ಇಶಾನ್ ಕಿಶನ್ | Photo Credit : PTI

ಚೆನ್ನೈ,: ನಾಯಕ ಇಶಾನ್ ಕಿಶನ್ ಆಕರ್ಷಕ ಅಜೇಯ ಶತಕದ(111 ರನ್, 135 ಎಸೆತ)ಸಹಾಯದಿಂದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಮೊದಲ ದಿನವಾದ ರವಿವಾರ ಪೂರ್ವ ವಲಯ ತಂಡವು ದಕ್ಷಿಣ ವಲಯ ತಂಡದ ವಿರುದ್ಧ್ದ 4 ವಿಕೆಟ್‌ಗಳ ನಷ್ಟಕ್ಕೆ 385 ರನ್ ಗಳಿಸಿದೆ.

ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಇಶಾನ್ ಕಿಶನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. 135 ಎಸೆತಗಳಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್‌ಗಳ ಸಹಿತ ಔಟಾಗದೆ 111 ರನ್ ಸಿಡಿಸಿದ ಕಿಶನ್ ಪೂರ್ವ ವಲಯ ತಂಡವು ಮೊದಲ ದಿನದಾಟದಂತ್ಯಕ್ಕೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ನೆರವಾದರು.

ಕಿಶನ್‌ಗೆ ಕುಮಾರ ಕುಶಾಗ್ರ ಉತ್ತಮ ಸಾಥ್ ನೀಡಿದ್ದು 75 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳ ಸಹಿತ ಔಟಾಗದೆ 63 ರನ್ ಕಲೆ ಹಾಕಿದರು. ಈ ಜೋಡಿಯು ಐದನೇ ವಿಕೆಟ್‌ಗೆ 160 ಎಸೆತಗಳಲ್ಲಿ 144 ರನ್ ಜೊತೆಯಾಟದಲ್ಲಿ ಭಾಗಿಯಾಯಿತು. ಇದರೊಂದಿಗೆ ದಿನದಾಟದಂತ್ಯಕ್ಕೆ ದಕ್ಷಿಣ ವಲಯದಿಂದ ಪಂದ್ಯವನ್ನು ಸಂಪೂರ್ಣ ತನ್ನತ್ತ ಸೆಳೆಯಿತು.

ಅಭಿಮನ್ಯು ಈಶ್ವರನ್(72 ರನ್, 86 ಎಸೆತ, 10 ಬೌಂಡರಿ, 1 ಸಿಕ್ಸರ್)ಹಾಗೂ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ(44 ರನ್, 37 ಎಸೆತ, 5 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್‌ನಲ್ಲಿ ಬರೋಬ್ಬರಿ 100 ರನ್ ಕಲೆ ಹಾಕಿ ಪೂರ್ವ ವಲಯ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಸೂರ್ಯವಂಶಿ ಹಾಗೂ ಈಶ್ವರನ್ ಔಟಾದ ನಂತರ ಕ್ರೀಸಿಗಿಳಿದ ಸುದೀಪ್ ಕುಮಾರ್ ಘರಮಿ ಕೇವಲ 6 ರನ್ ಗಳಿಸಿ ಔಟಾದರು. ಆಗ ಮೈದಾನಕ್ಕಿಳಿದ ಶಿಖರ್ ಮೋಹನ್ 120 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳ ಸಹಿತ 85 ರನ್ ಗಳಿಸಿ ಪೂರ್ವ ವಲಯ ಮತ್ತೊಂದು ಪ್ರಮುಖ ಜೊತೆಯಾಟ ನಡೆಸುವಲ್ಲಿ ನೆರವಾದರು. ಮೋಹನ್ ಹಾಗೂ ಕಿಶನ್ ನಾಲ್ಕನೇ ವಿಕೆಟ್‌ಗೆ 94 ರನ್ ಸೇರಿಸಿದರು. ಚಾಮಾ ಮಿಲಿಂದ್ ಅವರು ಮೋಹನ್ ವಿಕೆಟನ್ನು ಉರುಳಿಸಿದಾಗ ಪೂರ್ವ ವಲಯವು 4 ವಿಕೆಟ್‌ಗಳ ನಷ್ಟಕ್ಕೆ 241 ರನ್ ಗಳಿಸಿತು.

ಆಗ ಕಿಶನ್ ಹಾಗೂ ಕುಶಾಗ್ರ ಜೊತೆಯಾದರು. ಈ ಜೋಡಿಯು ಪೂರ್ವ ವಲಯಕ್ಕೆ ಮತ್ತೆ ಹಿನ್ನಡೆಯಾಗದಂತೆ ನೋಡಿಕೊಂಡಿತು. ಇನಿಂಗ್ಸ್‌ಗೆ ಬಲ ತುಂಬಿದ ಕಿಶನ್ ತನ್ನದೇ ಶೈಲಿಯಲ್ಲಿ ಶತಕವನ್ನು ಪೂರೈಸಿದರು. ದಿನದಾಟದಂತ್ಯಕ್ಕೆ ಔಟಾಗದೆ ಉಳಿದರು. ನಾಯಕನಾಗಿ ಕಿಶನ್ ಅವರ ಇನಿಂಗ್ಸ್ ಅತ್ಯಂತ ಮುಖ್ಯವಾಗಿದೆ.

ಬ್ಯಾಟಿಂಗ್‌ಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ದಕ್ಷಿಣ ವಲಯ ತಂಡದ ಬೌಲಿಂಗ್ ವಿಭಾಗವು ಪರದಾಟ ನಡೆಸಿತು. ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ಪರದಾಟ ನಡೆಸಿದರು. ಚಾಮಾ ಮಿಲಿಂದ್(2-56) ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ತನ್ನ 22 ಓವರ್‌ಗಳಲ್ಲಿ 114 ರನ್ ಬಿಟ್ಟುಕೊಟ್ಟಿರುವ ತ್ರಿಪುರನ ವಿಜಯ್ ಕೇವಲ ಒಂದು ವಿಕೆಟನ್ನು ಪಡೆದರು.

ಮುಹಮ್ಮದ್ ಸಿರಾಜ್ 14 ಓವರ್‌ಗಳ ಬೌಲಿಂಗ್ ಮಾಡಿದ್ದರೂ 96 ರನ್ ನೀಡಿ ಒಂದೂ ವಿಕೆಟನ್ನು ಪಡೆಯಲಿಲ್ಲ. ಪೂರ್ವ ವಲಯ ತಂಡವು ಕೊನೆಯ 10 ಓವರ್‌ಗಳಲ್ಲಿ ಒಂದು ವಿಕೆಟ್ ನೀಡದೆ 74 ರನ್ ಕಲೆ ಹಾಕಿತು. ಕಿಶನ್ ಹಾಗೂ ಕುಶಾಗ್ರ ಅವರ ಜೊತೆಯಾಟವು ಪೂರ್ವ ವಲಯವು 4 ವಿಕೆಟ್‌ಗಳ ನಷ್ಟಕ್ಕೆ 385 ರನ್ ಗಳಿಸಲ ನೆರವಾಯಿತು.

ಪೂರ್ವ ವಲಯಕ್ಕೆ ಎರಡನೇ ದಿನದಾಟದಲ್ಲಿ 400ಕ್ಕೂ ಅಧಿಕ ರನ್ ಗಳಿಸುವ ಅವಕಾಶವಿದೆ. ಪೂರ್ವ ವಲಯ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಪಡೆಯುವುದನ್ನು ತಡೆಯಲು ದಕ್ಷಿಣ ವಲಯ ತಂಡವು ಎರಡನೇ ಹೊಸ ಚೆಂಡಿನಲ್ಲಿ ಆದಷ್ಟು ಬೇಗನೆ ವಿಕೆಟ್ ಪಡೆಯುವ ಅಗತ್ಯವಿದೆ.

ಪೂರ್ವ ವಲಯ ಆಡುವ 11ರ ಬಳಗದಲ್ಲಿ ಒಂದು ಬದಲಾವಣೆ ಮಾಡಿತ್ತು. ದಕ್ಷಿಣ ವಲಯವು ನಾಲ್ಕು ಬದಲಾವಣೆಗಳನ್ನು ಮಾಡಿದ್ದು, ದೇವದತ್ತ ಪಡಿಕ್ಕಲ್ ಹಾಗೂ ಮುಹಮ್ಮದ್ ಸಿರಾಜ್‌ರನ್ನು ಸೇರಿಸಿಕೊಳ್ಳಲಾಗಿದೆ.

ಪೂರ್ವ ವಲಯವು 2012-13ರ ನಂತರ ಮೊದಲ ಬಾರಿ ದುಲೀಪ್ ಟ್ರೋಫಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. ದಕ್ಷಿಣ ವಲಯವು 12 ಬಾರಿ ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿದ್ದು, ಸ್ಪರ್ಧಾವಳಿಯಲ್ಲಿ ಉತ್ತಮ ದಾಖಲೆ ಹೊಂದಿದೆ. 2023ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor