ಐದನೇ ಟಿ-20: ನ್ಯೂಝಿಲ್ಯಾಂಡ್ ಗೆಲುವಿಗೆ 272 ರನ್ ಗುರಿ
ಇಶಾನ್ ಕಿಶನ್ ಶತಕ, ಸೂರ್ಯಕುಮಾರ ಅರ್ಧಶತಕ
ಇಶಾನ್ ಕಿಶನ್ | Photo Credit : X
ತಿರುವನಂತಪುರ: ಇಶಾನ್ ಕಿಶನ್ ಶತಕ(103 ರನ್, 43 ಎಸೆತ, 6 ಬೌಂಡರಿ, 10 ಸಿಕ್ಸರ್)ಹಾಗೂ ಸೂರ್ಯಕುಮಾರ್ ಯಾದವ್(63 ರನ್, 30 ಎಸೆತ, 4 ಬೌಂಡರಿ, 6 ಸಿಕ್ಸರ್)ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ತಂಡಕ್ಕೆ ಐದನೇ ಹಾಗೂ ಅಂತಿಮ ಟಿ-20 ಪಂದ್ಯದ ಗೆಲುವಿಗೆ 272 ರನ್ ಗುರಿ ನಿಗದಿಪಡಿಸಿದೆ.
ಶನಿವಾರ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 271 ರನ್ ಗಳಿಸುವಲ್ಲಿ ಶಕ್ತವಾಯಿತು.
ಅಭಿಷೇಕ್ ಶರ್ಮಾ(30 ರನ್, 16 ಎಸೆತ)ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಕೇರಳದ ಬ್ಯಾಟರ್ ಸಂಜು ಸ್ಯಾಮ್ಸನ್ ಕೇವಲ 6 ರನ್ ಗಳಿಸಿ ಫರ್ಗ್ಯುಸನ್‌ಗೆ ವಿಕೆಟ್ ಒಪ್ಪಿಸಿದರು. ಅಭಿಷೇಕ್ 16 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ಸಹಿತ 30 ರನ್ ಗಳಿಸಿ ಬಿರುಸಿನ ಆರಂಭ ಒದಗಿಸಿದರು.
ಅಭಿಷೇಕ್ ಶರ್ಮಾ ಕೂಡ ಫರ್ಗ್ಯುಸನ್‌ಗೆ ಎರಡನೇ ಬಲಿಯಾದರು.
ಆರಂಭಿಕ ವಿಕೆಟ್‌ಗಳು ಉರುಳಿದಾಗ ಜೊತೆಯಾದ ಇಶಾನ್ ಕಿಶನ್ ಹಾಗೂ ನಾಯಕ ಸೂರ್ಯಕುಮಾರ್ ಮೂರನೇ ವಿಕೆಟ್‌ಗೆ 137 ರನ್ ಜೊತೆಯಾಟ ನಡೆಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ಭಾರತ ತಂಡದ ನಾಯಕ ಸೂರ್ಯಕುಮಾರ್ ಜೇಕಬ್ ಡಫಿ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್‌ಗಳನ್ನು ಸಿಡಿಸಿ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಸರಣಿಯಲ್ಲಿ ಮೂರನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದರು.
ಸೂರ್ಯಕುಮಾರ್ 63 ರನ್ ಗಳಿಸಿ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು. ಹಾರ್ದಿಕ ಪಾಂಡ್ಯ ಜೊತೆ ಕೈಜೋಡಿಸಿದ ಕಿಶನ್ ನಾಲ್ಕನೇ ವಿಕೆಟ್‌ಗೆ ಕೇವಲ 18 ಎಸೆತಗಳಲ್ಲಿ 48 ರನ್ ಕಲೆ ಹಾಕಿದರು.
ಇನಿಂಗ್ಸ್‌ನ ಒಂದೇ ಓವರ್‌ನಲ್ಲಿ 25 ರನ್ ಸಹಿತ 1 ವಿಕೆಟ್ ಪಡೆದು ಒಟ್ಟು 60 ರನ್ ನೀಡಿದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ದುಬಾರಿ ಬೌಲರ್ ಎನಿಸಿಕೊಂಡರು.
ಟಿ-20 ವಿಶ್ವಕಪ್‌ಗಿಂತ ಮೊದಲು ಆಡಿದ ತನ್ನ ಕೊನೆಯ ಟಿ-20 ಪಂದ್ಯದಲ್ಲಿ ಟಾಸ್ ಜಯಿಸಿದ ಸೂರ್ಯಕುಮಾರ್ ತನ್ನ ಬ್ಯಾಟಿಂಗ್ ಶಕ್ತಿ ಪರೀಕ್ಷಿಸಲು ಮುಂದಾದರು.
ಭಾರತ ತಂಡವು ಹರ್ಷಿತ್ ರಾಣಾ, ಕುಲದೀಪ ಯಾದವ್ ಹಾಗೂ ರವಿ ಬಿಷ್ಣೋಯಿಗೆ ವಿಶ್ರಾಂತಿ ನೀಡಿ ಇಶಾನ್ ಕಿಶನ್, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿಗೆ ಅವಕಾಶ ನೀಡಿತು.
ನ್ಯೂಝಿಲ್ಯಾಂಡ್ ನಾಲ್ಕು ಬದಲಾವಣೆಗಳನ್ನು ಮಾಡಿದ್ದು, ಫಿನ್ ಅಲ್ಲೆನ್, ಬೆವನ್ ಜೇಕಬ್ಸ್, ಜೆಮೀಸನ್ ಹಾಗೂ ಫರ್ಗ್ಯುಸನ್ ಅವಕಾಶ ಪಡೆದಿದ್ದಾರೆ.