Asian Games | ಭಾರತದ ಶೂಟರ್ ನೀರು ಧಾಂಡಾಗೆ ಮತ್ತೊಂದು ಚಿನ್ನ
ಮಿಶ್ರ ತಂಡದ ಟ್ರ್ಯಾಪ್ ಶೂಟಿಂಗ್ನಲ್ಲಿ ಭಾರತದ ಕೈನನ್ ಚೆನಾಯ್–ನೀರು ಧಾಂಡಾ ಜೋಡಿ ಪ್ರಥಮ
ನೀರು ಧಾಂಡಾ , ಕೈನನ್ ಚೆನಾಯ್ | Screengrab : X
ನಗೋಯಾ: ಶೂಟಿಂಗ್‌ನ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನ ಗೆದ್ದು 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನದ ಪದಕ ತಂದುಕೊಟ್ಟಿದ್ದ ಶೂಟರ್ ನೀರು ಧಾಂಡಾ, ಇದೀಗ ಮತ್ತೊಂದು ಚಿನ್ನದ ಪದಕ ಗೆದ್ದಿದ್ದಾರೆ. ಹಿರಿಯ ಶೂಟರ್ ಕೈನನ್ ಚೆನಾಯ್ ಅವರೊಂದಿಗೆ ಮಿಶ್ರ ತಂಡದ ಟ್ರ್ಯಾಪ್ ಸ್ಪರ್ಧೆಯಲ್ಲೂ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇದು ನೀರು ಧಾಂಡಾಗೆ ಈ ಕ್ರೀಡಾಕೂಟದಲ್ಲಿ ದೊರೆತ ಮೂರನೇ ಪದಕವಾಗಿದೆ. ಈ ಬಾರಿ ಯುವ ಶೂಟರ್ಗಳೊಂದಿಗೆ ಸ್ಪರ್ಧಿಸಲು ತಾವು ಉತ್ಸುಕರಾಗಿರುವುದಾಗಿ ಕೈನನ್ ಚೆನಾಯ್ ಹೇಳಿದ್ದರು. 36 ವರ್ಷದ ಕೈನನ್ ಅವರು ದೇಶಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಇಂದಿನ ಸ್ಪರ್ಧೆಯಲ್ಲಿ ನೀರು ತಮ್ಮ ಮೊದಲ ಎರಡು ಶಾಟ್‌ಗಳಲ್ಲೇ ತಪ್ಪು ಮಾಡಿದರು. ಮೊದಲ ಐದು ಶಾಟ್‌ಗಳಲ್ಲಿ ಮೂರನ್ನು ತಪ್ಪಿಸಿಕೊಂಡಿದ್ದರು. ಆದರೆ ಬಳಿಕ ಅವರು ಅದ್ಭುತವಾಗಿ ಚೇತರಿಸಿಕೊಂಡರು.
ನೀರು ಮತ್ತು ಕೈನನ್ ಜೋಡಿ ಫೈನಲ್‌ನಲ್ಲಿ 40ರಲ್ಲಿ 34 ಗುರಿಗಳನ್ನು ಹೊಡೆದು ಏಷ್ಯನ್ ದಾಖಲೆ ನಿರ್ಮಿಸಿತು. ಈ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿತು.
ಖತಾರ್ ತಂಡ 40ರಲ್ಲಿ 32 ಗುರಿಗಳನ್ನು ಹೊಡೆದು ಬೆಳ್ಳಿ ಪದಕ ಗೆದ್ದಿತು.
ನೀರು ಧಾಂಡಾ ಗೆ ಮೂರನೇ ಪದಕ
ಇದಕ್ಕೂ ಮುನ್ನ ಮಹಿಳೆಯರ ಟ್ರ್ಯಾಪ್ ತಂಡ ಸ್ಪರ್ಧೆಯಲ್ಲಿ ನೀರು ಧಾಂಡಾ, ಆಶಿಮಾ ಅಹ್ಲಾವತ್ ಹಾಗೂ ಮನೀಷಾ ಕೀರ್ ಅವರೊಂದಿಗೆಗೂಡಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದರು.
ಬಳಿಕ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನೀರು ಧಾಂಡಾ, ಈ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಮಿಶ್ರ ತಂಡದ ಟ್ರ್ಯಾಪ್ ವಿಭಾಗದಲ್ಲೂ ಚಿನ್ನ ಗೆದ್ದು ಮತ್ತೊಂದು ಸಾಧನೆ ಮಾಡಿದ್ದಾರೆ.