×
Ad

ಐಸಿಸಿ ನೀತಿ ಸಂಹಿತೆ ಉಲ್ಲಂಘನೆ : ವೆಸ್ಟ್‌ಇಂಡೀಸ್‌ನ ವೇಗಿ ಜೇಡನ್ ಸೀಲ್ಸ್‌ಗೆ ದಂಡ

Update: 2025-06-27 21:17 IST

ಜೇಡನ್ ಸೀಲ್ಸ್‌ | PC : NDTV 

ಬಾರ್ಬಡೋಸ್: ಆಸ್ಟ್ರೇಲಿಯ ತಂಡದ ವಿರುದ್ಧ ಬಾರ್ಬಡೋಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ತಪ್ಪಿಗೆ ವೆಸ್ಟ್‌ಇಂಡೀಸ್ ತಂಡದ ವೇಗದ ಬೌಲರ್ ಜೇಡನ್ ಸೀಲ್ಸ್ ಅವರ ಪಂದ್ಯ ಶುಲ್ಕದಲ್ಲಿ ಶೇ.15ರಷ್ಟು ದಂಡ ವಿಧಿಸಲಾಗಿದೆ.

ಕೆನ್ಸಿಂಗ್‌ಟನ್ ಓವಲ್‌ನಲ್ಲಿ ನಡೆದ ಪಂದ್ಯದ ವೇಳೆ ಸೀಲ್ಸ್ ಅವರು ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್‌ರನ್ನು ಔಟ್ ಮಾಡಿದ ನಂತರ ಡ್ರೆಸ್ಸಿಂಗ್ ರೂಮ್‌ಗೆ ತೆರಳುವಂತೆ ಸನ್ನೆ ಮಾಡಿರುವ ಘಟನೆ ನಡೆದಿತ್ತು.

ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಔಟಾದ ಬ್ಯಾಟ್ಸ್‌ಮನ್‌ನಿಂದ ಆಕ್ರಮಣಕಾರಿ ಪ್ರತಿಕ್ರಿಯೆ ಬರುವಂತೆ ಮಾಡಲು ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಸೀಲ್ಸ್ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ.

ದಿನದಂತ್ಯಕ್ಕೆ ಘಟನೆಯ ಬಗ್ಗೆ ಸೀಲ್ಸ್‌ರನ್ನು ಕೇಳಿದಾಗ, ‘‘ಅದು ನಿಜವಾಗಿಯೂ ಏನನ್ನೂ ಅರ್ಥೈಸುವುದಿಲ್ಲ. ಅದು ಸ್ವಲ್ಪ ಹತಾಶೆಯ ಸಂಕೇತವಾಗಿದೆ. ಪ್ಯಾಟ್ ನನ್ನ ವಿರುದ್ದ ಒಂದೆರಡು ಉತ್ತಮ ಹೊಡೆತ ಬಾರಿಸಿದರು. ನಾನು ಅವರಿಗೆ ಡ್ರೆಸ್ಸಿಂಗ್ ರೂಮ್ ಎಲ್ಲಿದೆ ಎಂದು ತೋರಿಸಿದೆ. ಅದರಲ್ಲಿ ನಿಜವಾಗಿಯೂ ಏನೂ ಇರಲಿಲ್ಲ’’ ಎಂದು ವಿವರಿಸಿದರು.

ಸೀಲ್ಸ್ ದಂಡದ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಪಡೆದರು. 24 ತಿಂಗಳಲ್ಲಿ 2ನೇ ಬಾರಿ ಈ ತಪ್ಪು ಎಸಗಿದ್ದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ರನ್ನರ್ಸ್ ಅಪ್ ಆಸ್ಟ್ರೇಲಿಯ ತಂಡದ ವಿರುದ್ದ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಸೀಲ್ಸ್ ಸಹಿತ ವೆಸ್ಟ್‌ಇಂಡೀಸ್‌ನ ಬಹುತೇಕ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು.

ಶೈ ಹೋಪ್ (48 ರನ್)ಹಾಗೂ ರೋಸ್ಟನ್ ಚೇಸ್(44 ರನ್)ಆರನೇ ವಿಕೆಟ್‌ಗೆ ನಿರ್ಣಾಯಕ 67 ರನ್ ಜೊತೆಯಾಟ ನಡೆಸಿದ ಹಿನ್ನೆಲೆಯಲ್ಲಿ ಆತಿಥೇಯ ವೆಸ್ಟ್‌ಇಂಡೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ 10 ರನ್ ಮುನ್ನಡೆ ಪಡೆದಿತ್ತು.

ಆಸ್ಟ್ರೇಲಿಯ ತನ್ನ 2ನೇ ಇನಿಂಗ್ಸ್‌ನಲ್ಲಿ 92 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಒಟ್ಟಾರೆ 82 ರನ್ ಮುನ್ನಡೆಯಲ್ಲಿದೆ. ಜೋಶ್ ಇಂಗ್ಲಿಸ್(12) ವಿಕೆಟನ್ನು ಉರುಳಿಸಿದ ಸೀಲ್ಸ್ ಪಂದ್ಯದಲ್ಲಿ ತನ್ನ 6ನೇ ವಿಕೆಟನ್ನು ಪಡೆದರು.

3ನೇ ದಿನದಾಟಕ್ಕಿಂತ ಮೊದಲು ಪಂದ್ಯವು ಸಮತೋಲಿತವಾಗಿದ್ದು, ಹೆಡ್(13 ರನ್)ಹಾಗೂ ಬೀಯು ವೆಬ್‌ಸ್ಟರ್(19 ರನ್)ಆಸ್ಟ್ರೇಲಿಯ ತಂಡದ ಬ್ಯಾಟಿಂಗ್ ಮುನ್ನಡೆಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News