ಸಾತ್ವಿಕ್-ಚಿರಾಗ್ | Photo Credit : PTI 

ಬೀಜಿಂಗ್: ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಚೀನಾದ ಹೀ ಜಿಟಿಂಗ್ ಹಾಗೂ ರೆನ್ ಕ್ಸಿಯಾಂಗ್‌ಯು ಅವರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿರುವ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ 10ನೇ ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ.

ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಚೀನಾದ ಎದುರಾಳಿಗಳನ್ನು 11-21, 21-13, 21-17 ಅಂತರದಿಂದ ರೋಚಕವಾಗಿ ಮಣಿಸಿದರು.

ಈ ಗೆಲುವಿನ ಮೂಲಕ ಭಾರತೀಯ ಜೋಡಿಯು ಹೀ ಹಾಗೂ ರೆನ್ ವಿರುದ್ಧದ ಹೆಡ್-ಟು-ಹೆಡ್ ದಾಖಲೆಯನ್ನು 3-0ಗೆ ವಿಸ್ತರಿಸಿದೆ.

5-0 ಮುನ್ನಡೆ ಸಾಧಿಸಿದ ಹೀ ಜಿಟಿಂಗ್ ಹಾಗೂ ರೆನ್ ಕ್ಸಿಯಾಂಗ್‌ಯು ಬಿರುಸಿನ ಆರಂಭ ಪಡೆದರು. ನೆಟ್‌ನಲ್ಲಿ ಚುರುಕಿನ ಆಟ ಹಾಗೂ ಶಕ್ತಿಶಾಲಿ ಸ್ಮ್ಯಾಶ್‌ಗಳ ಮೂಲಕ ಭಾರತೀಯರನ್ನು ಒತ್ತಡಕ್ಕೆ ಸಿಲುಕಿಸಿದರು. ಮಧ್ಯಂತರದ ವೇಳೆ ಚೀನಾದ ಜೋಡಿ 11-5ರಿಂದ ಮುನ್ನಡೆ ಸಾಧಿಸಿದರು. ಭಾರತೀಯರಿಗೆ ಮರು ಹೋರಾಡಲು ಅವಕಾಶವನ್ನೇ ನೀಡದ ಹೀ ಹಾಗೂ ರೆನ್ ಮೊದಲ ಗೇಮ್ ಅನ್ನು 18 ನಿಮಿಷಗಳಲ್ಲಿ 21-11 ಅಂತರದಿಂದ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲೂ ಚೀನಾದ ಆಟಗಾರರು ಆರಂಭದಲ್ಲೇ 2-0 ಮುನ್ನಡೆ ಸಾಧಿಸಿದರು. 3-3ರಿಂದ ಸಮಬಲಗೊಳಿಸಿದ ಸಾತ್ವಿಕ್-ಚಿರಾಗ್ ಮರು ಹೋರಾಡಿದರು. ಹೀ ಹಾಗೂ ರೆನ್ ತಮ್ಮ ವೇಗ ಹಾಗೂ ಹಿಡಿತದ ಮೂಲಕ ತಿರುಗಿ ಬೀಳಲು ಯತ್ನಿಸಿದರು. ಮಧ್ಯಂತರದಲ್ಲಿ 11-7ರಿಂದ ಮುನ್ನಡೆ ಪಡೆದ ಭಾರತೀಯರು ಹಿಡಿತ ಸಾಧಿಸಿದರು. ಮಧ್ಯಂತರದ ನಂತರ 17-11ರಿಂದ ಲೀಡ್ ಸಾಧಿಸಿ ಒತ್ತಡ ಹೇರುವುದನ್ನು ಮುಂದುವರಿಸಿದರು. ಚೀನಾ ಆಟಗಾರರ ಪ್ರತಿರೋಧದ ಹೊರತಾಗಿಯೂ ಭಾರತೀಯರು ಎರಡನೇ ಗೇಮ್ ಅನ್ನು 21-13ರಿಂದ ಗೆದ್ದುಕೊಂಡು ಪಂದ್ಯವನ್ನು ಸಮಬಲಕ್ಕೆ ತಂದರು.

ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಹೀ ಹಾಗೂ ರೆನ್ ಆರಂಭದಲ್ಲೇ 4-0 ಮುನ್ನಡೆ ಪಡೆದರು. ಭಾರತೀಯರು ಮಧ್ಯಂತರದ ವೇಳೆ 11-9ರಿಂದ ಮುನ್ನಡೆ ಪಡೆದರು. ಸಾತ್ವಿಕ್-ಚಿರಾಗ್ 15-12ರಿಂದ ಮುನ್ನಡೆಯನ್ನು ವಿಸ್ತರಿಸಿದರು. ಸುಲಭವಾಗಿ ಶರಣಾಗಲು ನಿರಾಕರಿಸಿದ ಚೀನಾದ ಜೋಡಿ ಹೀ ಹಾಗೂ ರೆನ್ 16-16 ಹಾಗೂ 17-17ರಿಂದ ಸಮಬಲಗೊಳಿಸಿದರು.

ಸತತ ನಾಲ್ಕು ಅಂಕಗಳನ್ನು ಕಲೆ ಹಾಕಿದ ಭಾರತೀಯರು ಮೂರನೇ ಗೇಮ್ ಅನ್ನು 21-17 ಅಂತರದಿಂದ ಗೆದ್ದುಕೊಂಡರು. 70 ನಿಮಿಷಗಳ ರೋಚಕ ಹಣಾಹಣಿಯಲ್ಲಿ ಚಾಂಪಿಯನ್ ಕಿರೀಟ ಧರಿಸಿದರು.

ಸಾತ್ವಿಕ್ ಹಾಗೂ ಚಿರಾಗ್ ತಮ್ಮ ವೃತ್ತಿಜೀವನದಲ್ಲಿ 10ನೇ ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor