×
Ad

ಟಿ-20 ವಿಶ್ವಕಪ್| ಅಮೆರಿಕದ ಕ್ರಿಕೆಟ್ ತಂಡ ಪ್ರಕಟ: ಮೊನಂಕ್ ಪಟೇಲ್ ನಾಯಕ

Update: 2026-01-30 21:40 IST

ಮೊನಂಕ್ ಪಟೇಲ್ | Photo Credit ; USA Cricket

ವಾಶಿಂಗ್ಟನ್, ಜ.30: ಮುಂಬರುವ ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್‌ಗಾಗಿ ಅಮೆರಿಕ ಕ್ರಿಕೆಟ್ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಮೊನಂಕ್ ಪಟೇಲ್ ಅಮೆರಿಕ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

2024ರಲ್ಲಿ ಚೊಚ್ಚಲ ವಿಶ್ವಕಪ್ ಪಂದ್ಯವನ್ನಾಡಿದ 10 ಪ್ರಮುಖ ಆಟಗಾರರು ಈಗಿನ ತಂಡದಲ್ಲಿದ್ದಾರೆ.

2024ರ ಆವೃತ್ತಿಯ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಗೆಲುವು ಸೇರಿದಂತೆ ಸೂಪರ್-8 ಹಂತದಲ್ಲಿ ನೀಡಿದ್ದ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವಕಪ್‌ಗೆ ಅಮೆರಿಕ ತಂಡ ನೇರ ಅರ್ಹತೆ ಪಡೆದಿತ್ತು. ಎರಡನೇ ಬಾರಿ ಟಿ-20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ.

ನಾಯಕ ಪಟೇಲ್‌ರಲ್ಲದೆ, ಜೆಸ್ಸಿ ಸಿಂಗ್, ಆಂಡ್ರೀಸ್ ಗೌಸ್, ಮಿಲಿಂದ ಕುಮಾರ್, ಶಯನ್ ಜಹಾಂಗೀರ್, ಹರ್‌ಮೀತ್ ಸಿಂಗ್, ನೋಸ್ತುಶ್ ಕೆಂಜಿಗೆ, , ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್,, ಸೌರಭ್ ನೇತ್ರಾವಲ್ಕರ್ ಹಾಗೂ ಅಲಿ ಖಾನ್ ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲೂ ಭಾಗವಹಿಸಿದ್ದರು.

ಹರ್ಮೀತ್, ಮಿಲಿಂದ್ ಹಾಗೂ ಸೌರಭ್‌ಗೆ ಭಾರತದಲ್ಲಿ ವಯೋಮಿತಿ ಹಾಗೂ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಅನುಭವವಿದೆ. ಇದರಿಂದ ಅಮೆರಿಕ ತಂಡಕ್ಕೆ ಲಾಭವಾಗಬಹುದು.

2024ರ ಆವೃತ್ತಿಯ ವಿಶ್ವಕಪ್‌ನಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ಗೌಸ್ ಆರು ಇನಿಂಗ್ಸ್‌ಗಳಲ್ಲಿ 219 ರನ್ ಗಳಿಸಿ ಅಮೆರಿಕದ ಪರ ಸರ್ವಾಧಿಕ ಸ್ಕೋರ್ ಗಳಿಸಿದ್ದರು. ಸೌರಭ್ ನೇತ್ರಾವಲ್ಕರ್ ಆರು ವಿಕೆಟ್‌ಗಳನ್ನು ಉರುಳಿಸಿದ್ದರು.

ಶುಭಮನ್ ರಂಜನೆ ಐಸಿಸಿ ಟೂರ್ನಿಯಲ್ಲಿ ತನ್ನ ಚೊಚ್ಚಲ ಟಿ-20 ಪಂದ್ಯವನ್ನಾಡಲಿದ್ದಾರೆ. ಮುಹಮ್ಮದ್ ಮುಹ್ಸಿನ್ ಹಾಗೂ ಶೆಹಾನ್ ಜಯಸೂರ್ಯ ಅಮೆರಿಕದ ಪರ ಮೊದಲ ಅಂತರ್‌ರಾಷ್ಟ್ರೀಯ ಪಂದ್ಯ ಆಡುವ ಅವಕಾಶ ಪಡೆದಿದ್ದಾರೆ. ಪುಣೆ ಮೂಲದ ಶುಭಮ್ ಅಮೆರಿಕದ ಪರ ನಾಲ್ಕು ಏಕದಿನ ಪಂದ್ಯಗಳಲ್ಲಿ ಆಡಿದ್ದರು.

ಅಮೆರಿಕ ತಂಡವು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತ, ಪಾಕಿಸ್ತಾನ, ನೆದರ್‌ಲ್ಯಾಂಡ್ಸ್ ಹಾಗೂ ನಮೀಬಿಯಾ ತಂಡಗಳನ್ನು ಎದುರಿಸಲಿದೆ. ಅಮೆರಿಕ ತಂಡವು ಫೆ.7ರಂದು ಮುಂಬೈನಲ್ಲಿ ಭಾರತ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಅಮೆರಿಕದ ವಿಶ್ವಕಪ್ ತಂಡ: ಮೊನಂಕ್ ಪಟೇಲ್(ನಾಯಕ), ಜೆಸ್ಸಿ ಸಿಂಗ್,ಆಂಡ್ರೀಸ್ ಗೌಸ್, ಶೆಹನ್ ಜಯಸೂರ್ಯ, ಮಿಲಿಂದ್ ಕುಮಾರ್, ಶಯಾನ್ ಜಹಾಂಗೀರ್, ಸೈತೇಜ ಮುಕ್ಕಮಲಾ, ಸಂಜಯ್ ಕೃಷ್ಣಮೂರ್ತಿ, ಹರ್‌ಮೀತ್ ಸಿಂಗ್, ನೋಸ್ತುಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರಾವಲ್ಕರ್, ಅಲಿ ಖಾನ್, ಮುಹಮ್ಮದ್ ಮುಹ್ಸಿನ್, ಶುಭಮ್ ರಂಜನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News