‘ಗಂಭೀರ’ ಒತ್ತಡ: ಭಾರತದ ಕ್ರಿಕೆಟ್ ಬಗ್ಗೆ ದಕ್ಷಿಣ ಆಫ್ರಿಕಾ ನಾಯಕ ಹೇಳಿದ್ದೇನು?
PC: x.com/CricketNDTV
ಭಾರತ ಕ್ರಿಕೆಟ್ ತಂಡ ಗಂಭೀರ ಪ್ರಕ್ಷುಬ್ಧ ಸ್ಥಿತಿಯನ್ನು ಎದುರಿಸುತ್ತಿರುವ ನಡುವೆಯೇ, ಮುಖ್ಯ ಕೋಚ್ ಗೌತಮ್ ಗಂಭೀರ್ ಮೇಲೆ ಭಾರಿ ಒತ್ತಡ ನಿರ್ಮಾಣವಾಗಿದೆ. ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ 0–2 ಅಂತರದಲ್ಲಿ ಟೆಸ್ಟ್ ಸರಣಿ ಸೋಲು ಅನುಭವಿಸಿರುವುದಲ್ಲದೆ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲೂ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಗಂಭೀರ್ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಗಂಭೀರ್ ಅವರ ಅಧಿಕಾರಾವಧಿಯಲ್ಲಿ ಮಿಶ್ರ ಫಲಿತಾಂಶಗಳು ದಾಖಲಾಗಿದ್ದರೂ, ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಭಾರತದ ಪತನ ಆತಂಕಕ್ಕೆ ಕಾರಣವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರತ ಐದನೇ ಸ್ಥಾನಕ್ಕೆ ಕುಸಿದಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಇವೆಲ್ಲದರ ನಡುವೆಯೂ ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾ ಕಪ್ ಗೆಲುವುಗಳು ಗಂಭೀರ್ ಅವಧಿಯ ಧನಾತ್ಮಕ ಅಂಶಗಳಾಗಿ ಹೊರಹೊಮ್ಮಿವೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿನ ಪತನ ಈ ಎಲ್ಲಾ ಯಶಸ್ಸುಗಳನ್ನು ಮಸುಕುಗೊಳಿಸಿದೆ. ಇಂಗ್ಲೆಂಡ್ ವಿರುದ್ಧ 2–2 ಡ್ರಾ ಸಾಧಿಸುವ ಮೂಲಕ ಶುಭಾರಂಭದ ಸಂಕೇತ ಕಂಡುಬಂದಿದ್ದರೂ, ನಂತರ ಎದುರಾದ ಎರಡು ಕ್ಲೀನ್‌ಸ್ವೀಪ್ ಸೋಲುಗಳು ದೊಡ್ಡ ಆಘಾತಕ್ಕೆ ಕಾರಣವಾಗಿವೆ.
ಇಂತಹದೇ ಪರಿಸ್ಥಿತಿಯನ್ನು ನಾಯಕತ್ವದ ಆರಂಭಿಕ ಹಂತದಲ್ಲಿ ಎದುರಿಸಿದ್ದ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವೂಮಾ, ಭಾರತದ ಇತ್ತೀಚಿನ ಸಾಧನೆಯನ್ನು ವಿಶ್ಲೇಷಿಸುತ್ತಾ ಭಾರತದ ಅಗ್ನಿಪರೀಕ್ಷೆ ಇನ್ನೂ ಮುಗಿದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಮುಖ್ಯ ಕೋಚ್ ಮೇಲೆ ‘ಗಂಭೀರ’ ಒತ್ತಡ ಇದೆ. ಆದರೆ ಅವರು ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಭಾರತದ ತಂಡದ ಆಳತೆ, ಗಂಭೀರ್ ಅವರ ಮೇಲಿನ ಒತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಲ್ಲದು ಎಂದು ಬವೂಮಾ ಅಭಿಪ್ರಾಯಪಟ್ಟಿದ್ದಾರೆ. ಸೀಮಿತ ಓವರ್ ಪಂದ್ಯಗಳಲ್ಲಿ ಭಾರತಕ್ಕೆ ಸಂಪನ್ಮೂಲಗಳ ಆಯ್ಕೆ ಹೇರಳವಾಗಿದೆ. 2026ರ ಟಿ20 ವಿಶ್ವಕಪ್ ಭಾರತದ ಪಾಲಿಗೆ ಅನುಕೂಲಕರವಾಗಿದೆ. ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಚ್ಚಿನ ಜವಾಬ್ದಾರಿ ಹೊತ್ತಿರುವುದರಿಂದ, ಗಂಭೀರ್ ಅವರ ಸ್ಥಾನಮಾನ ಕುರಿತು ದೊಡ್ಡ ಸಮಸ್ಯೆಯಾಗುವುದಿಲ್ಲ ಎಂದು ಅವರು ಹೇಳಿದರು. ಆದಾಗ್ಯೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕಠಿಣ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ವಿವರಿಸಿದ್ದಾರೆ.