×
Ad

ದಯನೀಯ ಸ್ಥಿತಿಯಲ್ಲಿ ಭಾರತ: ಗಂಭೀರ್ ಮೇಲೆ ಹರಿಹಾಯ್ದ ಶ್ರೀಕಾಂತ್

Update: 2025-11-26 08:54 IST

PC: x.com/IMManu_18

ಮುಂಬೈ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ವೈಟ್ವಾಶ್ ಅನುಭವಿಸುವ ಸಾಧ್ಯತೆ ನಿಚ್ಚಳವಾಗುತ್ತಿದ್ದಂತೆಯೇ ಆಡುವ 11ರ ಬಳಗ ಆಯ್ಕೆ ಬಗ್ಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಟೀಕಾಸ್ತ್ರಗಳು ಕೇಳಿಬರುತ್ತಿವೆ.

ಕೊಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯವನ್ನು 30 ರನ್ ಅಂತರದಲ್ಲಿ ಸೋತಿದ್ದ ಭಾರತ ಎರಡನೇ ಪಂದ್ಯ ಗೆಲ್ಲಲು 549 ರನ್ಗಳ ಗುರಿ ಪಡೆದಿದೆ. ಕೇವಲ 27 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿರುವ ಭಾರತ ಈ ಸರಣಿಯಲ್ಲಿ ವೈಟ್ವಾಶ್ ತಪ್ಪಿಸಿಕೊಳ್ಳಬೇಕಾದರೆ ಪವಾಡವೇ ನಡೆಯಬೇಕು. ಭಾರತ ತಂಡದ ಪ್ರದರ್ಶನವನ್ನು ವಿಶ್ಲೇಷಿಸಿರುವ ಭಾರತದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್, ಕಳಪೆ ಪ್ರದರ್ಶನಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಗುರಿ ಮಾಡಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 489 ರನ್ ಕಲೆಹಾಕಿದರೆ ಭಾರತ ಕೇವಲ 201 ರನ್ಗಳಿಗೆ ಆಲೌಟ್ ಆಗಿತ್ತು. ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರಿಗೆ ಅವಕಾಶ ದೊರಕದೇ ಇದ್ದುದಕ್ಕೆ ಶ್ರೀಕಾಂತ್ ಅವರು ಕೋಚ್ ವಿರುದ್ಧ ಹರಿಹಾಯ್ದಿದ್ದಾರೆ. ಚೀಕಿ ಚೀಕಾ ಯೂಟ್ಯೂಬ್ ಶೋಗೆ ನೀಡಿದ ಸಂದರ್ಶನದಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಈ ಹೇಳಿಕೆ ನೀಡಿದ್ದಾರೆ.

"ಏಕೆ ಅಕ್ಷರ್ ಪಟೇಲ್ ಆಡಿಲ್ಲ? ಅವರು ಅಸಮರ್ಥರೇ? ಎಲ್ಲ ಮಟ್ಟದಲ್ಲಿ ಅವರು ನಿಯತವಾದ ಪ್ರದರ್ಶನ ನೀಡುತ್ತಿದ್ದಾರೆ. ಏಕೆ ಇಷ್ಟೊಂದು ಕತ್ತರಿ ಪ್ರಯೋಗ ಮತ್ತು ಬದಲಾವಣೆ" ಎಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ.

"ಒಂದು ಪಂದ್ಯದಿಂದ ಇನ್ನೊಂದಕ್ಕೆ ಕೆಲವರಿಗೆ ಸಂದೇಹ. ಇದನ್ನು ಟ್ರಯಲ್ ಅಂಡ್ ಎರರ್ ಎಂದು ಕರೆಯಬಹುದು. ಗೌತಮ್ ಗಂಭೀರ್ ಏನೇ ಹೇಳಲಿ; ನಾನು ಲೆಕ್ಕಿಸುವುದಿಲ್ಲ. ನಾನು ತಂಡದ ಮಾಜಿ ನಾಯಕ ಹಾಗೂ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ. ನಾನು ಏನು ಹೇಳುತ್ತೇನೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು" ಎಂದು ಕಿಡಿ ಕಾರಿದ್ದಾರೆ.

ಭಾರತದ ಆಟಗಾರರಾದ ಕುಲದೀಪ್ ಯಾದವ್ ಹಾಗೂ ಹಂಗಾಮಿ ನಾಯಕ ರಿಷಭ್ ಪಂತ್ ವಿರುದ್ಧವೂ ಶ್ರೀಕಾಂತ್ ಮಾತಿನ ಚಾಟಿ ಬೀಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News