×
Ad

ಐಸಿಸಿ ರ‍್ಯಾಂಕಿಂಗ್ : ವರುಣ್ ಚಕ್ರವರ್ತಿ ನಂ.1 ಟಿ-20 ಬೌಲರ್

Update: 2025-09-17 21:17 IST

ವರುಣ್ ಚಕ್ರವರ್ತಿ | PC : PTI 

ದುಬೈ, ಸೆ.17: ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ 2025ರ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡಿದ ಪರಿಣಾಮ ಐಸಿಸಿ ಟಿ-20 ರ್ಯಾಂಕಿಂಗ್‌ನಲ್ಲಿ ಮೊದಲ ಬಾರಿ ನಂ. 1 ರ್ಯಾಂಕಿನ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಜಸ್‌ಪ್ರಿತ್ ಬುಮ್ರಾ ಹಾಗೂ ರವಿ ಬಿಷ್ಣೋಯಿ ನಂತರ ಐಸಿಸಿ ಟಿ-20 ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ ಭಾರತದ 3ನೇ ಬೌಲರ್ ಆಗಿದ್ದಾರೆ.

ಚಕ್ರವರ್ತಿ ಕಳೆದ ಒಂದು ವರ್ಷದಿಂದ ಭಾರತದ ಟಿ-20 ಕ್ರಿಕೆಟ್ ತಂಡದಲ್ಲಿರುವ ಪ್ರಮುಖ ಬೌಲರ್ ಆಗಿದ್ದಾರೆ. 34ರ ವಯಸ್ಸಿನ ಚಕ್ರವರ್ತಿ ತನ್ನ ಶ್ರೇಷ್ಠ ಪ್ರದರ್ಶನದ ಮೂಲಕ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ನ್ಯೂಝಿಲ್ಯಾಂಡ್ ವೇಗಿ ಜೇಕಬ್ ಡಫಿ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ.

ವರ್ಷಾರಂಭದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದಿದ್ದ ಚಕ್ರವರ್ತಿ ಪ್ರಸಕ್ತ ಏಶ್ಯ ಕಪ್ ಟೂರ್ನಿಯಲ್ಲಿ ಉತ್ತಮ ಟಚ್‌ನಲ್ಲಿದ್ದಾರೆ. 2 ಪಂದ್ಯಗಳಲ್ಲಿ 2 ವಿಕೆಟ್‌ಗಳನ್ನು ಪಡೆದಿದ್ದಾರೆ.

ಏಶ್ಯ ಕಪ್ ಟೂರ್ನಿಯಲ್ಲಿ ಯುಎಇ ವಿರುದ್ಧ ಭಾರತ ಆಡಿದ್ದ ಮೊದಲ ಪಂದ್ಯದಲ್ಲಿ ಚಕ್ರವರ್ತಿ 4 ರನ್‌ಗೆ 1 ವಿಕೆಟ್ ಉರುಳಿಸಿದ್ದರು. 4 ದಿನಗಳ ನಂತರ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 24 ರನ್‌ಗೆ 1 ವಿಕೆಟ್ ಪಡೆದಿದ್ದರು.

ಈ ಪ್ರದರ್ಶನದ ಮೂಲಕ ಚಕ್ರವರ್ತಿ ಮೂರು ಸ್ಥಾನ ಮೇಲಕ್ಕೇರಿ ಮೊದಲ ಬಾರಿ ನಂ.1 ಟಿ-20 ಬೌಲರ್ ಎನಿಸಿಕೊಂಡಿದ್ದಾರೆ. ಡಫಿ 2ನೇ ಸ್ಥಾನಕ್ಕೆ ಕುಸಿದಿದ್ದು, ವೆಸ್ಟ್‌ಇಂಡೀಸ್ ಸ್ಪಿನ್ನರ್ ಅಕೀಲ್ ಹುಸೇನ್ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯದ ಆ್ಯಡಮ್ ಝಂಪಾ 4ನೇ ಸ್ಥಾನಕ್ಕೇರಿದ್ದಾರೆ.

ಭಾರತದ ಕುಲದೀಪ್ ಯಾದವ್ 16 ಸ್ಥಾನ ಭಡ್ತಿ ಪಡೆದು 23ನೇ ಸ್ಥಾನ ತಲುಪಿದರು.

ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಅವರು ಪಾಕಿಸ್ತಾನದ ವಿರುದ್ಧ 31 ರನ್ ಗಳಿಸಿದ ನಂತರ ನಂ.1 ರ್ಯಾಂಕಿನ ಟಿ-20 ಬ್ಯಾಟರ್ ಆಗಿದ್ದಾರೆ. ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ 2 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ಪಡೆದರೆ, ಮರ್ಕ್ರಮ್ 10 ಸ್ಥಾನ ಭಡ್ತಿ ಪಡೆದು 30ನೇ ಸ್ಥಾನ ಹಂಚಿಕೊಂಡಿದ್ದಾರೆ.

ಆಲ್‌ರೌಂರ್‌ಗಳ ವಿಭಾಗದಲ್ಲಿ ಭಾರತದ ಹಾರ್ದಿಕ್ ಪಾಂಡ್ಯ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನದ ಸಯೀಮ್ ಅಯ್ಯೂಬ್ 4 ಸ್ಥಾನ ಮೇಲಕ್ಕೇರಿ 5ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ 4 ಸ್ಥಾನ ಮೇಲಕ್ಕೇರಿ 14ನೇ ಸ್ಥಾನ ತಲುಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News