ಸುನೀಲ್ ಗವಾಸ್ಕರ್ ರ 49 ವರ್ಷ ಹಳೆಯ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್
Photo : PTI
ಬರ್ಮಿಂಗ್‌ಹ್ಯಾಮ್: ನಿರ್ಭೀತಿಯ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ಕ್ರಿಕೆಟ್ ತಂಡದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ತಾನಾಡಿದ 21ನೇ ಟೆಸ್ಟ್ ಪಂದ್ಯದ 40ನೇ ಇನಿಂಗ್ಸ್ ನಲ್ಲಿ 2,000 ಟೆಸ್ಟ್ ರನ್ ಪೂರೈಸುವುದರೊಂದಿಗೆ ಕ್ರಿಕೆಟ್ ಲೆಜೆಂಡ್ ಸುನೀಲ್ ಗವಾಸ್ಕರ್(23 ಟೆಸ್ಟ್) ಅವರ 49 ವರ್ಷ ಹಳೆಯ ದಾಖಲೆಯೊಂದನ್ನು ಮುರಿದರು. ಲೆಜೆಂಡ್ ಗಳಾದ ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಈ ಇಬ್ಬರು ಆಟಗಾರರು ತಲಾ 25 ಟೆಸ್ಟ್ ಪಂದ್ಯಗಳ 40ನೇ ಇನಿಂಗ್ಸ್ ಗಳಲ್ಲಿ 2,000 ರನ್ ಪೂರೈಸಿದ್ದಾರೆ.
23ರ ಹರೆಯದ ಎಡಗೈ ಬ್ಯಾಟರ್ ಜೈಸ್ವಾಲ್ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಈ ಮೈಲಿಗಲ್ಲು ತಲುಪಿದರು.
ಜೈಸ್ವಾಲ್ ಕೇವಲ 40 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದರು. ದ್ರಾವಿಡ್ ಹಾಗೂ ಸೆಹ್ವಾಗ್ರ ದಾಖಲೆಯನ್ನು ಸರಿಗಟ್ಟಿದರು. ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸುನೀಲ್ ಗವಾಸ್ಕರ್ ಹಾಗೂ ವಿಜಯ್ ಹಝಾರೆ ಅವರ ದಾಖಲೆಯನ್ನು ಮುರಿದರು.
ಆಡಿರುವ ಒಟ್ಟು ಪಂದ್ಯಗಳ ಲೆಕ್ಕಾಚಾರದಲ್ಲಿ ಜೈಸ್ವಾಲ್ ಅವರು ವೇಗವಾಗಿ 2,000 ಟೆಸ್ಟ್ ರನ್ ಪೂರೈಸಿದ ಭಾರತದ ಏಕೈಕ ಆಟಗಾರನಾಗಿದ್ದಾರೆ. ಜೈಸ್ವಾಲ್ ತನ್ನ 21ನೇ ಟೆಸ್ಟ್ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಗವಾಸ್ಕರ್ ಅವರ ದೀರ್ಘಕಾಲದ ದಾಖಲೆ(23 ಟೆಸ್ಟ್ನಲ್ಲಿ 2,000 ರನ್)ಯನ್ನು ಮುರಿದರು.
ಜೈಸ್ವಾಲ್ ಅವರು ಬೌಂಡರಿ ಬಾರಿಸುವ ಮೂಲಕ 2 ಸಾವಿರ ರನ್ ಪೂರೈಸಿದರು.
23 ವರ್ಷ, 188 ದಿನಗಳ ವಯಸ್ಸಿನ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ ನಲ್ಲಿ 2 ಸಾವಿರ ರನ್ ಪೂರೈಸಿರುವ ಭಾರತದ 2ನೇ ಕಿರಿಯ ಆಟಗಾರನಾಗಿದ್ದಾರೆ. ತೆಂಡುಲ್ಕರ್ 20 ವರ್ಷ ಹಾಗೂ 330 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ಭಾರತದ ಅತಿ ಕಿರಿಯ ಆಟಗಾರನಾಗಿದ್ದರು.
ಜೈಸ್ವಾಲ್ 22 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಇದರಲ್ಲಿ 6 ಬೌಂಡರಿಗಳಿದ್ದವು.
ಜೈಸ್ವಾಲ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ 13 ರನ್ನಿಂದ ಅರ್ಹ ಶತಕದಿಂದ ವಂಚಿತರಾಗಿದ್ದರು. 87 ರನ್ ಗಳಿಸಿ ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದ್ದರು. ಜೈಸ್ವಾಲ್ರ ಸ್ಥಿರ ಪ್ರದರ್ಶನ ಹಾಗೂ ಆತ್ಮವಿಶ್ವಾಸವು ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಹೊಸ ಶಕ್ತಿ ತುಂಬಿದೆ.
►ಕಡಿಮೆ ಇನಿಂಗ್ಸ್ ನಳಲ್ಲಿ 2,000 ಟೆಸ್ಟ್ ರನ್ ಗಳಿಸಿದ ಭಾರತದ ಬ್ಯಾಟರ್ಗಳು
40-ರಾಹುಲ್ ದ್ರಾವಿಡ್/ವೀರೇಂದ್ರ ಸೆಹ್ವಾಗ್/ಯಶಸ್ವಿ ಜೈಸ್ವಾಲ್
43-ವಿಜಯ್ ಹಝಾರೆ/ಗೌತಮ್ ಗಂಭೀರ್
44-ಸುನೀಲ್ ಗವಾಸ್ಕರ್/ಸಚಿನ್ ತೆಂಡುಲ್ಕರ್
45-ಸೌರವ್ ಗಂಗುಲಿ
46-ಚೇತೇಶ್ವರ ಪೂಜಾರ