×
Ad

ಭಾರತ-ನ್ಯೂಝಿಲ್ಯಾಂಡ್ ಪ್ರಥಮ ಟೆಸ್ಟ್‌ನ ಮೊದಲ ದಿನ ಮಳೆಯಾಟ

Update: 2024-10-16 21:39 IST

PC : PTI

ಬೆಂಗಳೂರು : ಭಾರತ-ನ್ಯೂಝಿಲ್ಯಾಂಡ್ ತಂಡಗಳ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟವು ಮಳೆಗಾಹುತಿಯಾಗಿದೆ.

ಕಳೆದ 48 ಗಂಟೆಗಳಿಂದ ಬೆಂಗಳೂರಿನಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಮತ್ತಷ್ಟು ಮಳೆ ಸುರಿಯುವ ನಿರೀಕ್ಷೆ ಇದೆ.

ಭಾರೀ ಮಳೆಯಿಂದಾಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮೊದಲ ಟೆಸ್ಟ್ ಪಂದ್ಯ ಆರಂಭಿಸಲು ಅಸಾಧ್ಯ ಎಂದು ನಿರ್ಧರಿಸಿದ ಅಂಪೈರ್‌ಗಳು ಮಧ್ಯಾಹ್ನ 2:30ಕ್ಕೆ ದಿನದಾಟವನ್ನು ರದ್ದುಪಡಿಸಿದರು.

ಭೋಜನ ವಿರಾಮದ ನಂತರ ಸುಮಾರು 1 ಗಂಟೆ ಮಳೆ ನಿಂತಿತ್ತು. ಆಗ ಬೆರಳೆಣಿಕೆಯಷ್ಟಿದ್ದ ಕ್ರಿಕೆಟ್ ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಲ್ಲಿದ್ದರು. ಮಳೆ ಬಿಡುವು ನೀಡಿದರೆ 15ರಿಂದ 20 ನಿಮಿಷಗಳಲ್ಲಿ ಮೈದಾನವನ್ನು ಪಂದ್ಯಕ್ಕೆ ಸಜ್ಜುಗೊಳಿಸುವ ವ್ಯವಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ಆದರೆ, ಪಿಚ್‌ನ ಹೊದಿಕೆಯನ್ನು ತೆಗೆದು, ಪರಿಸ್ಥಿತಿಯನ್ನು ಪರಿಶೀಲಿಸಲು ಮೈದಾನದ ಸಿಬ್ಬಂದಿ ಆಗಮಿಸುತ್ತಿದ್ದಂತೆ ಮತ್ತೊಮ್ಮೆ ಮಳೆ ಸುರಿಯಲಾರಂಭಿಸಿತು.

ಒಂದು ವೇಳೆ ಮಳೆ ಕಡಿಮೆಯಾದರೆ ಗುರುವಾರ ಬೆಳಗ್ಗೆ 8:45ಕ್ಕೆ ಟಾಸ್ ಚಿಮ್ಮುವ ಪ್ರಕ್ರಿಯೆ ನಡೆಯಲಿದೆ.

ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಪೂರ್ವ ತಯಾರಿಯಾಗಿ ಉಭಯ ತಂಡಗಳು ಮಂಗಳವಾರ ನಡೆಸಬೇಕಾಗಿದ್ದ ಅಭ್ಯಾಸಗಳು ರದ್ದಾಗಿದ್ದವು.

ಅಕ್ಟೋಬರ್ 24ರಂದು ಪುಣೆಯಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ನವೆಂಬರ್ 1ರಂದು ಮುಂಬೈನಲ್ಲಿ ಮೂರನೇ ಟೆಸ್ಟ್ ಪಂದ್ಯ ನಿಗದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News