×
Ad

ಐಸಿಸಿ ಟೆಸ್ಟ್ ರ‍್ಯಾಂಕಿಂಗ್ | ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ ರಿಷಭ್ ಪಂತ್

Update: 2024-10-23 21:42 IST

ವಿರಾಟ್ ಕೊಹ್ಲಿ , ರಿಷಭ್ ಪಂತ್ | PTI 

ಹೊಸದಿಲ್ಲಿ : ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಬುಧವಾರ ಆರನೇ ಸ್ಥಾನಕ್ಕೇರಿರುವ ರಿಷಭ್ ಪಂತ್ ಸಹ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 99 ರನ್ ಗಳಿಸಿದ್ದ ಪಂತ್ ರ‍್ಯಾಂಕಿಂಗ್‌ನಲ್ಲಿ ಮೂರು ಸ್ಥಾನ ಮೇಲಕ್ಕೇರಿದ್ದಾರೆ. ಬೆಂಗಳೂರು ಟೆಸ್ಟ್‌ನಲ್ಲಿ 70 ರನ್ ಗಳಿಸಿದ್ದ ಕೊಹ್ಲಿ ಅವರು 7ನೇ ಸ್ಥಾನಕ್ಕೆ ಕುಸಿದಿದ್ದಾರೆ.

4ನೇ ರ‍್ಯಾಂಕಿನಲ್ಲಿರುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಈಗಲೂ ಭಾರತದ ಅಗ್ರ ರ‍್ಯಾಂಕಿನ ಬ್ಯಾಟರ್ ಆಗಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಎರಡು ಸ್ಥಾನ ಕೆಳ ಜಾರಿ ಶ್ರೀಲಂಕಾದ ಡಿಮುತ್ ಕರುಣರತ್ನೆ ಅವರೊಂದಿಗೆ 15ನೇ ಸ್ಥಾನ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.

ನ್ಯೂಝಿಲ್ಯಾಂಡ್‌ನ ರಚಿನ್ ರವೀಂದ್ರ(36 ಸ್ಥಾನ ಮೇಲಕ್ಕೇರಿ 18ನೇ ಸ್ಥಾನ) ಹಾಗೂ ಡೆವೊನ್ ಕಾನ್ವೆ(12 ಸ್ಥಾನ ಭಡ್ತಿ, 36ನೇ ರ‍್ಯಾಂಕ್)ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.

ನ್ಯೂಝಿಲ್ಯಾಂಡ್ ವೇಗಿ ಮ್ಯಾಟ್ ಹೆನ್ರಿ ಬೌಲಿಂಗ್ ವಿಭಾಗದಲ್ಲಿ ಎರಡು ಸ್ಥಾನ ಮೇಲಕ್ಕೇರಿ 9ನೇ ಸ್ಥಾನ ತಲುಪಿದ್ದಾರೆ.

ಬೆಂಗಳೂರಿನಲ್ಲಿ ಭಾರತ ವಿರುದ್ಧ 8 ವಿಕೆಟ್‌ಗಳಿಂದ ಜಯ ಸಾಧಿಸಿರುವ ಕಿವೀಸ್ ತಂಡದ ಪರ ಹೆನ್ರಿ ಒಟ್ಟು 8 ವಿಕೆಟ್‌ಗಳನ್ನು ಉರುಳಿಸಿದ್ದರು. ಮೊದಲ ಪಂದ್ಯದಲ್ಲಿ ಏಳು ವಿಕೆಟ್‌ಗಳನ್ನು ಉರುಳಿಸಿದ್ದ ಇನ್ನೋರ್ವ ವೇಗಿ ವಿಲ್ ಒ ರೂರ್ಕಿ ಎರಡು ಸ್ಥಾನ ಭಡ್ತಿ ಪಡೆದು 39ನೇ ಸ್ಥಾನ ತಲುಪಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ 11 ವಿಕೆಟ್‌ಗಳನ್ನು ಉರುಳಿಸಿದ್ದ ಪಾಕಿಸ್ತಾನದ ಸ್ಪಿನ್ನರ್ ನುಮಾನ್ ಅಲಿ ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನಕ್ಕೇರಿದ್ದಾರೆ. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಪಾಕ್‌ನ ಇನ್ನೋರ್ವ ಸ್ಪಿನ್ನರ್ ಸಾಜಿದ್ ಖಾನ್ 22 ಸ್ಥಾನ ಮೇಲಕ್ಕೇರಿ 50ನೇ ಸ್ಥಾನದಲ್ಲಿದ್ದಾರೆ.

ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆನಂತರ ಬುಮ್ರಾರ ಸಹ ಆಟಗಾರ ಆರ್. ಅಶ್ವಿನ್ ಇದ್ದಾರೆ. ಟಾಪ್-10ರಲ್ಲಿರುವ ಭಾರತದ ಇನ್ನೋರ್ವ ಬೌಲರ್ ಎಂದರೆ ರವೀಂದ್ರ ಜಡೇಜ. ಜಡೇಜ ಅವರು 7ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News