ಐಸಿಸಿ ಏಕದಿನ ರ್‍ಯಾಂಕಿಂಗ್ | ಮತ್ತೊಮ್ಮೆ ನಂ.1 ಸ್ಥಾನ ಅಲಂಕರಿಸಿದ ಸ್ಮೃತಿ ಮಂಧಾನ
ಸ್ಮತಿ ಮಂಧಾನ | PC : @BCCIWomen
ದುಬೈ, ಸೆ.16: ಆಸ್ಟ್ರೇಲಿಯ ಕ್ರಿಕೆಟ್ ತಂಡದ ವಿರುದ್ಧ ಅರ್ಧಶತಕ ಗಳಿಸಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಮಂಗಳವಾರ ಬಿಡುಗಡೆಯಾದ ಐಸಿಸಿ ಏಕದಿನ ರ್‍ಯಾಂಕಿಂಗ್ ನಲ್ಲಿ ಮತ್ತೊಮ್ಮೆ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.
ಮುಲ್ಲನ್ ಪುರದಲ್ಲಿ ನಡೆದಿದ್ದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮಂಧಾನ 63 ಎಸೆತಗಳಲ್ಲಿ 58 ರನ್ ಗಳಿಸಿದ್ದರು. ಆದರೆ ಮಂಧಾನ ಪ್ರಯತ್ನ ವ್ಯರ್ಥವಾಗಿದ್ದು, ಈ ಪಂದ್ಯವನ್ನು ಗೆದ್ದಿರುವ ಆಸ್ಟ್ರೇಲಿಯ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಸೆಪ್ಟಂಬರ್ 30ರಿಂದ ಆರಂಭವಾಗಲಿರುವ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಗಿಂತ ಮೊದಲು ಮಂಧಾನ ಅವರು ಐಸಿಸಿ ಏಕದಿನ ರ್‍ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ಆಸ್ಟ್ರೇಲಿಯದ ವಿರುದ್ಧ ಅರ್ಧಶತಕವನ್ನು ಗಳಿಸಿರುವ ಮಂಧಾನ 7 ಹೆಚ್ಚುವರಿ ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡದ ನ್ಯಾಟ್ ಸಿವೆರ್-ಬ್ರಂಟ್ ಗಿಂತ 4 ಅಂಕದಿಂದ ಮುಂದಿದ್ದಾರೆ.
ಸಿವೆರ್-ಬ್ರಂಟ್‌ಗೆ (731) ಹೋಲಿಸಿದರೆ ಮಂಧಾನ 735 ಅಂಕಗಳನ್ನು ಹೊಂದಿದ್ದಾರೆ.
2019ರಲ್ಲಿ ಮೊದಲ ಬಾರಿ ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದ ಮಂಧಾನ 2025ರ ಋತುವಿನಲ್ಲಿ ಎರಡನೇ ಬಾರಿ ನಂ.1 ಸ್ಥಾನ ಗಿಟ್ಟಿಸಿದ್ದಾರೆ.
64 ರನ್ ಗಳಿಸಿದ್ದ ಭಾರತದ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ನಾಲ್ಕು ಸ್ಥಾನ ಮೇಲಕ್ಕೇರಿ 42ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ವಿರುದ್ಧ 54 ರನ್ ಗಳಿಸಿದ ನಂತರ ಹರ್ಲೀನ್ ಡೆವೊಲ್ 43ನೇ ಸ್ಥಾನ ತಲುಪಿದ್ದಾರೆ.
ಔಟಾಗದೆ 77 ರನ್ ಗಳಿಸಿದ್ದ ಆಸ್ಟ್ರೇಲಿಯದ ಎಡಗೈ ಬ್ಯಾಟರ್ ಬೆಥ್ ಮೂನಿ ಮೂರು ಸ್ಥಾನ ಮೇಲಕ್ಕೇರಿ 5ನೇ ಸ್ಥಾನದಲ್ಲಿದ್ದಾರೆ. ಮೂನಿ ಸಹ ಆಟಗಾರ್ತಿಯರಾದ ಅನಬೆಲ್ ಸದರ್‌ಲ್ಯಾಂಡ್ ಹಾಗೂ ಲಿಚ್‌ಫೀಲ್ಡ್ ಕ್ರಮವಾಗಿ 4 ಹಾಗೂ 13 ಸ್ಥಾನ ಭಡ್ತಿ ಪಡೆದು 25ನೇ ಸ್ಥಾನ ಹಂಚಿಕೊಂಡಿದ್ದಾರೆ. ಈ ಇಬ್ಬರು ಭಾರತ ವಿರುದ್ಧ 8 ವಿಕೆಟ್ ಗಳಿಂದ ಗೆದ್ದಿರುವ ಪಂದ್ಯದಲ್ಲಿ ಅರ್ಧಶತಕಗಳ ಕೊಡುಗೆ ನೀಡಿದ್ದರು.
ಆಸ್ಟ್ರೇಲಿಯದ ವೇಗದ ಬೌಲರ್ ಕಿಮ್ ಗರ್ತ್ ಹಾಗೂ ಸ್ಪಿನ್ನರ್ ಅಲನಾ ಕಿಂಗ್ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನಕ್ಕೇರುವುದರೊಂದಿಗೆ ಏಕದಿನ ಬೌಲಿಂಗ್ ರ್‍ಯಾಂಕಿಂಗ್ ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆದಿರುವ ಭಾರತೀಯ ಸ್ಪಿನ್ನರ್ ಸ್ನೇಹಾ ರಾಣಾ 5 ಸ್ಥಾನ ಮೇಲಕ್ಕೇರಿ 13ನೇ ರ್‍ಯಾಂಕಿನಲ್ಲಿದ್ದಾರೆ.
ಇಂಗ್ಲೆಂಡ್ ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ನಂ.1 ರ್‍ಯಾಂಕಿನ ಬೌಲರ್ ಆಗಿ ಮುಂದುವರಿದಿದ್ದಾರೆ.