×
Ad

ನಾಳೆಯಿಂದ ಲೀಡ್ಸ್ ನಲ್ಲಿ ಮೊದಲ ಟೆಸ್ಟ್ ಆರಂಭ; ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ಭಾರತ-ಇಂಗ್ಲೆಂಡ್ ಸೆಣಸಾಟ

Update: 2025-06-19 20:44 IST

PC : X 

ಲೀಡ್ಸ್: ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಶುಕ್ರವಾರ ಆರಂಭವಾಗುವ ಮೂಲಕ ಬಹು ನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಟೆಸ್ಟ್ ಸರಣಿಗೆ ಚಾಲನೆ ಸಿಗಲಿದೆ.

ಹೊಸತಾಗಿ ನೇಮಕಗೊಂಡಿರುವ ನಾಯಕ ಶುಭಮನ್ ಗಿಲ್ ಮುಂದಾಳತ್ವದಲ್ಲಿ ಭಾರತ ಕ್ರಿಕೆಟ್ ತಂಡವು 2007ರ ನಂತರ ಮೊದಲ ಬಾರಿ ಆಂಗ್ಲರ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವತ್ತ ಚಿತ್ತ ಹರಿಸಿದೆ. ನಿವೃತ್ತಿಯಾಗಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಿಲ್ಲದ ಭಾರತೀಯ ತಂಡವನ್ನು ಮುನ್ನಡೆಸಲಿರುವ ಗಿಲ್ ಮೇಲೆ ಇಂಗ್ಲೆಂಡ್ನಲ್ಲಿ ಕಾಡುತ್ತಿರುವ ಟೆಸ್ಟ್ ಸರಣಿ ಬರವನ್ನು ನೀಗಿಸುವ ಗುರುತರ ಜವಾಬ್ದಾರಿಯಿದೆ. ಕಳೆದ ತಿಂಗಳು ರೋಹಿತ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ ಗಿಲ್ ನಾಯಕತ್ವದ ಹೊಣೆ ಹೊತ್ತಿದ್ದಾರೆ.

ರೋಹಿತ್ ನಿವೃತ್ತಿಯಾದ ನಂತರ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸಿದರು. ಹೀಗಾಗಿ ಭಾರತದ ಬ್ಯಾಟಿಂಗ್ ಸರದಿಯಲ್ಲಿ ಕೊಹ್ಲಿಯಿಂದ ತೆರವಾಗಿರುವ 4ನೇ ಕ್ರಮಾಂಕವನ್ನು ತುಂಬುವುದು ದೊಡ್ಡ ಸವಾಲಾಗಿದೆ.

ಸರಣಿಯ ಮೊದಲ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಗಿಲ್ ಆಡುತ್ತಾರೆಂದು ಭಾರತದ ಉಪ ನಾಯಕ ರಿಷಭ್ ಪಂತ್ ಬುಧವಾರ ದೃಢಪಡಿಸಿದ್ದಾರೆ. 25ರ ಹರೆಯದ ಗಿಲ್ 32 ಟೆಸ್ಟ್ ಪಂದ್ಯಗಳಲ್ಲಿ 35 ಸರಾಸರಿ ಹೊಂದಿದ್ದಾರೆ. ವಿದೇಶಿ ನೆಲದಲ್ಲಿ 29 ಸರಾಸರಿ ಹೊಂದಿದ್ದಾರೆ. ಇಂಗ್ಲೆಂಡ್ನಲ್ಲಿ ಆಡಿರುವ 3 ಟೆಸ್ಟ್ ಪಂದ್ಯಗಳಲ್ಲಿ 15ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು.

ಐತಿಹಾಸಿಕವಾಗಿ ಭಾರತ ತಂಡವು 4ನೇ ಕ್ರಮಾಂಕದಲ್ಲಿ ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದು, ಲೆಜೆಂಡ್ಗಳಾದ ಸಚಿನ್ ತೆಂಡುಲ್ಕರ್ ಹಾಗೂ ಕೊಹ್ಲಿ ಒಟ್ಟಾಗಿ ಇದೇ ಕ್ರಮಾಂಕದಲ್ಲಿ 278 ಟೆಸ್ಟ್ ಪಂದ್ಯಗಳನ್ನು ಆಡಿ 21,056 ರನ್ ಗಳಿಸಿದ್ದಾರೆ.

ನಾಯಕತ್ವದ ಒತ್ತಡವನ್ನು ನಿಭಾಯಿಸುವ ಜೊತೆಗೆ ಇಂಗ್ಲೆಂಡ್ನಲ್ಲಿ ತನ್ನ ಬ್ಯಾಟಿಂಗ್ ಪ್ರದರ್ಶನ ಕಾಯ್ದುಕೊಳ್ಳುವುದು ಗಿಲ್ಗೆ ಎದುರಾಗಿರುವ ಮೊದಲ ಸವಾಲಾಗಿದೆ.

ಇಂಗ್ಲೆಂಡ್ ನೆಲದಲ್ಲಿ ಭಾರತ ಕ್ರಿಕೆಟ್ ತಂಡವು 1971, 1986 ಹಾಗೂ 2007ರಲ್ಲಿ ಮೂರು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದೆ.

2022ರ ಭೀಕರ ಕಾರು ಅಪಘಾತದಿಂದ ಚೇತರಿಸಿಕೊಂಡು ಮರಳಿರುವ ರಿಷಭ್ ಪಂತ್ ಜೊತೆಗೆ ಭರವಸೆಯ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಗಿಲ್ಗೆ ಸಾಥ್ ನೀಡಲು ಸಜ್ಜಾಗಿದ್ದಾರೆ.

ಭಾರತವು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ವಿಭಾಗವನ್ನು ಮೀರಿ ತಯಾರಿ ನಡೆಸಬೇಕಾದ ಅಗತ್ಯವಿದ್ದು, ಇದಕ್ಕೆ ಸಮಯಾವಕಾಶ ಸೀಮಿತವಾಗಿದೆ. ಎಲ್ಲ ಮಾದರಿ ಕ್ರಿಕೆಟ್ನ ವಿಶ್ವ ಶ್ರೇಷ್ಠ ಬೌಲರ್ ಜಸ್ಪ್ರಿತ್ ಬುಮ್ರಾ ತನ್ನ ಕೆಲಸದ ಒತ್ತಡವನ್ನು ನಿಭಾಯಿಸಲು 5 ಟೆಸ್ಟ್ ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಆಡುವ ಸಾಧ್ಯತೆಯಿದೆ.

ಆರ್.ಅಶ್ವಿನ್( ಈಗಾಗಲೇ ನಿವೃತ್ತಿಯಾಗಿದ್ದಾರೆ) ಹಾಗೂ ಮುಹಮ್ಮದ್ ಶಮಿ ಅವರ ಅನುಪಸ್ಥಿತಿಯಲ್ಲಿ ಟೆಸ್ಟ್ ಗೆಲುವಿಗೆ ಅಗತ್ಯವಿರುವ 20 ವಿಕೆಟ್ ಗಳನ್ನು ಕೀಳುವ ಭಾರತದ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ.

ಇಂಗ್ಲೆಂಡ್ ತಂಡವು ಮೊದಲ ಟೆಸ್ಟ್ ಪಂದ್ಯಕ್ಕೆ ತನ್ನ ಆಡುವ 11ರ ಬಳಗವನ್ನು ಬುಧವಾರವೇ ಪ್ರಕಟಿಸಿದೆ.

ಬ್ರೆಂಡನ್ ಕಾರ್ಸ್ ಹಾಗೂ ಕ್ರಿಸ್ ವೋಕ್ಸ್ ಬೌಲಿಂಗ್ ದಾಳಿ ಆರಂಭಿಸಲಿದ್ದಾರೆ. ಜೋಶ್ ಟಂಗ್ ಹಾಗೂ ಶುಐಬ್ ಬಶೀರ್ ಇಂಗ್ಲೆಂಡ್ನ ಆಡುವ 11ರ ಬಳಗದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅಟ್ಕಿನ್ಸನ್ ಈ ಪಂದ್ಯವನ್ನು ಆಡುತ್ತಿಲ್ಲ. ನಾಯಕ ಬೆನ್ ಸ್ಟೋಕ್ಸ್ ಅವರು ಕೂಡ ಬೌಲಿಂಗ್ ಮಾಡಬಲ್ಲರು.

ಬ್ಯಾಟಿಂಗ್ನಲ್ಲಿ ಜೇಕಬ್ ಬೆಥೆಲ್ ಬದಲಿಗೆ ಉಪ ನಾಯಕ ಓಲಿ ಪೋಪ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಬೆಥೆಲ್ ನ್ಯೂಝಿಲ್ಯಾಂಡ್ ಪ್ರವಾಸದ ವೇಳೆ ತನ್ನ ಮೊದಲ 3 ಟೆಸ್ಟ್ ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಸಿಡಿಸಿದ್ದರು. ಇದರಲ್ಲಿ 96 ರನ್ ಕೂಡ ಸೇರಿದೆ.

► ಬುಮ್ರಾ-ಇಂಗ್ಲೆಂಡ್ ನ ಅಗ್ರ ಸರದಿ

205 ಟೆಸ್ಟ್ ವಿಕೆಟ್ಗಳೊಂದಿಗೆ ಕ್ರಿಕೆಟಿನ ಓರ್ವ ಪ್ರಮುಖ ಬೌಲರ್ ಆಗಿ ಜಸ್ಪ್ರಿತ್ ಬುಮ್ರಾ ಸರಣಿ ಪ್ರವೇಶಿಸಲಿದ್ದಾರೆ. 31ರ ಹರೆಯದ ಬುಮ್ರಾ 14ರ ಸರಾಸರಿಯಲ್ಲಿ 71 ಟೆಸ್ಟ್ ವಿಕೆಟ್ಗಳನ್ನು ಉರುಳಿಸಿದ ಪರಿಣಾಮ 2024ರಲ್ಲಿ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದರು.

ಜನವರಿಯಲ್ಲಿ ಆಸ್ಟ್ರೇಲಿಯದಲ್ಲಿ ಬೆನ್ನುನೋವಿಗೆ ಒಳಗಾದ ಹಿನ್ನೆಲೆಯಲ್ಲಿ ಬುಮ್ರಾ ಅವರು ಎಲ್ಲ 5 ಟೆಸ್ಟ್ ಪಂದ್ಯಗಳನ್ನು ಆಡುವ ಕುರಿತು ಸ್ಪಷ್ಟತೆ ಇಲ್ಲ. ಪಂದ್ಯಗಳು 7 ವಾರಗಳ ಕಾಲ ಬಿಡುವಿಲ್ಲದೆ ಸಾಗಲಿದೆ.

ಬುಮ್ರಾ ಅವರು ಇಂಗ್ಲೆಂಡ್ನ ಅಗ್ರ ಸರದಿಗೆ ಸವಾಲಾಗುವ ಸಾಧ್ಯತೆಯಿದ್ದು, ಭಾರತವು ಬುಮ್ರಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಸ್ಟೋಕ್ಸ್-ಗಿಲ್

ಪ್ರಸಕ್ತ ಸರಣಿಯು ಭಾರತದ ಹೊಸ ನಾಯಕ ಶುಭಮನ್ ಗಿಲ್ಗೆ ಮಹತ್ವದ ಸವಾಲಾಗಿದೆ. 25ರ ಹರೆಯದ ಗಿಲ್ 32 ಪಂದ್ಯಗಳಲ್ಲಿ 35 ಸರಾಸರಿ ಹೊಂದಿದ್ದು, ಇಂಗ್ಲೆಂಡ್ ನೆಲದಲ್ಲಿ ತನ್ನ ಕಳಪೆ ಸರಾಸರಿ(15ಕ್ಕಿಂತ ಕಡಿಮೆ)ಯನ್ನು ಉತ್ತಮಪಡಿಸಬೇಕಾಗಿದೆ.

ಕೊಹ್ಲಿ ಹಾಗೂ ರೋಹಿತ್ ಇಲ್ಲದ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಸವಾಲು ಎದುರಿಸುತ್ತಿರುವ ಗಿಲ್ ಭಾರತಕ್ಕೆ 1971,1986 ಹಾಗೂ 2007ರ ನಂತರ 4ನೇ ಟೆಸ್ಟ್ ಸರಣಿ ಗೆದ್ದುಕೊಡುವ ಉದ್ದೇಶ ಹೊಂದಿದ್ದಾರೆ.

34ರ ಹರೆಯದ ಬೆನ್ ಸ್ಟೋಕ್ಸ್ ಅವರು 2022ರಲ್ಲಿ ಜೋ ರೂಟ್ರಿಂದ ನಾಯಕತ್ವವಹಿಸಿಕೊಂಡ ನಂತರ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ಸ್ಟೋಕ್ಸ್ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳಿವೆ. ಅವರು 2 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಗಳಿಸಿಲ್ಲ. ಈ ಹಿಂದೆ ಲಾರ್ಡ್ಸ್ನಲ್ಲಿ ಆಸ್ಟ್ರೇಲಿಯದ ವಿರುದ್ಧ 155 ರನ್ ಗಳಿಸಿದ್ದರು. ಸ್ವತಃ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಮಧ್ಯಮ ವೇಗದ ಬೌಲಿಂಗ್ ಮೂಲಕ ತಂಡದ ಮೇಲೆ ಪ್ರಭಾವಬೀರಬಲ್ಲರು. ಇತ್ತೀಚೆಗೆ ಝಿಂಬಾಬ್ವೆ ವಿರುದ್ಧ ಟೆಸ್ಟ್ ಗೆಲುವಿನಲ್ಲಿ ಸ್ಟೋಕ್ಸ್ ಮುಖ್ಯ ಪಾತ್ರವಹಿಸಿದ್ದರು.

*ಜೇಮೀ ಸ್ಮಿತ್-ರಿಷಭ್ ಪಂತ್

ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ 43 ಟೆಸ್ಟ್ ಪಂದ್ಯಗಳಲ್ಲಿ 6 ಶತಕಗಳ ಸಹಿತ 42ರ ಸರಾಸರಿ ಕಾಯ್ದುಕೊಂಡಿದ್ದಾರೆ. ಮೈದಾನದಲ್ಲಿ ಆಕರ್ಷಕ ಕ್ಯಾಚ್ ಮೂಲಕ ಗಮನ ಸೆಳೆಯುತ್ತಿರುವ ಪಂತ್ ಕೆಲವೊಮ್ಮೆ ಏಕಾಗ್ರತೆ ಕಳೆದುಕೊಂಡಿರುವಂತೆ ಕಂಡುಬರುತ್ತಾರೆ.

ಇಂಗ್ಲೆಂಡ್ನ 24ರ ವಯಸ್ಸಿನ ಜೇಮೀ ಸ್ಮಿತ್ ತನ್ನ ವೃತ್ತಿಬದುಕಿನಲ್ಲಿ ಈ ತನಕ 10 ಪಂದ್ಯಗಳನ್ನು ಆಡಿದ್ದು, 43ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಬೆನ್ ಫೋಕ್ಸ್ ಬದಲಿಗೆ ಸ್ಮಿತ್ ವಿಕೆಟ್ಕೀಪಿಂಗ್ ಸ್ಥಾನ ಪಡೆದಿದ್ದಾರೆ. ಸರಣಿಯಲ್ಲಿ ಇಂಗ್ಲೆಂಡ್ನ ಅನನುಭವಿ ಬೌಲಿಂಗ್ ಸರದಿಯಲ್ಲಿ ಸ್ಮಿತ್ ಅವರ ಕ್ಯಾಚ್ ಪಡೆಯುವ ಸಾಮರ್ಥ್ಯವು ನಿರ್ಣಾಯಕವಾಗಲಿದೆ.

ತಂಡಗಳು

ಭಾರತ(ಸಂಭಾವ್ಯ ಇಲೆವೆನ್): ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್ ), ಕರುಣ್ ನಾಯರ್, ರವೀಂದ್ರ ಜಡೇಜ, ಶಾರ್ದುಲ್ ಠಾಕೂರ್, ಕುಲದೀಪ್ ಯಾದವ್,ಜಸ್ಪ್ರಿತ್ ಬುಮ್ರಾ, ಮುಹಮ್ಮದ್ ಸಿರಾಜ್.

ಇಂಗ್ಲೆಂಡ್ನ ಆಡುವ 11ರ ಬಳಗ: ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೇಮೀ ಸ್ಮಿತ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬೈಡನ್ ಕಾರ್ಸ್, ಜೋಶ್ ಟಂಗ್, ಶುಐಬ್ ಬಶೀರ್.

ಪಂದ್ಯ ಆರಂಭದ ಸಮಯ: ಮಧ್ಯಾಹ್ನ 3:30

(ಭಾರತೀಯ ಕಾಲಮಾನ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News