×
Ad

ಐಸಿಸಿ ಟೆಸ್ಟ್ ರ‍್ಯಾಂಕಿಂಗ್; ಗಿಲ್ ಜೀವನಶ್ರೇಷ್ಠ ಸಾಧನೆ, ಬ್ರೂಕ್ ವಿಶ್ವದ ನಂ.1 ಬ್ಯಾಟರ್

Update: 2025-07-09 20:44 IST

ಶುಭಮನ್ ಗಿಲ್, ಹ್ಯಾರಿ ಬ್ರೂಕ್ | PC : PTI

ದುಬೈ: ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಟೆಸ್ಟ್ ಆಟಗಾರರ ರ‍್ಯಾಂಕಿಂಗ್ ನಲ್ಲಿ ತಮ್ಮದೇ ದೇಶದ ಜೋ ರೂಟ್ ರನ್ನು ಹಿಂದಿಕ್ಕಿ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

ಎಜ್ಬಾಸ್ಟನ್ನಲ್ಲಿ ಭಾರತ ತಂಡದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 158 ರನ್ ಗಳಿಸಿದ ನಂತರ ಬ್ರೂಕ್ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದರು. ನಂ.1 ಸ್ಥಾನದಲ್ಲಿದ್ದ ರೂಟ್ 2ನೇ ಸ್ಥಾನಕ್ಕೆ ಕುಸಿದರು.

ಇದೇ ವೇಳೆ, ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ 2ನೇ ಟೆಸ್ಟ್ ಪಂದ್ಯದಲ್ಲಿ 269 ರನ್ ಹಾಗೂ 161 ರನ್ ಗಳಿಸಿದ ಹಿನ್ನೆಲೆಯಲ್ಲಿ ರ‍್ಯಾಂಕಿಂಗ್ ನಲ್ಲಿ ಜೀವನಶ್ರೇಷ್ಠ 6ನೇ ಸ್ಥಾನಕ್ಕೇರಿದ್ದಾರೆ. ಗಿಲ್ ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಗಿಲ್ ಅವರು ನಂ.1 ಬ್ಯಾಟರ್ ಬ್ರೂಕ್ಗಿಂತ ಕೇವಲ 79 ಪಾಯಿಂಟ್ಸ್ನಿಂದ ಹಿಂದಿದ್ದಾರೆ. ಬ್ರೂಕ್ ನಂತರ ರೂಟ್(2ನೇ), ಕೇನ್ ವಿಲಿಯಮ್ಸನ್(3ನೇ), ಯಶಸ್ವಿ ಜೈಸ್ವಾಲ್(4ನೇ) ಹಾಗೂ ಸ್ಟೀವ್ ಸ್ಮಿತ್(5ನೇ ಸ್ಥಾನ)ಅವರಿದ್ದಾರೆ.

ಭಾರತ ತಂಡದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಔಟಾಗದೆ 184 ರನ್ ಹಾಗೂ 88 ರನ್ ಗಳಿಸಿದ್ದ ಇಂಗ್ಲೆಂಡ್ ವಿಕೆಟ್ ಕೀಪರ್ ಜೇಮೀ ಸ್ಮಿತ್ 26ನೇ ಸ್ಥಾನದಿಂದ 10ನೇ ಸ್ಥಾನಕ್ಕೇರಿದ್ದಾರೆ.

ಝಿಂಬಾಬ್ವೆ ವಿರುದ್ಧ ಔಟಾಗದೆ 367 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ದರ್ 22ನೇ ಸ್ಥಾನಕ್ಕೇರಿದ್ದಾರೆ. ಮುಲ್ದರ್ 12 ಸ್ಥಾನ ಭಡ್ತಿ ಪಡೆದು, ಟೆಸ್ಟ್ ಆಲ್ ರೌಂಡರ್ ಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಭಾರತದ ರವೀಂದ್ರ ಜಡೇಜ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.

2ನೇ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದರೂ ಜಸ್ಪ್ರಿತ್ ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಬೌಲರ್ ಆಗಿ ಮುಂದುವರಿದಿದ್ದಾರೆ. ಬುಮ್ರಾ ಅವರ ಸಹ ಆಟಗಾರ ಮುಹಮ್ಮದ್ ಸಿರಾಜ್ 6 ಸ್ಥಾನ ಭಡ್ತಿ ಪಡೆದು ಬೌಲರ್ ಗಳ ಪಟ್ಟಿಯಲ್ಲಿ 22ನೇ ಸ್ಥಾನದಲ್ಲಿದ್ದಾರೆ.

ಏಕದಿನ ರ‍್ಯಾಂಕಿಂಗ್ ನಲ್ಲಿ ಶ್ರೀಲಂಕಾದ ಚರಿತ್ ಅಸಲಂಕ ಬ್ಯಾಟರ್ ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಕುಶಾಲ್ ಮೆಂಡಿಸ್ 10ನೇ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯ ವೇಳೆ 3 ಪಂದ್ಯಗಳಲ್ಲಿ ಒಟ್ಟು 9 ವಿಕೆಟ್ ಗಳನ್ನು ಪಡೆದಿರುವ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಬೌಲರ್ ಗಳ ರ‍್ಯಾಂಕಿಂಗ್ ನಲ್ಲಿ 8ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News