ಟೆಸ್ಟ್ ಪಂದ್ಯಗಳಿಗೆ ಸ್ಟಾಪ್ ಕ್ಲಾಕ್ ಪರಿಚಯಿಸಿದ ಐಸಿಸಿ!
PC : ICC
ನಿಮಿಷದೊಳಗೆ ಹೊಸ ಓವರ್ ಆರಂಭಿಸಬೇಕು; ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭದಿಂದ ಜಾರಿ
ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಟೆಸ್ಟ್ ಪಂದ್ಯಗಳಿಗೆ ಸ್ಟಾಪ್ ಕ್ಲಾಕ್ ಒಂದನ್ನು ಪರಿಚಯಿಸಿದೆ. ಈ ನಿಯಮವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ) ಚಕ್ರದ ಆರಂಭದಿಂದ ಜಾರಿಗೆ ಬಂದಿದೆ.
ಈ ನಿಯಮದ ಪ್ರಕಾರ, ಫೀಲ್ಡಿಂಗ್ ಮಾಡುವ ತಂಡವು ಹಿಂದಿನ ಓವರ್ ಮುಗಿದ ಬಳಿಕ ಒಂದು ನಿಮಿಷದಲ್ಲಿ ಮುಂದಿನ ಓವರನ್ನು ಆರಂಭಿಸಬೇಕು. ಈ ನಿಯಮದ ಉಲ್ಲಂಘನೆಯಾದರೆ, ಫೀಲ್ಡಿಂಗ್ ಮಾಡುವ ತಂಡಕ್ಕೆ ಎರಡು ಎಚ್ಚರಿಕೆಗಳನ್ನು ನೀಡಲಾಗುವುದು. ಆ ಬಳಿಕ, ಅಂದರೆ ಮೂರನೇ ಉಲ್ಲಂಘನೆಯಿಂದ ಪ್ರತೀ ಉಲ್ಲಂಘನೆಗೆ ಬ್ಯಾಟಿಂಗ್ ಮಾಡುವ ತಂಡಕ್ಕೆ ಐದು ರನ್‌ಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಪ್ರತಿ 80 ಓವರ್ ಗಳಿಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುವುದು.
ಸ್ಟಾಪ್ ಕ್ಲಾಕ್ ನಿಯಮವು ಐಸಿಸಿಯ ಪೂರ್ಣ ಸದಸ್ಯರು ಆಡುವ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಈಗಾಗಲೇ 2024 ಜೂನ್ ಒಂದರಿಂದ ಜಾರಿಗೆ ಬಂದಿದೆ.
ಕ್ರಿಕೆಟ್ ನ ಮೂರೂ ಮಾದರಿಗಳಿಗೆ ಅನ್ವಯವಾಗುವ ಇತರ ಕೆಲವು ನಿಯಮಗಳು ಇಲ್ಲಿವೆ:
►ಜೊಲ್ಲು ಇದ್ದರೆ ಚೆಂಡನ್ನು ಬದಲಾಯಿಸಬೇಕೆಂದಿಲ್ಲ
ಚೆಂಡಿನಲ್ಲಿ ಜೊಲ್ಲು ಕಂಡು ಬಂದರೆ ಅಂಪಯರ್ ಗಳು ಚೆಂಡನ್ನು ಬದಲಾಯಿಸಲೇ ಬೇಕೆಂದೇನೂ ಇಲ್ಲ. ಆದಾಗ್ಯೂ, ಚೆಂಡಿಗೆ ಜೊಲ್ಲು ಹಚ್ಚುವುದನ್ನು ನಿಷೇಧಿಸುವ ನಿಯಮ ಮುಂದುವರಿಯುತ್ತದೆ. ಬೌಲಿಂಗ್ ಮಾಡುವ ತಂಡವು ಚೆಂಡನ್ನು ಬದಲಾಯಿಸಬೇಕೆಂಬ ಉದ್ದೇಶದಿಂದ ಚೆಂಡಿಗೆ ಉದ್ದೇಶಪೂರ್ವಕವಾಗಿ ಜೊಲ್ಲು ಹಚ್ಚುವ ಸಾಧ್ಯತೆಯನ್ನು ತಡೆಗಟ್ಟಲು ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ.
ಚೆಂಡನ್ನು ಬದಲಾಯಿಸುವುದನ್ನು ಅಂಪಯರ್ ಗಳ ವಿವೇಚನೆಗೆ ಬಿಡಲಾಗಿದೆಯಾದರೂ, ಚೆಂಡಿನ ಪರಿಸ್ಥಿತಿಯು ಗಮನಾರ್ಹವಾಗಿ ಬದಲಾದರೆ ಮಾತ್ರ ಅದನ್ನು ಬದಲಾಯಿಸಬಹುದಾಗಿದೆ.
►ಉದ್ದೇಶಪೂರ್ವಕ ಶಾರ್ಟ್ ರನ್
ಉದ್ದೇಶಪೂರ್ವಕವಾಗಿ ಹೆಚ್ಚುವರಿ ರನ್ ಶಾರ್ಟ್ ರನ್ ಆದರೆ, ಐದು ರನ್‌ಗಳ ದಂಡ ವಿಧಿಸುವ ನಿಯಮ ಚಾಲ್ತಿಯಲ್ಲಿರುವಂತೆಯೇ, ಪರಿಷ್ಕೃತ ನಿಯಮಗಳು, ಇಂಥ ಸಂದರ್ಭದಲ್ಲಿ ಯಾವ ಬ್ಯಾಟರ್ ಸ್ಟ್ರೈಕ್ ನಲ್ಲಿರಬೇಕು ಎನ್ನುವುದನ್ನು ಫೀಲ್ಡಿಂಗ್ ತಂಡವು ನಿರ್ಧರಿಸಬಹುದಾಗಿದೆ.