ಕುತೂಹಲ ಕೆರಳಿಸಿದ ಭಾರತ-ಆಸ್ಟ್ರೇಲಿಯ ಕ್ರಿಕೆಟ್ ಸರಣಿ: 1,72,000ಕ್ಕೂ ಅಧಿಕ ಟಿಕೆಟ್ ಗಳ ಮಾರಾಟ
ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ | Photo Credit : PTI
ಮೆಲ್ಬರ್ನ್, ಅ.17: ಆಸ್ಟ್ರೇಲಿಯ ಹಾಗೂ ಭಾರತ ನಡುವಿನ ಪುರುಷರ ಏಕದಿನ ಸರಣಿಯು ಪರ್ತ್ ಸ್ಟೇಡಿಯಂನಲ್ಲಿ ರವಿವಾರ ಆರಂಭವಾಗಲಿದೆ. ಭಾರತದ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಹು ದಿನಗಳ ನಂತರ ಮೈದಾನಕ್ಕೆ ಮರಳಲಿದ್ದಾರೆ.
ಪ್ರಸಕ್ತ ಸರಣಿಯು ಭಾರೀ ಕುತೂಹಲ ಕೆರಳಿಸಿದ್ದು, ಆಸ್ಟ್ರೇಲಿಯ-ಭಾರತ ನಡುವಿನ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಈಗಾಗಲೇ 1,75,000 ಟಿಕೆಟ್‌ಗಳು ಮಾರಾಟವಾಗಿವೆ.
ಆಸ್ಟ್ರೇಲಿಯದ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಫೋಟೊ ಸೆಶನ್‌ನಲ್ಲಿ ಭಾರತೀಯ ಆಟಗಾರರಾದ ನಿತೀಶ್ ರೆಡ್ಡಿ ಹಾಗೂ ಧ್ರುವ ಜುರೆಲ್‌ರೊಂದಿಗೆ ಕಾಣಿಸಿಕೊಂಡರು. ಆಸ್ಟ್ರೇಲಿಯ -ಭಾರತ ನಡುವಿನ ಬಿಳಿ ಚೆಂಡಿನ ಪಂದ್ಯಗಳ ಸ್ಮರಣೀಯ ಕ್ಷಣಗಳ ಪೋಸ್ಟರ್ ಎದುರು ಆಟಗಾರರು ಫೋಟೊಕ್ಕೆ ಪೋಸ್ ನೀಡಿದರು.
ಪರ್ತ್ ಕ್ರೀಡಾಂಗಣವು ಮುಂಬರುವ ಪಂದ್ಯಗಳ ಸಾಂಪ್ರದಾಯಿಕ ಪೈಪೋಟಿ ಹಾಗೂ ಭವಿಷ್ಯದ ಸಾಧ್ಯತೆಗಳ ಮಿಶ್ರಣವನ್ನು ಪ್ರತಿನಿಧಿಸುತ್ತದೆ.
ಫೋಟೊ ಸೆಶನ್‌ಗಿಂತ ಮೊದಲು ಟ್ರಾವಿಸ್ ಹೆಡ್ ಹಾಗೂ ಅಕ್ಷರ್ ಪಟೇಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘‘ಮುಂದಿನ ಕೆಲವು ದಿನಗಳಲ್ಲಿ ನಾವು ನಿಜವಾಗಿಯೂ ಉತ್ತಮ ಕ್ರಿಕೆಟ್ ನಿರೀಕ್ಷಿಸುತ್ತಿದ್ದೇವೆ. ಎರಡೂ ತಂಡಗಳು ಉತ್ತಮ ಅಭ್ಯಾಸ ನಡೆಸಿವೆ. ಪರ್ತ್ ಕ್ರೀಡಾಂಗಣದಲ್ಲಿನ ಪರಿಸ್ಥಿತಿ ಅತ್ಯುತ್ತಮವಾಗಿದೆ. ಸರಣಿಯನ್ನು ಆರಂಭಿಸಲು ಇದು ಉತ್ತಮ ಸ್ಥಳವಾಗಿದೆ. ಎರಡೂ ತಂಡಗಳು ಉತ್ತಮ ಗುಣಮಟ್ಟದಿಂದ ಕೂಡಿವೆ’’ ಎಂದು ಹೆಡ್ ಹೇಳಿದ್ದಾರೆ.
‘‘ಆಸ್ಟ್ರೇಲಿಯ ಹಾಗೂ ಭಾರತ ಕ್ರಿಕೆಟ್‌ತಂಡಗಳು ಯಾವಾಗಲೂ ಉತ್ತಮ ಕ್ರಿಕೆಟ್ ಆಡುತ್ತಾ ಬಂದಿವೆ. ಇಲ್ಲಿನ ವಾತಾವರಣ ಅದ್ಭುತವಾಗಿದೆ. ನಾವು ಸ್ಪರ್ಧಾತ್ಮಕ ಸರಣಿಯನ್ನು ಎದುರು ನೋಡುತ್ತಿದ್ದೇವೆ’’ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.
3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಪರ್ತ್ ಕ್ರೀಡಾಂಗಣದಲ್ಲಿ ರವಿವಾರ ಅ.19ರಂದು ನಡೆಯಲಿದೆ.