11ನೇ ಬಾರಿ ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ಜೊಕೊವಿಕ್
ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ ಹಿರಿಯ ಆಟಗಾರ ನೊವಾಕ್ ಜೊಕೊವಿಕ್, ಎದುರಾಳಿ ಜನ್ನಿಕ್ ಸಿನ್ನರ್ ವಿರುದ್ಧ ರೋಚಕ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಐದು ಸೆಟ್‌ಗಳ ಸುಧೀರ್ಘ ಹೋರಾಟದಲ್ಲಿ ವಿಶ್ವದ ನಂ.2 ಆಟಗಾರ ಸಿನ್ನರ್ ಮೊದಲ ಹಾಗೂ ಮೂರನೇ ಸೆಟ್‌ಗಳನ್ನು ಗೆದ್ದಿದ್ದರು.
ಹತ್ತು ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಜೊಕೊವಿಕ್, ಎರಡು ಬಾರಿ ಸೋಲಿನ ಅಂಚಿನಿಂದ ಚೇತರಿಸಿಕೊಂಡು ಹಾಲಿ ಚಾಂಪಿಯನ್ ಸಿನ್ನರ್ ವಿರುದ್ಧ 3-6, 6-3, 4-6, 6-4, 6-4 ಅಂತರದ ಜಯ ಸಾಧಿಸಿದರು. ಇದರೊಂದಿಗೆ ವಿಶ್ವದ ನಾಲ್ಕನೇ ಕ್ರಮಾಂಕದ ಆಟಗಾರ ಜೊಕೊವಿಕ್ 11ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಪ್ರವೇಶಿಸಿದರು. ಇದು ಕಳೆದ ಎರಡು ವರ್ಷಗಳಲ್ಲಿ ಸಿನ್ನರ್ ವಿರುದ್ಧ ಜೊಕೊವಿಕ್ ಸಾಧಿಸಿದ ಮೊದಲ ಜಯವಾಗಿದೆ.
ಮೊದಲ ಸೆಮಿಫೈನಲ್‌ನಲ್ಲಿ ಅಲೆಕ್ಸಾಂಡರ್ ಝೆರೆವ್ ವಿರುದ್ಧ ಜಯ ಸಾಧಿಸಿದ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಕಾರ್ಲೋಸ್ ಅಲ್ಕರಾಝ್, ಫೈನಲ್‌ನಲ್ಲಿ ಜೊಕೊವಿಕ್ ಎದುರು ಸೆಣೆಸಲಿದ್ದಾರೆ.
ಪಂದ್ಯದಲ್ಲಿ ಒಟ್ಟು 18 ಬ್ರೇಕ್ ಪಾಯಿಂಟ್‌ಗಳನ್ನು ಎದುರಿಸಿದ ಜೊಕೊವಿಕ್, ಅದರಲ್ಲಿ 16 ಅನ್ನು ಯಶಸ್ವಿಯಾಗಿ ಉಳಿಸಿಕೊಂಡು ಅದ್ಭುತ ಪ್ರದರ್ಶನ ನೀಡಿದರು. ಭಾರಿ ಒತ್ತಡದ ಪರಿಸ್ಥಿತಿಯಲ್ಲಿದ್ದ ಮೊದಲ ಸೆಟ್‌ನಲ್ಲಿ ಹಲವು ಬಾರಿ ಬ್ರೇಕ್ ಪಾಯಿಂಟ್‌ನಿಂದ ಪಾರಾಗಿ, 15-40 ಹಾಗೂ 0-40 ಹಿನ್ನಡೆಯಿಂದಲೂ ಚೇತರಿಸಿಕೊಂಡು ಪಾಯಿಂಟ್‌ಗಳನ್ನು ಉಳಿಸಿಕೊಳ್ಳುವ ಅಪಾರ ಧೈರ್ಯ ಪ್ರದರ್ಶಿಸಿದರು.