ಐಸಿಸಿ ಮಹಿಳಾ ಏಕದಿನ ವಿಶ್ವಕಪ್ | ದಕ್ಷಿಣ ಆಫ್ರಿಕಕ್ಕೆ ಪ್ರಯಾಸದ 3 ವಿಕೆಟ್ ಜಯ
Photo Credit : icc-cricket.com
ವಿಶಾಖಪಟ್ಟಣಂ, ಅ. 13: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸೋಮವಾರ ದಕ್ಷಿಣ ಆಫ್ರಿಕ ಮಹಿಳೆಯರು ಬಾಂಗ್ಲಾದೇಶಿ ಮಹಿಳೆಯರನ್ನು ಮೂರು ವಿಕೆಟ್ ಗಳಿಂದ ಸೋಲಿಸಿದ್ದಾರೆ.
ವಿಶಾಖಪಟ್ಟಣಂನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ- ವಿಡಿಸಿಎ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಗೆಲ್ಲಲು 50 ಓವರ್‌ಗಳಲ್ಲಿ 233 ರನ್‌ಗಳ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕ 49.3 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 235 ರನ್ ಗಳಿಸಿ ವಿಜಯವನ್ನು ಘೋಷಿಸಿತು.
ಅರ್ಧ ಶತಕಗಳನ್ನು ಸಿಡಿಸಿದ ಮರಿಝಾನ್ ಕಾಪ್ (71 ಎಸೆತಗಳಲ್ಲಿ 56 ರನ್) ಮತ್ತು ಕ್ಲೋ ಟ್ರಯೋನ್ (69 ಎಸೆತಗಳಲ್ಲಿ 62 ರನ್) ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.
ನಾಯಕಿ ಹಾಗೂ ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಟ್ (31) ಉತ್ತಮ ಆರಂಭ ಒದಗಿಸಿದರು. ಅನೀಕ್ ಬೋಶ್ (28) ಮತ್ತು ಕೊನೆಯಲ್ಲಿ ನದೀನ್ ಡಿ ಕ್ಲರ್ಕ್ (37) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಬಾಂಗ್ಲಾದೇಶದ ನಹೀದಾ ಅಖ್ತರ್ 2 ವಿಕೆಟ್ ಉರುಳಿಸಿದರು.
ಇದಕ್ಕೂ ಮೊದಲು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮಹಿಳೆಯರು ಶಮೀನ್ ಅಖ್ತರ್ ಮತ್ತು ಶೊರ್ನಾ ಅಖ್ತರ್‌ರ ಅರ್ಧ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 232 ರನ್‌ಗಳನ್ನು ಗಳಿಸಿತು.
ಶರ್ಮೀನ್ 77 ಎಸೆತಗಳಿಂದ 50 ರನ್‌ಗಳನ್ನು ಗಳಿಸಿದರೆ, ಶೊರ್ನಾ 35 ಎಸೆತಗಳಲ್ಲಿ 51 ರನ್‌ಗಳನ್ನು ಸಿಡಿಸಿ ಅಜೇಯವಾಗಿ ಉಳಿದರು.
ಬಾಂಗ್ಲಾದೇಶಕ್ಕೆ ಆರಂಭಿಕ ಬ್ಯಾಟರ್‌ಗಳು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಆಸರೆಯೊದಗಿಸಿದರು. ಅದರ ಕೆಳ ಕ್ರಮಾಂಕದ ಬ್ಯಾಟರ್‌ಗಳು ಇನಿಂಗ್ಸ್‌ನ ಅಂತಿಮ ಘಟ್ಟದಲ್ಲಿ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದರು.
ಆರಂಭಿಕರಾದ ಫರ್ಜಾನಾ ಹಕ್ (30) ಮತ್ತು ರುಬಿಯಾ ಹೈದರ್ (25) ಮೊದಲ ವಿಕೆಟ್‌ಗೆ 53 ರನ್‌ಗಳನ್ನು ಸೇರಿಸಿದರು.
ನಾಯಕಿ ನಿಗರ್ ಸುಲ್ತಾನಾ 32 ರನ್‌ಗಳ ದೇಣಿಗೆ ನೀಡಿದರೆ, ಕೊನೆಯಲ್ಲಿ ರೀತು ಮೋನಿ 8 ಎಸೆತಗಳಲ್ಲಿ 19 ರನ್‌ಗಳನ್ನು ಸಿಡಿಸಿ ಅಜೇಯವಾಗಿ ಉಳಿದರು.
ದಕ್ಷಿಣ ಆಫ್ರಿಕದ ನೊಂಕುಲುಲೆಕೊ ಮಲಬ 42 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಉರುಳಿಸಿದರು.