ಸತತ 15ನೇ ಬಾರಿ ಟಾಸ್ ಸೋತ ಟೀಮ್ ಇಂಡಿಯಾ!
PC : X
ಲಂಡನ್, ಜು.31: ಟಾಸ್ ಗೆಲ್ಲುವ ವಿಚಾರದಲ್ಲಿ ಭಾರತದ ಅದೃಷ್ಟ ಮತ್ತೆ ಕೈ ಕೊಟ್ಟಿದೆ. ಶುಭಮನ್ ಗಿಲ್ ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ 5ನೇ ಬಾರಿ ಟಾಸ್ ಸೋತಿದ್ದಾರೆ. ಈ ಮೂಲಕ ಭಾರತೀಯ ಪುರುಷರ ಕ್ರಿಕೆಟ್ ತಂಡವು ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಸತತ 15ನೇ ಬಾರಿ ಟಾಸ್ ಸೋತು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.
5ನೇ ಟೆಸ್ಟ್ ಪಂದ್ಯದಲ್ಲಿ ಖಾಯಂ ನಾಯಕ ಬೆನ್ ಸ್ಟೋಕ್ಸ್ ಬದಲಿಗೆ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಓಲಿ ಪೋಪ್ ಅವರು ದ ಓವಲ್ ಮೈದಾನದಲ್ಲಿ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಇಂಗ್ಲೆಂಡ್ ತಂಡದ ಹಂಗಾಮಿ ನಾಯಕನಾಗಿ ಇದೇ ಮೊದಲ ಬಾರಿ ಪೋಪ್ ಅವರು ಟಾಸ್ ಗೆದ್ದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಐದು ಪಂದ್ಯಗಳ ಸರಣಿಯಲ್ಲಿ 14ನೇ ಬಾರಿ ತಂಡವೊಂದು ಎಲ್ಲ ಐದೂ ಪಂದ್ಯಗಳಲ್ಲಿ ಟಾಸ್ ಸೋತಿದೆ. 2018ರಲ್ಲಿ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಈ ರೀತಿಯಾಗಿತ್ತು. ಈ ಹಿಂದೆ 13 ಇಂತಹ ಸರಣಿಗಳಲ್ಲಿ 3 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದೆ. ಕೇವಲ ಒಂದು ತಂಡ ಮಾತ್ರ ಟಾಸ್ ಸೋತಿದ್ದರೂ ಎಲ್ಲ ಪಂದ್ಯಗಳನ್ನು ಜಯಿಸುವಲ್ಲಿ ಶಕ್ತವಾಗಿತ್ತು. 1953ರಲ್ಲಿ ಸ್ವದೇಶದಲ್ಲಿ ನಡೆದಿದ್ದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡವು ಈ ಸಾಧನೆ ಮಾಡಿತ್ತು.
ಭಾರತ ತಂಡವು ಆಡುವ 11ರ ಬಳಗದಲ್ಲಿ 4 ಬದಲಾವಣೆಗಳನ್ನು ಮಾಡಿತ್ತು. ಗಿಲ್ ಅವರು ಟಾಸ್ ವೇಳೆ ಧ್ರುವ್ ಜುರೆಲ್, ಕರುಣ್ ನಾಯರ್ ಹಾಗೂ ಪ್ರಸಿದ್ಧ ಕೃಷ್ಣ ಸಹಿತ ಮೂವರ ಹೆಸರುಗಳನ್ನು ಮಾತ್ರ ಹೇಳಿದ್ದರು. ಅಂಶುಲ್ ಕಾಂಬೋಜ್ ಬದಲಿಗೆ ಆಡಿದ್ದ ಆಕಾಶ್ ದೀಪ್ ಹೆಸರನ್ನು ಹೇಳಲು ಗಿಲ್ ಮರೆತ್ತಿದ್ದರು.
ಜಸ್‌ಪ್ರೀತ್ ಬುಮ್ರಾ ಕೆಲಸದ ಒತ್ತಡವನ್ನು ನಿಭಾಯಿಸಲು, ರಿಷಭ್ ಪಂತ್ ಕಾಲ್ಬೆರಳ ಮುರಿತದ ಕಾರಣಕ್ಕೆ ಹಾಗೂ ಅಂಶುಲ್ ಕಾಂಬೋಜ್ ರನ್ನು ಸಾಧಾರಣ ಪ್ರದರ್ಶನದಿಂದಾಗಿ 5ನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ.
ಕರುಣ್ ನಾಯರ್ ಅವರು ಆಲ್‌ರೌಂಡರ್ ಶಾರ್ದುಲ್ ಠಾಕೂರ್ ಬದಲಿಗೆ ಆಡುವ ಅವಕಾಶ ಪಡೆದರು. ಠಾಕೂರ್ 2 ಟೆಸ್ಟ್ ಪಂದ್ಯಗಳಲ್ಲಿ ಕೇವಲ 27 ಓವರ್ ಬೌಲಿಂಗ್ ಮಾಡಿದ್ದರು.
ವೇಗದ ಬೌಲರ್ ಮುಹಮ್ಮದ್ ಸಿರಾಜ್ ಮೂರು ಪ್ರತ್ಯೇಕ ಸಂದರ್ಭದಲ್ಲಿ ವಿದೇಶಿ ಸರಣಿಯಲ್ಲಿ ಎಲ್ಲ 5 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ವಿನೂ ಮಂಕಡ್ ಹಾಗೂ ಕಪಿಲ್ ದೇವ್ ಅವರನ್ನೊಳಗೊಂಡ ಭಾರತೀಯ ಬೌಲರ್ ಗಳ ಎಲೈಟ್ ಕ್ಲಬ್ ಗೆ ಸೇರ್ಪಡೆಯಾದರು.
‘‘ನಾವು ಈ ಪಂದ್ಯವನ್ನು ಗೆದ್ದರೆ ಟಾಸ್ ಸೋಲು ನಮಗೆ ನೋವುಂಟು ಮಾಡದು. ನಿನ್ನೆ ಏನು ಮಾಡಬೇಕೆಂದು ಸ್ವಲ್ಪ ಗೊಂದಲವಿತ್ತು. ಆದರೆ ಪಿಚ್ ಉತ್ತಮವಾಗಿರುವಂತೆ ಕಾಣುತ್ತಿದೆ. ನಾವು ಸಾಕಷ್ಟು ರನ್ ಗಳಿಸಲು ಎದುರು ನೋಡುತ್ತಿದ್ದೇವೆ. ಈ ಸರಣಿಯಲ್ಲಿ ನಾವು ಗೆಲುವಿನ ಹತ್ತಿರ ಬಂದಿದ್ದೇವೆ’’ ಎಂದು ಟಾಸ್ ನಂತರ ಗಿಲ್ ಹೇಳಿದ್ದಾರೆ.
ಇದೇ ವೇಳೆ ಟಾಸ್ ಗೆದ್ದ ತಕ್ಷಣವೇ ಪೋಪ್ ಅವರು ಯಾವುದೇ ಹಿಂಜರಿಕೆ ಇಲ್ಲದೆ ಮೊದಲು ಬೌಲಿಂಗ್ ಆಯ್ದುಕೊಂಡರು.
‘‘ನಮ್ಮ ತಂಡದಲ್ಲಿ ಹೊಸಬರಿದ್ದಾರೆ. ನಮ್ಮಲ್ಲಿನ ಬ್ಯಾಟಿಂಗ್ ಸರದಿ ಆಳವಾಗಿದೆ. ಈ ಪಂದ್ಯವನ್ನು ಡ್ರಾಕ್ಕೆ ತೃಪ್ತಿಪಡದೆ, ಪಂದ್ಯವನ್ನು ಗೆಲ್ಲಲು ಬಯಸಿದ್ದೇವೆ’’ ಎಂದು ಪೋಪ್ ಹೇಳಿದ್ದಾರೆ.
*ಇಂಗ್ಲೆಂಡ್ ತಂಡದಲ್ಲೂ ಬದಲಾವಣೆ: ಆತಿಥೇಯ ಇಂಗ್ಲೆಂಡ್ ತಂಡವು ತನ್ನ ಆಡುವ 11ರ ಬಳಗದಲ್ಲಿ 4 ಬದಲಾವಣೆಗಳನ್ನು ಮಾಡಿದೆ. ಸ್ಟೋಕ್ಸ್, ಜೋಫ್ರಾ ಆರ್ಚರ್, ಬ್ರೆಂಡನ್ ಕಾರ್ಸ್ ಹಾಗೂ ಲಿಯಾಮ್ ಡಾಸನ್‌ರನ್ನು ಹೊರಗಿಡಲಾಗಿದೆ. ಇವರ ಬದಲಿಗೆ ಜೇಕಬ್ ಬೆಥೆಲ್, ಜೋಶ್ ಟಂಗ್, ಜಮೀ ಓವರ್ಟನ್ ಹಾಗೂ ಗಸ್ ಅಟ್ಕಿನ್ಸನ್ ಅವಕಾಶ ಪಡೆದಿದ್ದಾರೆ.
ದಿ ಓವಲ್ ನಲ್ಲಿ 2023ರ ಮೇ ನಂತರ ಆಡಿರುವ 22 ಪಂದ್ಯಗಳ ಪೈಕಿ 22ರಲ್ಲಿ ಟಾಸ್ ಜಯಿಸಿದ ನಾಯಕ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾನೆ. ಪಿಚ್ ವೇಗದ ಬೌಲರ್ ಗಳಿಗೆ ನೆರವಾಗುತ್ತಿರುವುದು ಇದಕ್ಕೆ ಕಾರಣ. 2023ರ ಆರಂಭದಿಂದ ಈ ತನಕ 617 ವಿಕೆಟ್ ಗಳನ್ನು ವೇಗದ ಬೌಲರ್ ಗಳು ಹಾಗೂ 79 ವಿಕೆಟ್ ಗಳನ್ನು ಸ್ಪಿನ್ನರ್ ಗಳು ಪಡೆದಿದ್ದಾರೆ.