ದ್ವಿತೀಯ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಸೋಲು; ಸರಣಿ ಗೆದ್ದ ಆಸ್ಟ್ರೇಲಿಯ
ಅಡಿಲೇಡ್‌ನಲ್ಲಿ 17 ವರ್ಷಗಳ ನಂತರ ಮೊದಲ ಬಾರಿ ಸೋತ ಭಾರತ
Image: JioHotstar
ಅಡಿಲೇಡ್: ಟೀಮ್ ಇಂಡಿಯಾ ಕೊನೆಯ ತನಕ ಹೋರಾಟ ನೀಡಿದ್ದರೂ ಆತಿಥೇಯ ಆಸ್ಟ್ರೇಲಿಯ ಕ್ರಿಕೆಟ್ ತಂಡವು 2ನೇ ಏಕದಿನ ಪಂದ್ಯವನ್ನು 2 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡು 3 ಪಂದ್ಯಗಳ ಸರಣಿಯನ್ನು ಇನ್ನೂ 1 ಪಂದ್ಯ ಬಾಕಿ ಇರುವಾಗಲೇ 2-0 ಅಂತರದಿಂದ ವಶಪಡಿಸಿಕೊಂಡಿದೆ.
2008ರಿಂದ ಅಡಿಲೇಡ್ ಓವಲ್‌ನಲ್ಲಿ ಆರು ಏಕದಿನ ಪಂದ್ಯಗಳನ್ನು ಆಡಿರುವ ಭಾರತ ತಂಡವು ಇದೇ ಮೊದಲ ಬಾರಿ 17 ವರ್ಷಗಳ ನಂತರ ಸೋಲುಂಡಿದೆ.
ಗುರುವಾರ ಗೆಲ್ಲಲು 265 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ 46.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಕೂಪರ್ ಕೊನೊಲ್ಲಿ(ಔಟಾಗದೆ 61, 53 ಎಸೆತ, 5 ಬೌಂಡರಿ,1 ಸಿಕ್ಸರ್)ಆಸ್ಟ್ರೇಲಿಯಕ್ಕೆ ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು. ಮ್ಯಾಥ್ಯೂ ಶಾರ್ಟ್(74 ರನ್, 78 ಎಸೆತ, 4 ಬೌಂಡರಿ, 2 ಸಿಕ್ಸರ್)ಅಮೂಲ್ಯ ಕೊಡುಗೆ ನೀಡಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವನ್ನು 264 ರನ್‌ಗೆ ನಿಯಂತ್ರಿಸಿದ್ದ ಆ್ಯಡಮ್ ಝಂಪಾ ‘ಪಂದ್ಯಶ್ರೇಷ್ಠ‘ ಪ್ರಶಸ್ತಿಗೆ ಭಾಜನರಾದರು.
ಮೊದಲ ಏಕದಿನ ಪಂದ್ಯಕ್ಕೆ ಹೋಲಿಸಿದರೆ ಗುರುವಾರ ನಡೆದ 2ನೇ ಪಂದ್ಯದಲ್ಲಿ ಭಾರತ ಸುಧಾರಿತ ಪ್ರದರ್ಶನ ನೀಡಿತು.
ಆಸ್ಟ್ರೇಲಿಯ ತಂಡದ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸಮರ್ಥಿಸಿಕೊಂಡ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಹಾಗೂ ಕ್ಸೇವಿಯರ್ ಬಾರ್ಟ್ಲೆಟ್ ಭಾರತದ ಅಗ್ರ ಸರದಿಗೆ ಸವಾಲಾದರು.
ನಾಯಕ ಶುಭಮನ್ ಗಿಲ್(9 ರನ್) ಅಲ್ಪ ಮೊತ್ತಕ್ಕೆ ಔಟಾದರು. ವಿರಾಟ್ ಕೊಹ್ಲಿ ಸತತ 2ನೇ ಬಾರಿ ಸೊನ್ನೆ ಸುತ್ತಿದರು. ರೋಹಿತ್ ಶರ್ಮಾ(73 ರನ್, 96 ಎಸೆತ)ಹಾಗೂ ಶ್ರೇಯಸ್ ಅಯ್ಯರ್(61 ರನ್, 77 ಎಸೆತ)ಮೂರನೇ ವಿಕೆಟ್‌ಗೆ 118 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ರೋಹಿತ್ ವಿಕೆಟನ್ನು ಉರುಳಿಸಿದ ಸ್ಟಾರ್ಕ್ ಈ ಜೋಡಿಯನ್ನು ಬೇರ್ಪಡಿಸಿದರು. ಶ್ರೇಯಸ್ ಹಾಗೂ ಕೆ.ಎಲ್.ರಾಹುಲ್(11 ರನ್) ವಿಕೆಟನ್ನು ಬೆನ್ನುಬೆನ್ನಿಗೆ ಕಬಳಿಸಿದ ಸ್ಪಿನ್ನರ್ ಝಂಪಾ ಭಾರತಕ್ಕೆ ಹಿನ್ನಡೆವುಂಟು ಮಾಡಿದರು. ಅಕ್ಷರ್ ಪಟೇಲ್ 44 ರನ್(41 ಎಸೆತ) ಗಳಿಸಿದ್ದರೂ ಅವರಿಗೆ ಮತ್ತೊಂದು ಕಡೆಯಿಂದ ಬೆಂಬಲ ಸಿಗಲಿಲ್ಲ. ವಾಶಿಂಗ್ಟನ್ ಸುಂದರ್(12 ರನ್) ಹಾಗೂ ನಿತೀಶ್ ಕುಮಾರ್ ರೆಡ್ಡಿ (8 ರನ್) ವಿಫಲರಾದರು.
ಅಯ್ಯರ್ ವಿಕೆಟ್ ಪತನಗೊಂಡ ನಂತರ ಭಾರತವು ತನ್ನ ಹಿಡಿತ ಕಳೆದುಕೊಂಡಿತು. ಒಂದು ಹಂತದಲ್ಲಿ 226 ರನ್‌ಗೆ 8 ವಿಕೆಟ್ ಕಳೆದುಕೊಂಡಿತು. ಆಗ ಹರ್ಷಿತ್ ರಾಣಾ(ಔಟಾಗದೆ 24, 18 ಎಸೆತ)ಹಾಗೂ ಅರ್ಷದೀಪ್ ಸಿಂಗ್(13 ರನ್, 14 ಎಸೆತ)9ನೇ ವಿಕೆಟ್‌ಗೆ 37 ರನ್ ಜೊತೆಯಾಟ ನಡೆಸಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕೆಕ 264 ರನ್ ಗಳಿಸಲು ನೆರವಾದರು.
ಆಸ್ಟ್ರೇಲಿಯದ ಪರ ಸ್ಪಿನ್ನರ್ ಝಂಪಾ(4-60)ಯಶಸ್ವಿ ಪ್ರದರ್ಶನ ನೀಡಿದರು. ಬಾರ್ಟ್ಲೆಟ್(3-39)ಹಾಗೂ ಸ್ಟಾರ್ಕ್(2-62)ಐದು ವಿಕೆಟ್‌ಗಳನ್ನು ಹಂಚಿಕೊಂಡರು. ಹೇಝಲ್‌ವುಡ್ 10 ಓವರ್‌ಗಳಲ್ಲಿ ಕೇವಲ 29 ರನ್ ನೀಡಿದರು.
ಆಸ್ಟ್ರೇಲಿಯದ ಇನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್(28 ರನ್, 40 ಎಸೆತ) ಹಾಗೂ ಮಾರ್ಷ್(11 ರನ್, 24 ಎಸೆತ) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ಇಬ್ಬರು ಮೊದಲ ವಿಕೆಟ್‌ಗೆ 30 ರನ್ ಸೇರಿಸಿದರು.
ಮ್ಯಾಟ್ ಶಾರ್ಟ್(74 ರನ್) ಹಾಗೂ ಮ್ಯಾಥ್ಯೂ ರೆನ್‌ಶಾ(30 ರನ್, 30 ಎಸೆತ) ಸಮಯೋಚಿತ ಬೌಂಡರಿಗಳ ಮೂಲಕ ಇನಿಂಗ್ಸ್ ಆಧರಿಸಿದರು. 2 ಬಾರಿ ಜೀವದಾನ ಪಡೆದ ಶಾರ್ಟ್ ತನ್ನ ಅರ್ಧಶತಕವನ್ನು ಪೂರೈಸಿದರು. ಶಾರ್ಟ್ ಔಟಾದ ನಂತರ ಮಿಚೆಲ್ ಓವನ್(36 ರನ್,23 ಎಸೆತ) ಪಂದ್ಯವನ್ನು ಬೇಗನೆ ಕೊನೆಗೊಳಿಸಲು ಯತ್ನಿಸಿದರು. ಮತ್ತೊಂದೆಡೆ ಕೂಪರ್ ಕೊನೊಲ್ಲಿ ಅನುಭವಿ ಆಟಗಾರನಂತೆ ಆಡಿದ್ದು, ತನ್ನ ಚೊಚ್ಚಲ ಅರ್ಧಶತಕ ಗಳಿಸಿದರು.
ಕ್ಸೇವಿಯರ್ ಬಾರ್ಟ್ಲೆಟ್ ಹಾಗೂ ಓವನ್ ಬೆನ್ನುಬೆನ್ನಿಗೆ ಔಟಾದರೂ ಕೊನೊಲ್ಲಿ ಔಟಾಗದೆ 61 ರನ್(53 ಎಸೆತ,5 ಬೌಂಡರಿ, 1 ಸಿಕ್ಸರ್)ಗಳಿಸುವುದರೊಂದಿಗೆ ಆಸ್ಟ್ರೇಲಿಯ ತಂಡವನ್ನು ಗೆಲುವಿನ ದಡ ಸೇರಿಸಿದರು.
ಭಾರತದ ಬೌಲಿಂಗ್‌ನಲ್ಲಿ ಸುಂದರ್(2-37), ಅರ್ಷದೀಪ್(2-41)ಹಾಗೂ ಹರ್ಷಿತ್ ರಾಣಾ(2-59)ತಲಾ 2 ವಿಕೆಟ್‌ಗಳನ್ನು ಪಡೆದರು.
ಅ.25ರಂದು ಶನಿವಾರ ಸಿಡ್ನಿಯಲ್ಲಿ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ನಡೆಯಲಿದೆ.