ನಾಳೆ 2ನೇ ಟ್ವೆಂಟಿ-20 ಪಂದ್ಯ: ಭಾರತ-ಆಸ್ಟ್ರೇಲಿಯ ಮುಖಾಮುಖಿ
Photo Credit : @bcci
ಮೆಲ್ಬರ್ನ್, ಅ.30: ಕ್ಯಾನ್‌ಬೆರ್ರಾದಲ್ಲಿ ಸರಣಿಯ ಮೊದಲ ಪಂದ್ಯವು ಮಳೆಗಾಹುತಿಯಾಗಿದ್ದು, ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ಶುಕ್ರವಾರ ಎರಡನೇ ಟಿ-20 ಪಂದ್ಯವನ್ನಾಡಲು ಭಾರತ ಹಾಗೂ ಆಸ್ಟ್ರೇಲಿಯ ಸಜ್ಜಾಗಿವೆ.
ಕಳೆದ ವರ್ಷ ಟೆಸ್ಟ್ ಸರಣಿ ಹಾಗೂ 2022ರ ಟಿ20 ವಿಶ್ವಕಪ್‌ನಲ್ಲಿ ಎಂಸಿಜಿಯಲ್ಲಿ ಭಾರತ ತಂಡವು ಆಡಿದಾಗ ದೊಡ್ಡ ಸಂಖ್ಯೆಯ ಬೆಂಬಲಿಗರನ್ನು ಆಕರ್ಷಿಸಿತ್ತು. ಶುಕ್ರವಾರದ ಪಂದ್ಯಕ್ಕೆ 90,000 ಪ್ರೇಕ್ಷಕರು ಆಗಮಿಸುವ ಸಾಧ್ಯತೆ ಇದೆ. ಆದರೆ ಎಲ್ಲರ ಕಣ್ಣು ಹವಾಮಾನದ ಮೇಲೆ ನೆಟ್ಟಿದೆ.
ಎಲ್ಲಿಸ್‌ರಂತೆಯೇ ಟಿಮ್ ಡೇವಿಡ್ ಕೂಡ ಎಂಸಿಜಿಯಲ್ಲಿ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. 2022ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ್ಧ ಆಡುವ ಅವಕಾಶ ಇತ್ತು. ಆದರೆ, ಮಳೆಯಿಂದಾಗಿ ಆ ಪಂದ್ಯವು ರದ್ದಾಗಿತ್ತು. ಈ ಮೈದಾನದಲ್ಲಿ ಬಿಬಿಎಲ್‌ನಲ್ಲಿ 9 ಇನಿಂಗ್ಸ್‌ನಲ್ಲಿ ಒಟ್ಟು 148 ರನ್ ಗಳಿಸಿದ್ದರು. ಡೇವಿಡ್ ಪ್ರಸಕ್ತ ಸರಣಿಯಲ್ಲಿ 4ನೇ ಕ್ರಮಾಂಕದಲ್ಲಿ ಆಡಬಹುದು.
ಆಸ್ಟ್ರೇಲಿಯ ತಂಡ ಸದ್ಯ ಸ್ಪಿನ್ನರ್‌ಗಳ ಎದುರು ಚೆನ್ನಾಗಿ ಆಡುತ್ತಿದೆ. ವಿಶ್ವದ ನಂ.1 ಟಿ-20 ಬೌಲರ್ ವರುಣ್ ಚಕ್ರವರ್ತಿ ಟಿ-20 ಕ್ರಿಕೆಟ್‌ನಲ್ಲಿ ಈತನಕ ಅಸ್ಟ್ರೇಲಿಯ ವಿರುದ್ಧ ಆಡಿಲ್ಲ.
*ಟೀಮ್ ನ್ಯೂಸ್: ಉಭಯ ತಂಡಗಳು ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಕ್ಯಾನ್‌ಬೆರ್ರಾದಲ್ಲಿ ಮಳೆಯಿಂದಾಗಿ ರದ್ದಾದ ಪಂದ್ಯದಲ್ಲಿ ಜೋಶ್ ಹೇಝಲ್‌ವುಡ್ ಆಡಿದ್ದರು. ಇದೀಗ ಅವರು ಆ್ಯಶಸ್ ಸರಣಿಗೆ ಸಜ್ಜಾಗಲಿದ್ದಾರೆ.
ಮೊದಲ ಪಂದ್ಯದಲ್ಲಿ ಅಡಿರುವ ತಂಡವನ್ನೇ ಎರಡೂ ತಂಡಗಳು ಕಣಕ್ಕಿಳಿಸಬಹುದು. ನಿತೀಶ್ ರೆಡ್ಡಿ ಸರಣಿಯ ಮೊದಲ 3 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅರ್ಷದೀಪ ಸಿಂಗ್ ಹೆಚ್ಚುವರಿ ವೇಗದ ಬೌಲರ್ ಆಗಿ ಆಡಲಿದ್ದಾರೆ.
► ಪಿಚ್ ಹಾಗೂ ವಾತಾವರಣ
ಈ ವರ್ಷ ಎಂಸಿಜಿ ಆಯೋಜಿಸುತ್ತಿರುವ ಮೊದಲ ಪಂದ್ಯ ಇದಾಗಿದೆ. ಬಿಗ್‌ಬ್ಯಾಶ್‌ನ ಪ್ರತಿಯೊಂದು ಪಂದ್ಯದಲ್ಲೂ 180ಕ್ಕೂ ಅಧಿಕ ರನ್ ದಾಖಲಾಗಿದ್ದು, ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವು ನೀಡಿಲ್ಲ ಎಂದು ಎಲ್ಲಿಸ್ ಹೇಳಿದ್ದಾರೆ. ದಿನವಿಡೀ ಮಳೆ ಬೀಳುವ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಅಂಕಿ-ಅಂಶ
► ಭಾರತ ತಂಡವು ಎಂಸಿಜಿಯಲ್ಲಿ ಆಡಿರುವ 6 ಟಿ-20 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿದೆ.
► ಶಾನ್ ಮಾರ್ಷ್‌ಗೆ ಟಿ-20 ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸಲು 4 ರನ್ ಅಗತ್ಯವಿದೆ.
► ಒಂದು ಸಾವಿರ ರನ್ ಪೂರೈಸಲು ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾಗೆ ಕ್ರಮವಾಗಿ 7 ಹಾಗೂ 38 ರನ್ ಅಗತ್ಯವಿದೆ.
► ಟಿ-20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪೂರ್ಣಗೊಳಿಸಲು ಜಸ್‌ಪ್ರಿತ್ ಬುಮ್ರಾಗೆ ಕೇವಲ 4 ವಿಕೆಟ್‌ಗಳ ಅಗತ್ಯವಿದೆ.
ತಂಡಗಳು:
*ಆಸ್ಟ್ರೇಲಿಯ(ಸಂಭಾವ್ಯ): 1. ಟ್ರಾವಿಸ್ ಹೆಡ್, 2. ಮಿಚೆಲ್ ಮಾರ್ಷ್(ನಾಯಕ), 3. ಜೋಶ್ ಇಂಗ್ಲಿಷ್(ವಿಕೆಟ್‌ಕೀಪರ್), 4. ಟಿಮ್ ಡೇವಿಡ್, 5. ಮಿಚೆಲ್ ಓವನ್, 6. ಮಾರ್ಕಸ್ ಸ್ಟೋಯಿನಿಸ್, 7. ಜೋಶ್ ಫಿಲಿಪ್, 8. ಕ್ಸೇವಿಯರ್ ಬಾರ್ಟ್ಲೆಟ್/ಸೀಯನ್ ಅಬಾಟ್, 9. ನಾಥನ್ ಎಲ್ಲಿಸ್, 10. ಮ್ಯಾಟ್ ಕುಹ್ನೆಮನ್, 11. ಜೋಶ್ ಹೇಝಲ್‌ವುಡ್.
*ಭಾರತ(ಸಂಭಾವ್ಯ): 1. ಅಭಿಷೇಕ್ ಶರ್ಮಾ, 2. ಶುಭಮನ್ ಗಿಲ್, 3. ತಿಲಕ್ ವರ್ಮಾ,4. ಸೂರ್ಯಕುಮಾರ ಯಾದವ್(ನಾಯಕ), 5. ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), 6. ಶಿವಂ ದುಬೆ, 7. ಅಕ್ಷರ್ ಪಟೇಲ್, 8. ಹರ್ಷಿತ್ ರಾಣಾ, 9. ಕುಲದೀಪ ಯಾದವ್, 10. ವರುಣ್ ಚಕ್ರವರ್ತಿ, 11.ಜಸ್‌ಪ್ರಿತ್ ಬುಮ್ರಾ
*ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:45
(ಭಾರತೀಯ ಕಾಲಮಾನ)