ಫಿಫಾ ರ‍್ಯಾಂಕಿಂಗ್ಸ್ : 7 ಸ್ಥಾನ ಮೇಲೇರಿದ ಭಾರತೀಯ ಮಹಿಳಾ ಫುಟ್ಬಾಲ್ ತಂಡ
Photo Credit: AIFF Media
ಹೊಸದಿಲ್ಲಿ, ಆ. 7: ಇತ್ತೀಚಿನ ಫಿಫಾ ರ್ಯಾಂಕಿಂಗ್ಸ್‌ನಲ್ಲಿ ಭಾರತೀಯ ಮಹಿಳಾ ಫುಟ್ಬಾಲ್ ತಂಡವು ಏಳು ಸ್ಥಾನ ಮೇಲೇರಿ 63ರಲ್ಲಿದೆ. ಇತ್ತೀಚೆಗೆ ಥಾಯ್ಲೆಂಡ್ ವಿರುದ್ಧ ಪಡೆದ ಜಯದ ಪರಿಣಾಮವಾಗಿ ಭಾರತದ ರ‍್ಯಾಂಕಿಂಗ್‌ನಲ್ಲಿ ಏರಿಕೆಯಾಗಿದೆ. ಈ ಜಯದಿಂದಾಗಿ ಭಾರತವು ಎಎಫ್‌ಸಿ ಮಹಿಳಾ ಏಶ್ಯನ್ ಕಪ್‌ಗೆ ಅರ್ಹತೆ ಗಳಿಸಿಕೊಂಡಿದೆ.
ಇದು ಎರಡು ವರ್ಷಗಳ ಅವಧಿಯಲ್ಲಿ ಭಾರತೀಯ ಮಹಿಳಾ ಫುಟ್ಬಾಲ್ ತಂಡದ ಗರಿಷ್ಠ ಸ್ಥಾನವಾಗಿದೆ. 2023 ಆಗಸ್ಟ್ 21ರಂದು ಭಾರತದ ರ‍್ಯಾಂಕಿಂಗ್ 61 ಆಗಿತ್ತು.
ಎಎಫ್‌ಸಿ ಮಹಿಳಾ ಏಶ್ಯನ್ ಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ, ಭಾರತ ತನಗಿಂತ ಹೆಚ್ಚಿನ ರ‍್ಯಾಂಕಿಂಗ್ ಹೊಂದಿರುವ ಥಾಯ್ಲೆಂಡನ್ನು ಸೋಲಿಸಿ, ಪ್ರತಿಭೆಯ ಆಧಾರದಲ್ಲಿ ಮೊದಲ ಬಾರಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಗಳಿಸಿದೆ.
ಭಾರತವು ತನ್ನ ಅರ್ಹತಾ ಅಭಿಯಾನವನ್ನು ಪ್ರಭಾವಶಾಲಿಯಾಗಿ ಆರಂಭಿಸಿತ್ತು. ಮೊದಲು ಅದು ಮಂಗೋಲಿಯ ತಂಡವನ್ನು 13-0 ಅಂತರದಿಂದ ಕೆಡವಿತು. ಬಳಿಕ ಟೈಮರ್-ಲೆಸ್ಟೆ ತಂಡವನ್ನು 4-0 ಅಂತರದಿಂದ ಮತ್ತು ಇರಾಕ್ ತಂಡವನ್ನು 5-0 ಅಂತರದಿಂದ ಸೋಲಿಸಿತು. ಆ ಗೆಲುವುಗಳ ಆಧಾರದಲ್ಲಿ ಅದು ಥಾಯ್ಲೆಂಡ್ ವಿರುದ್ಧ ನಾಕೌಟ ಪಂದ್ಯ ಆಡಿತು. ಆವರೆಗೆ ಎರಡೂ ತಂಡಗಳು ಸಮಾನ ಅಂಕಗಳನ್ನು ಗಳಿಸಿದ್ದವು.
ಮಿಡ್‌ಫೀಲ್ಡ್ ಸಂಗೀತಾ ಬಾಸ್ಫೊರೆ ಸಂದರ್ಭಕ್ಕೆ ತಕ್ಕ ಆಟವಾಡಿ ಎರಡು ಗೋಲುಗಳನ್ನು ಬಾರಿಸಿದರು. ಅದರೊಂದಿಗೆ ಭಾರತವು ಥಾಯ್ಲೆಂಡ್ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿತು.