ಲಿಯೊನೆಲ್ ಮೆಸ್ಸಿ ,  ಕ್ರಿಸ್ಟಿಯಾನೊ ರೊನಾಲ್ಡೊ |PTI

ಮ್ಯಾಡ್ರಿಡ್: ಫುಟ್ಬಾಲ್‌ನ ಇಬ್ಬರು ಆಧುನಿಕ ಐಕಾನ್‌ಗಳಾದ ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಈ ವರ್ಷದ ಡಿಸೆಂಬರ್‌ನಲ್ಲಿ ಒಟ್ಟಿಗೆ ಆಡುವ ಸಾಧ್ಯತೆಯಿದ್ದು, ಕಾರ್ಲೊಸ್ ಟೆವೆಝ್ ತಮ್ಮ ಬಹುನಿರೀಕ್ಷಿತ ವಿದಾಯ ಪಂದ್ಯಕ್ಕಾಗಿ ಈ ಇಬ್ಬರು ದಿಗ್ಗಜರನ್ನು ಒಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ.

ಟೆವೆಝ್ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದ ಅರ್ಜೆಂಟೀನದ ಕ್ಲಬ್ ಬೊಕಾ ಜೂನಿಯರ್ಸ್‌ನಲ್ಲಿ ವೃತ್ತಿಪರ ಫುಟ್ಬಾಲ್‌ಗೆ ವಿದಾಯ ಹೇಳಲು ತಯಾರಿ ನಡೆಸುತ್ತಿದ್ದಾರೆ. 42ರ ವಯಸ್ಸಿನ ಟೆವೆಝ್ ಸುಮಾರು ಮೂರು ವರ್ಷಗಳಿಂದ ವೃತ್ತಿಪರ ಪಂದ್ಯವನ್ನು ಆಡಿಲ್ಲ. ಆದರೆ ಈಗ ಬೊಕಾದಲ್ಲಿ ಸ್ಟಾರ್ ಆಟಗಾರರನ್ನು ಒಂದೇ ವೇದಿಕೆಯಲ್ಲಿ ತರಲು ಯೋಜಿಸುತ್ತಿದ್ದಾರೆ.

ಸುಮಾರು 60 ಗಣ್ಯ ಫುಟ್ಬಾಲ್ ಆಟಗಾರರನ್ನು ಒಳಗೊಂಡ ಬಹುನಿರೀಕ್ಷಿತ ಪಂದ್ಯವು ಡಿಸೆಂಬರ್ ಮಧ್ಯದಲ್ಲಿ ನಡೆಯಲಿದೆ. ಟೆವೆಝ್ ಈಗಾಗಲೇ ಬೊಕಾ ಜೊತೆ ದಿನಾಂಕಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮೆಸ್ಸಿ ಹಾಗೂ ರೊನಾಲ್ಡೊರನ್ನು ಒಂದೇ ಮೈದಾನಕ್ಕೆ ತರಲು ಮಾಜಿ ಅರ್ಜೆಂಟೀನ, ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಜುವೆಂಟರ್ಸ್ ಫಾರ್ವರ್ಡ್ ಆಟಗಾರ ಟೆವೆಝ್ ಪ್ರಯತ್ನ ಆರಂಭಿಸಿದ್ದಾರೆ.

ಟೆವೆಝ್ ವ್ಯಾಟ್ಸ್‌ಆ್ಯಪ್ ಮೂಲಕ ಮೆಸ್ಸಿ ಹಾಗೂ ರೊನಾಲ್ಡೊ ಇಬ್ಬರೊಂದಿಗೂ ಸಂಪರ್ಕದಲ್ಲಿದ್ದಾರೆ. ಅರ್ಜೆಂಟೀನಕ್ಕೆ ಆಗಮಿಸುವಂತೆ ಪೋರ್ಚುಗಲ್ ಸೂಪರ್‌ಸ್ಟಾರ್ ರೊನಾಲ್ಡೊರ ಮನವೊಲಿಸುವ ವಿಶ್ವಾಸದಲ್ಲಿದ್ದಾರೆ.

ಟೆವೆಝ್ ತಮ್ಮ ವೃತ್ತಿಜೀವನದ ವಿವಿಧ ಹಂತಗಳಲ್ಲಿ ಮೆಸ್ಸಿ ಹಾಗೂ ರೊನಾಲ್ಡೊರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಾರೆ. ಟೆವೆಝ್ ಅವರು ಅರ್ಜೆಂಟೀನದ ಪರ ಮೆಸ್ಸಿ ಜೊತೆ ಹೆಚ್ಚಿನ ಪಂದ್ಯಗಳನ್ನು ಆಡಿದ್ದರು. 2007ರಿಂದ 2009ರ ತನಕ ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿದ್ದಾಗ ರೊನಾಲ್ಡೊರೊಂದಿಗೆ ಆಡಿದ್ದರು.

39ರ ವಯಸ್ಸಿನ ಮೆಸ್ಸಿ ಆಗಸ್ಟ್ 31ರಂದು ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದಾರೆ. 41ರ ವಯಸ್ಸಿನ ರೊನಾಲ್ಡೊ ಅವರು 5 ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ಜಯಿಸಿದ್ದು, ವೃತ್ತಿಜೀವನದಲ್ಲಿ 1,000 ಗೋಲು ಪೂರೈಸಲು ಕೇವಲ 22 ಗೋಲುಗಳ ಅಗತ್ಯವಿದೆ. ಸೌದಿ ಪ್ರೊ ಲೀಗ್‌ನಲ್ಲಿ ಅಲ್ ನಸ್ರ್ ಪರ ಆಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor