×
Ad

ಐಸಿಸಿ ಟೆಸ್ಟ್ ರ‍್ಯಾಂಕಿಂಗ್ಸ್ | ಸಿರಾಜ್, ಪ್ರಸಿದ್ಧ ಕೃಷ್ಣಗೆ ಜೀವನಶ್ರೇಷ್ಠ ಟೆಸ್ಟ್ ರ‍್ಯಾಂಕಿಂಗ್ಸ್

Update: 2025-08-06 22:34 IST

ಮುಹಮ್ಮದ್ ಸಿರಾಜ್ | PC : ICC

ದುಬೈ, ಆ. 6: ಇತ್ತೀಚಿನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ಸ್‌ ನಲ್ಲಿ ಭಾರತೀಯ ವೇಗಿ ಮುಹಮ್ಮದ್ ಸಿರಾಜ್ ಜೀವನಶ್ರೇಷ್ಠ 15ನೇ ಸ್ಥಾನವನ್ನು ಗಳಿಸಿದ್ದಾರೆ. ಇತ್ತೀಚೆಗೆ ಲಂಡನ್‌ ನ ಓವಲ್‌ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್‌ ನಲ್ಲಿ ಪಂದ್ಯ ಗೆಲ್ಲಿಸುವ ನಿರ್ವಹಣೆ ನೀಡಿದ ಬಳಿಕ ಅವರ ರ‍್ಯಾಂಕಿಂಗ್‌ ನಲ್ಲಿ ಹೆಚ್ಚಳವಾಗಿದೆ. ಅವರು ಈ ಪಂದ್ಯದಲ್ಲಿ ಒಂಭತ್ತು ವಿಕೆಟ್‌ ಗಳನ್ನು ಪಡೆದಿದ್ದಾರೆ.

ಈ ನಿರ್ವಹಣೆಯ ಆಧಾರದಲ್ಲಿ ಅವರ ರ‍್ಯಾಂಕಿಂಗ್ 12 ಸ್ಥಾನಗಳ ಜಿಗಿತ ಕಂಡಿದೆ. ಅವರು 674 ರ‍್ಯಾಂಕಿಂಗ್ ಅಂಕಗಳನ್ನು ಹೊಂದಿದ್ದಾರೆ. ಆ ಪಂದ್ಯವನ್ನು ಭಾರತ ಆರು ರನ್‌ಗಳ ಅಂತರದಿಂದ ರೋಮಾಂಚಕವಾಗಿ ಗೆದ್ದಿದೆ ಹಾಗೂ ಆ ಮೂಲಕ ಐದು ಪಂದ್ಯಗಳ ಸರಣಿಯನ್ನು 2-2ರಿಂದ ಸಮಬಲಗೊಳಿಸಿದೆ.

ಪಂದ್ಯದ ಕೊನೆಯ ದಿನದಂದು, ಗೆಲ್ಲಲು ಇಂಗ್ಲೆಂಡ್ 35 ರನ್‌ಗಳನ್ನು ಗಳಿಸಬೇಕಾಗಿತ್ತು ಹಾಗೂ ನಾಲ್ಕು ವಿಕೆಟ್‌ ಗಳು ಕೈಯಲ್ಲಿದ್ದವು. ಆದರೆ, ಅತ್ಯುತ್ತಮ ಪ್ರದರ್ಶನ ನೀಡಿದ ಸಿರಾಜ್ ಮೂರು ವಿಕೆಟ್‌ ಗಳನ್ನು ಉರುಳಿಸಿ ಭಾರತಕ್ಕೆ ಸ್ಮರಣಾರ್ಹ ವಿಜಯವೊಂದನ್ನು ಗಳಿಸಿಕೊಟ್ಟರು. ತನ್ನ ಶ್ರೇಷ್ಠ ನಿರ್ವಹಣೆಗಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಗಳಿಸಿದರು.

ಸಿರಾಜ್‌ರ ಈವರೆಗಿನ ಶ್ರೇಷ್ಠ ಐಸಿಸಿ ರ‍್ಯಾಂಕಿಂಗ್ 16 ಆಗಿತ್ತು. ಅದನ್ನು ಅವರು ಕಳೆದ ವರ್ಷದ ಜನವರಿಯಲ್ಲಿ ಗಳಿಸಿದ್ದರು.

ಭಾರತದ ಮುಂಚೂಣಿಯ ಬೌಲರ್ ಜಸ್‌ಪ್ರಿತ್ ಬುಮ್ರಾ, 889 ಅಂಕಗಳೊಂದಿಗೆ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅದೇ ವೇಳೆ, ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ ನಲ್ಲಿ ಮಿಂಚಿದ್ದ ಇನ್ನೋರ್ವ ಭಾರತೀಯ ಬೌಲರ್ ಪ್ರಸಿದ್ಧ ಕೃಷ್ಣ ಕೂಡ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ಸ್‌ನ ಬೌಲರ್‌ಗಳ ಪಟ್ಟಿಯಲ್ಲಿ ತನ್ನ ಜೀವನಶ್ರೇಷ್ಠ 59ನೇ ಸ್ಥಾನ ಪಡೆದುಕೊಂಡಿದ್ದಾರೆ.

ಬ್ಯಾಟರ್‌ಗಳ ಪಟ್ಟಿಯಲ್ಲಿ, ಭಾರತೀಯ ಆರಂಭಿಕ ಯಶಸ್ವಿ ಜೈಸ್ವಾಲ್ ಅಗ್ರ 5ರ ಸ್ಥಾನಕ್ಕೆ ಮರಳಿದ್ದಾರೆ. ಓವಲ್‌ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ ನಲ್ಲಿ ಸರಣಿಯ ತನ್ನ ಎರಡನೇ ಶತಕ ಬಾರಿಸಿರುವ ಹಿನ್ನೆಲೆಯಲ್ಲಿ ಅವರ ರ‍್ಯಾಂಕಿಂಗ್‌ ನಲ್ಲಿ ಏರಿಕೆಯಾಗಿದೆ. ಅವರು 792 ಅಂಕಗಳೊಂದಿಗೆ ಮೂರು ಸ್ಥಾನಗಳನ್ನು ಮೇಲೇರಿದ್ದಾರೆ. ಇನ್ನೋರ್ವ ಭಾರತೀಯ ಬ್ಯಾಟರ್ ರಿಶಭ್ ಪಂತ್ ಒಂದು ಸ್ಥಾನ ಜಾರಿ 8ನೇ ಸ್ಥಾನದಲ್ಲಿದ್ದಾರೆ. ಪಾದದ ಗಾಯದಿಂದಾಗಿ ಅವರು ಐದನೇ ಟೆಸ್ಟ್‌ ನಲ್ಲಿ ಆಡಿರಲಿಲ್ಲ.

ಬ್ಯಾಟರ್‌ಗಳ ಪಟ್ಟಿಯಲ್ಲಿ, ಇಂಗ್ಲೆಂಡ್‌ನ ಜೋ ರೂಟ್ ತನ್ನ ಅಗ್ರ ಸ್ಥಾನವನ್ನು ಬಲಪಡಿಸಿಕೊಂಡಿದ್ದಾರೆ. ಅವರು ಭಾರತ ವಿರುದ್ಧದ ಸರಣಿಯಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News