Asian Games 2026 | ಗ್ರೀಕೊ-ರೋಮನ್ ಕುಸ್ತಿಯಲ್ಲಿ ಭಾರತದ ಸುನಿಲ್ ಕುಮಾರ್ ಗೆ ಕಂಚು
ಗ್ರೀಕೊ-ರೋಮನ್ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ
Screengrab : X
ನಗೋಯಾ: ಏಷ್ಯನ್ ಗೇಮ್ಸ್ 2026ರಲ್ಲಿ ಪುರುಷರ 87 ಕೆ.ಜಿ. ಗ್ರೀಕೊ-ರೋಮನ್ ಕುಸ್ತಿ ವಿಭಾಗದಲ್ಲಿ ತಾಂತ್ರಿಕ ಮೇಲುಗೈ ಮೂಲಕ ಸುನಿಲ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಗ್ರೀಕೊ-ರೋಮನ್ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆಯನ್ನು ಅವರು ಮಾಡಿದ್ದಾರೆ.
ಬುಧವಾರ ಕುಸ್ತಿ ಸ್ಪರ್ಧೆಯ ಮೊದಲ ದಿನ ನಡೆದ ಪುರುಷರ 87 ಕೆ.ಜಿ. ಗ್ರೀಕೊ-ರೋಮನ್ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಫಿಲಿಪ್ಪೀನ್ಸ್ ನ ರಾಬರ್ಟ್ಸ್ ಕ್ಯಾಲಮ್ ಜಾನ್ಸ್ಟನ್ ವಿರುದ್ಧ ಸುನಿಲ್ ಕುಮಾರ್ ಪ್ರಭಾವಿ ಪ್ರದರ್ಶನ ನೀಡಿದರು.
ಆರಂಭದಲ್ಲೇ ಎದುರಾಳಿಯನ್ನು ಎರಡು ಬಾರಿ ಉರುಳಿಸಿ ನಾಲ್ಕು ಅಂಕ ಗಳಿಸಿದ ಸುನಿಲ್, ಬಳಿಕ ಎದುರಾಳಿಯ ನಿಷ್ಕ್ರಿಯತೆಗೆ ಮತ್ತೊಂದು ಅಂಕ ಪಡೆದರು. ಪಂದ್ಯ ಆರಂಭವಾದ ಕೇವಲ ಒಂದೂವರೆ ನಿಮಿಷದಲ್ಲೇ ಅವರು 5–0 ಮುನ್ನಡೆ ಸಾಧಿಸಿದರು.
ಬಳಿಕವೂ ಸುನಿಲ್ ಎದುರಾಳಿಗೆ ಯಾವುದೇ ಅವಕಾಶ ನೀಡಲಿಲ್ಲ. ನಿಷ್ಕ್ರಿಯತೆಯ ಹಂತದಲ್ಲಿಯೇ ಮತ್ತೊಮ್ಮೆ ರಾಬರ್ಟ್ಸ್ ಅವರನ್ನು ಕೆಳಗೆ ಬೀಳಿಸಿ 7–0 ಮುನ್ನಡೆ ಪಡೆದರು.
ಕೊನೆಯಲ್ಲಿ ಮತ್ತೊಮ್ಮೆ ಉರುಳಿಸಿ ಎರಡು ಅಂಕ ಗಳಿಸಿದ ಸುನಿಲ್ ಕುಮಾರ್, 9–0 ಅಂತರದಲ್ಲಿ ತಾಂತ್ರಿಕ ಮೇಲುಗೈ ಮೂಲಕ ಗೆಲುವು ಸಾಧಿಸಿದರು.
ಈ ಗೆಲುವಿನೊಂದಿಗೆ ಪುರುಷರ 87 ಕೆ.ಜಿ. ಗ್ರೀಕೊ-ರೋಮನ್ ಕುಸ್ತಿಯಲ್ಲಿ ಸುನಿಲ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಹ್ಯಾಂಗ್ಝೌ 2022ರ ಏಷ್ಯನ್ ಗೇಮ್ಸ್ ನಲ್ಲಿ ಗೆದ್ದ ಕಂಚಿನ ಪದಕದ ಬಳಿಕ, ಇದು ಅವರ ಎರಡನೇ ಏಷ್ಯನ್ ಗೇಮ್ಸ್ ಪದಕವಾಗಿದೆ.