×
Ad

ಯುಎಸ್‌ಎ ಕ್ರಿಕೆಟನ್ನು ಅಮಾನತುಗೊಳಿಸಿದ ಐಸಿಸಿ

Update: 2025-09-24 21:12 IST

PC : @ICC

ದುಬೈ, ಸೆ. 24: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಸದಸ್ಯನಾಗಿ ಅದರ ಸಂವಿಧಾನದಡಿ ಬರುವ ಬದ್ಧತೆಗಳನ್ನು ಈಡೇರಿಸಲು ವಿಫಲವಾಗಿರುವುದಕ್ಕಾಗಿ ಐಸಿಸಿಯು ಯುಎಸ್‌ಎ ಕ್ರಿಕೆಟ್‌ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

‘‘ಕಳೆದ ಒಂದು ವರ್ಷದ ಅವಧಿಯಲ್ಲಿ, ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಮತ್ತು ಪ್ರಮುಖ ಭಾಗೀದಾರರೊಂದಿಗೆ ವಿಸ್ತೃತ ಸಮಾಲೋಚನೆ ಮಾಡಿದ ಬಳಿಕ, ಯುಎಸ್‌ಎ ಕ್ರಿಕೆಟ್‌ನ ಐಸಿಸಿ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐಸಿಸಿಯು ಅಮಾನತುಗೊಳಿಸಿದೆ’’ ಎಂಬುದಾಗಿ ಐಸಿಸಿ ಮಂಗಳವಾರ ಘೋಷಿಸಿದೆ.

ಐಸಿಸಿ ಸದಸ್ಯ ದೇಶವಾಗಿ ಐಸಿಸಿ ಸಂವಿಧಾನದಡಿ ನಿಭಾಯಿಸಬೇಕಾಗಿರುವ ಬದ್ಧತೆಗಳನ್ನು ಈಡೇರಿಸಲು ಪದೇ ಪದೇ ವಿಫಲವಾಗಿರುವುದಕ್ಕಾಗಿ ಯುಎಸ್‌ಎ ಕ್ರಿಕೆಟನ್ನು ಅಮಾನತುಗೊಳಿಸುವ ನಿರ್ಧಾರವನ್ನು ಐಸಿಸಿಯು ತನ್ನ ಹಿಂದಿನ ಸಭೆಯಲ್ಲಿ ತೆಗೆದುಕೊಂಡಿತ್ತು.

ಅಮೆರಿಕನ್ ಕ್ರಿಕೆಟ್ ಎಂಟರ್‌ಪ್ರೈಸಸ್ (ಎಸಿಇ)ನೊಂದಿಗೆ ಮಾಡಿಕೊಂಡಿದ್ದ 50 ವರ್ಷಗಳ ವಾಣಿಜ್ಯ ಒಪ್ಪಂದವೊಂದನ್ನು ಯುಎಸ್‌ಎ ಕ್ರಿಕೆಟ್ ರದ್ದುಗೊಳಿಸಿದ ಕೆಲವೇ ದಿನಗಳ ಬಳಿಕ ಐಸಿಸಿಯ ಈ ನಿರ್ಧಾರ ಹೊರಬಿದ್ದಿದೆ. 2019ರಲ್ಲಿ ಸಹಿ ಹಾಕಲಾಗಿದ್ದ ಈ ಒಪ್ಪಂದವನ್ನು ‘‘ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಹಾಕಲಾದ ಪಂಚಾಂಗ’’ ಎಂಬುದಾಗಿ ಬಣ್ಣಿಸಲಾಗಿತ್ತು. ಈ ಒಪ್ಪಂದವು ಉನ್ನತ ಮಟ್ಟದ ಟಿ20 ಕ್ರಿಕೆಟ್ ಮೇಲೆ ಎಸಿಇಗೆ ನಿಯಂತ್ರಣ ಕೊಟ್ಟಿತ್ತು. ಅದಕ್ಕೆ ಪ್ರತಿಯಾಗಿ ಎಸಿಇ ರಾಷ್ಟ್ರೀಯ ತಂಡಗಳಿಗೆ ಹಣ ಕೊಡಬೇಕು, ಆರು ಸ್ಟೇಡಿಯಮ್‌ಗಳನ್ನು ಕಟ್ಟಬೇಕು ಮತ್ತು ಲೀಗ್ ಪಂದ್ಯಾವಳಿಗಳನ್ನು ಆರಂಭಿಸಬೇಕಾಗಿತ್ತು. ಈ ಯೋಜನೆಯ ಭಾಗವಾಗಿಯೇ ಅಮೆರಿಕವು 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಸಹ ಆತಿಥೇಯನಾಗಿತ್ತು. ಜೊತೆಗೆ, ಐಸಿಸಿಯ ವರ್ಷದ ಅಸೋಸಿಯೇಟ್ ತಂಡ ಪ್ರಶಸ್ತಿಯನ್ನೂ ಅಮೆರಿಕಕ್ಕೆ ನೀಡಲಾಗಿತ್ತು.

ಆದರೆ, ಈ ವರ್ಷದ ಬೇಸಿಗೆಯಲ್ಲಿ ಈ ಬಾಂಧವ್ಯ ಮುರಿದು ಬಿದ್ದಿದೆ. ಅಮೆರಿಕನ್ ಕ್ರಿಕೆಟ್ ಎಂಟರ್‌ಪ್ರೈಸಸ್ ಪಾವತಿಸಬೇಕಾಗಿರುವ ಹಣವನ್ನು ಬಾಕಿಯಿಟ್ಟಿದೆ, ಮೂಲಸೌಕರ್ಯಕ್ಕೆ ಸಂಬಂಧಿಸಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಮತ್ತು ತನ್ನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬುದಾಗಿ ಯುಎಸ್‌ಎ ಕ್ರಿಕೆಟ್ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News