾಗೂ 2023ರ ಚಾಂಪಿಯನ್ ಶಿಪ್ ವಿಜೇತ ತಂಡಕ್ಕೆ 1.6 ಮಿಲಿಯನ್ ಡಾಲರ್ ಬಹುಮಾನ ನೀಡಲಾಗಿತ್ತು. ರನ್ನರ್ಸ್ ಅಪ್ ಗೆ 800,000 ಡಾಲರ್ ಬಹುಮಾನ ನೀಡಲಾಗಿತ್ತು.
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿರುವ ಭಾರತ ತಂಡವು 1.44 ಮಿಲಿಯನ್ ಯು.ಎಸ್. ಡಾಲರ್(12.32 ಕೋ.ರೂ.)ಬಹುಮಾನ ಮೊತ್ತ ಸ್ವೀಕರಿಸಲಿದೆ.
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವು ಫೈನಲ್ ನಲ್ಲಿ ಸ್ಥಾನ ಪಡೆದ ಮೊದಲ ತಂಡ ಎನಿಸಿಕೊಂಡಿತ್ತು. ಪಾಕಿಸ್ತಾನ, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಜಯ ಸಾಧಿಸಿದ್ದಲ್ಲದೆ, ಭಾರತ ವಿರುದ್ದ ಸ್ವದೇಶದಲ್ಲಿ ನಡೆದಿದ್ದ ಸರಣಿಯನ್ನು ಡ್ರಾಗೊಳಿಸಿತ್ತು.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ವಿರುದ್ಧ 3-1 ಅಂತರದಿಂದ ಜಯಶಾಲಿಯಾದ ನಂತರ ಆಸ್ಟ್ರೇಲಿಯ ತಂಡವು ಡಬ್ಲ್ಯುಟಿಸಿ ಫೈನಲ್ ಗೆ ತಲುಪಿತ್ತು.