ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ ಪ್ಯಾಟ್ ಕಮಿನ್ಸ್; ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಹಿನ್ನಡೆ
ಪ್ಯಾಟ್ ಕಮಿನ್ಸ್ | Photo Credit : AP \ PTI
ಮೆಲ್ಬರ್ನ್: ಗಾಯದ ಸಮಸ್ಯೆಯ ಕಾರಣದಿಂದ ಪ್ಯಾಟ್ ಕಮಿನ್ಸ್ ಅವರು ಪುರುಷರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದು, ಈ ಬೆಳವಣಿಗೆಯು ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ತೀವ್ರ ಹಿನ್ನಡೆವುಂಟು ಮಾಡಿದೆ.
ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯು 15 ಸದಸ್ಯರ ಪುರುಷರ ತಂಡವನ್ನು ಶನಿವಾರ ದೃಢಪಡಿಸಿದೆ. 2021ರ ಟಿ-20 ಚಾಂಪಿಯನ್ ಆಸ್ಟ್ರೇಲಿಯ ತಂಡಕ್ಕೆ ಮಿಚೆಲ್ ಮಾರ್ಷ್ ನಾಯಕತ್ವವಹಿಸಿದ್ದಾರೆ.
ಕಮಿನ್ಸ್ ಅವರು ಬೆನ್ನುನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಜಾಗತಿಕ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ ಎಂದು ಐಸಿಸಿ ವೆಬ್‌ಸೈಟ್ ತಿಳಿಸಿದೆ.
ಅಗ್ರ ಸರದಿಯ ಬ್ಯಾಟರ್ ಮ್ಯಾಥ್ಯೂ ಶಾರ್ಟ್ ಕೂಡ ಹೊರಗುಳಿದಿದ್ದಾರೆ. ಈ ಇಬ್ಬರ ಬದಲಿಗೆ ಬೆನ್ ಡ್ವಾರ್ಶುಯಿಸ್ ಹಾಗೂ ಮ್ಯಾಥ್ಯೂ ರೆನ್‌ಶಾ ಆಯ್ಕೆಯಾಗಿದ್ದಾರೆ.
‘‘ಪ್ಯಾಟ್‌ಗೆ ಬೆನ್ನುನೋವಿನಿಂದ ಚೇತರಿಸಿಕೊಳ್ಳಲು ಇನ್ನಷ್ಟು ಸಮಯದ ಅಗತ್ಯವಿದೆ. ಎಡಗೈ ವೇಗದ ಬೌಲಿಂಗ್, ಡೈನಾಮಿಕ್ ಫೀಲ್ಡಿಂಗ್ ಹಾಗೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಬೆನ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಉತ್ತಮ ವೇಗದೊಂದಿಗೆ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ’’ ಎಂದು ಆಯ್ಕೆಗಾರ ಟೋನಿ ಡೊಡ್‌ಮೈಡ್ ಹೇಳಿದ್ದಾರೆ.
ಆಸ್ಟ್ರೇಲಿಯ ತಂಡವು ವಿಶ್ವಕಪ್‌ನಲ್ಲಿ ‘ಬಿ’ ಗುಂಪಿನಲ್ಲಿ ಐರ್‌ಲ್ಯಾಂಡ್, ಝಿಂಬಾಬ್ವೆ, ಶ್ರೀಲಂಕಾ ಹಾಗೂ ಒಮಾನ್ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಫೆಬ್ರವರಿ 11ರಂದು ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಐರ್‌ಲ್ಯಾಂಡ್ ತಂಡದ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಆಸ್ಟ್ರೇಲಿಯದ ವಿಶ್ವಕಪ್ ತಂಡ: ಮಿಚೆಲ್ ಮಾರ್ಷ್(ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲ್ಲಿ, ಟಿಮ್ ಡೇವಿಡ್, ಬೆನ್ ಡ್ವಾರ್ಶುಯಿಸ್, ಕ್ಯಾಮರೂನ್ ಗ್ರೀನ್, ನಾಥನ್ ಎಲ್ಲಿಸ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನ್ನೆೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ರೆನ್‌ಶಾ, ಮಾರ್ಕಸ್ ಸ್ಟೋಯಿನಿಸ್, ಆ್ಯಡಮ್ ಝಂಪಾ.