ನಾಲ್ಕನೇ ಆ್ಯಶಸ್ ಟೆಸ್ಟ್‌ಗೆ ಬಳಸಲಾದ ಪಿಚ್ ‘ಅತೃಪ್ತಿಕರ’: ಐಸಿಸಿ
Photo Credit : AP \ ICC
ಮೆಲ್ಬರ್ನ್, ಡಿ.29: ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ ಬಳಸಲಾಗಿರುವ ಪಿಚ್ ‘ಅತೃಪ್ತಿಕರ’ವಾಗಿತ್ತು ಎಂದು ಐಸಿಸಿ ಸೋಮವಾರ ತಿಳಿಸಿದೆ. ಈ ಮೈದಾನಕ್ಕೆ ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.
ಪಿಚ್ ‘ಬೌಲರ್‌ಗಳಿಗೆ ತುಂಬಾ ಅನುಕೂಲಕರವಾಗಿತ್ತು’ಎಂದು ಮ್ಯಾಚ್ ರೆಫರಿ ಜೆಫ್ ಕ್ರೋವ್ ವೌಲ್ಯಮಾಪನ ನಡೆಸಿದ ನಂತರ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಇಂಗ್ಲೆಂಡ್ ತಂಡ ನಾಲ್ಕನೇ ಟೆಸ್ಟ್ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಪಂದ್ಯವು ಎರಡೇ ದಿನಗಳಲ್ಲಿ ಮುಕ್ತಾಯವಾಗಿತ್ತು. ಟೆಸ್ಟ್‌ನ ಮೊದಲ ದಿನ 20 ವಿಕೆಟ್‌ಗಳನ್ನು ಪತನಗೊಂಡಿದ್ದವು.
ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯ ನಡೆದ ಮೆಲ್ಬರ್ನ್ ಕ್ರಿಕೆಟ್ ಮೈದಾನದ ಪಿಚ್ ಅನ್ನು ‘ಅತೃಪ್ತಿಕರ’ಎಂದು ಪರಿಗಣಿಸಲಾಗಿದೆ. ಐಸಿಸಿ ಪಿಚ್ ಹಾಗೂ ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಕ್ರಿಯೆಯ ಅಡಿಯಲ್ಲಿ ಈ ಮೈದಾನಕ್ಕೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ಎಂಸಿಜಿ ಪಿಚ್ ಬೌಲರ್‌ಗಳಿಗೆ ಹೆಚ್ಚು ಅನುಕೂಲಕರವಾಗಿತ್ತು. ಮೊದಲ ದಿನ 20 ವಿಕೆಟ್‌ಗಳು ಹಾಗೂ ಎರಡನೇ ದಿನ 16 ವಿಕೆಟ್‌ಗಳು ಪತನಗೊಂಡಿದ್ದವು. ಯಾವುದೇ ಬ್ಯಾಟರ್ ಅರ್ಧಶತಕವನ್ನೂ ತಲುಪಲಿಲ್ಲ. ಮಾರ್ಗಸೂಚಿಗಳ ಪ್ರಕಾರ ಪಿಚ್ ‘ಅತೃಪ್ತಿಕರ’ವಾಗಿತ್ತು. ಎಂಸಿಜಿ ಮೈದಾನಕ್ಕೆ ಒಂದು ಡಿಮೆರಿಟ್ ಅಂಕ ನೀಡಲಾಗಿದೆ’’ಎಂದು ಮ್ಯಾಚ್ ರೆಫರಿ ಜೆಫ್ ಕ್ರೋವ್ ಹೇಳಿದ್ದಾರೆ.
ಐಸಿಸಿ ನಿಯಮಗಳ ಪ್ರಕಾರ ಪಿಚ್‌ಗಳಿಗೆ ತುಂಬಾ ಚೆನ್ನಾಗಿದೆ, ತೃಪ್ತಿದಾಯಕ, ಅತೃಪ್ತಿಕರ ಅಥವಾ ಅನರ್ಹ ಎಂದು ರೇಟಿಂಗ್ ನೀಡಲಾಗುತ್ತದೆ. ಒಂದು ಮೈದಾನವು ಐದು ವರ್ಷಗಳ ಅವಧಿಯಲ್ಲಿ ಆರು ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಅದು ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದರಿಂದ 12 ತಿಂಗಳ ನಿಷೇಧವನ್ನು ಎದುರಿಸಬೇಕಾಗುತ್ತದೆ.