×
Ad

ರೋಹಿತ್ ಬಳಗಕ್ಕೆ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತವಕ | ನಾಳೆ ಕೊನೆಯ ಲೀಗ್ ಪಂದ್ಯ: ಭಾರತ-ನ್ಯೂಝಿಲ್ಯಾಂಡ್ ಸೆಣಸಾಟ

Update: 2025-03-01 20:26 IST

ರೋಹಿತ್ ಶರ್ಮಾ | PTI 

ದುಬೈ: ಸೆಮಿ ಫೈನಲ್‌ಗೆ ಪ್ರವೇಶಿಸುವ ಮೊದಲು ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು, ಅಜೇಯ ದಾಖಲೆಯನ್ನು ಕಾಯ್ದುಕೊಳ್ಳುವ ತವಕದಲ್ಲಿರುವ ಭಾರತ ಹಾಗೂ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳು ರವಿವಾರ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ಕಾದಾಡಲಿವೆ.

ಈ ಎರಡು ತಂಡಗಳು ‘ಎ’ ಗುಂಪಿನಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳನ್ನು ಮಣಿಸಿವೆ. ಪರಿಣಾಮವಾಗಿ ಏಶ್ಯದ ಈ ಎರಡು ತಂಡಗಳು ಸ್ಪರ್ಧಾವಳಿಯಿಂದ ಹೊರಬಿದ್ದಿವೆ. ಆಡಿರುವ ಎರಡೂ ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆಯೊಂದಿಗೆ ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಸೆಮಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿವೆ.

ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ‘ಬಿ’ ಗುಂಪಿನ ಕೊನೆಯ ಲೀಗ್ ಪಂದ್ಯದ ಫಲಿತಾಂಶದ ನಂತರ ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳ ಸೆಮಿ ಫೈನಲ್ ಎದುರಾಳಿ ನಿರ್ಧಾರವಾಗಲಿದೆ.

ಆಸ್ಟ್ರೇಲಿಯ ತಂಡವು ಈಗಾಗಲೇ ‘ಬಿ’ ಗುಂಪಿನಿಂದ ಸೆಮಿ ಫೈನಲ್‌ಗೆ ತಲುಪಿದೆ. ದಕ್ಷಿಣ ಆಫ್ರಿಕಾ ತಂಡವು ಮತ್ತೊಂದು ಸ್ಥಾನವನ್ನು ಶನಿವಾರ ಖಚಿತಪಡಿಸಿದೆ.

ಭಾರತ ತಂಡವು ಪಂದ್ಯಾವಳಿಯಲ್ಲಿ ಅವಳಿ ಗೆಲುವು ದಾಖಲಿಸಿದ ಹೊರತಾಗಿಯೂ ಬ್ಯಾಟರ್‌ಗಳು ಸ್ಪಿನ್ ಬೌಲಿಂಗ್ ಎದುರು ಪರದಾಡುತ್ತಿದ್ದಾರೆ. ನಾಯಕ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡದ ಸ್ಪಿನ್ ವಿಭಾಗವು ಭಾರತ ತಂಡಕ್ಕೆ ಗಂಭೀರ ಸವಾಲೊಡ್ಡುವ ಸಾಧ್ಯತೆಯಿದೆ.

ಭಾರತೀಯ ಬ್ಯಾಟರ್‌ಗಳು ಸ್ಪಿನ್ನರ್‌ಗಳ ಎದುರು ಒಂದು ಹಾಗೂ ಎರಡು ರನ್‌ಗಳನ್ನು ಗಳಿಸುವ ರಣನೀತಿಯ ಮೊರೆ ಹೋಗಿದ್ದಾರೆ. ವೇಗದ ಬೌಲರ್‌ಗಳನ್ನು ಗುರಿಯಾಗಿಸಿ ಬ್ಯಾಟ್ ಮಾಡುತ್ತಿದ್ದಾರೆ.

ಭಾರತೀಯ ಬ್ಯಾಟಿಂಗ್ ಸರದಿಯು ಬಾಂಗ್ಲಾದೇಶ ತಂಡದ ಸ್ಪಿನ್ನರ್‌ಗಳಾದ ಮೆಹಿದಿ ಹಸನ್ ಮಿರಾಝ್(37-0)ಹಾಗೂ ರಿಶಾದ್ ಹುಸೈನ್(2-38)ವಿರುದ್ಧ ಎಚ್ಚರಿಕೆಯ ರಣತಂತ್ರ ಅಳವಡಿಸಿಕೊಂಡರೆ, ಪಾಕಿಸ್ತಾನದ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ವಿರುದ್ಧವೂ ಇದೇ ರೀತಿಯ ತಂತ್ರ ಅನುಸರಿಸಿದ್ದರು.

ರವಿವಾರ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಭಾರತವು ಸ್ಯಾಂಟ್ನರ್, ಮೈಕಲ್ ಬ್ರೆಸ್‌ವೆಲ್ ಹಾಗೂ ಪಾರ್ಟ್ ಟೈಂ ಸ್ಪಿನ್ನರ್ ಗ್ಲೆನ್ ಫಿಲಿಪ್ಸ್ ವಿರುದ್ಧ ಹೇಗೆ ಆಡುತ್ತದೆ ಎಂದು ನೋಡಬೇಕಾಗಿದೆ.

ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್, ಪಾಕಿಸ್ತಾನದ ವಿರುದ್ಧ ಶತಕ ಗಳಿಸಿರುವ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಕಿವೀಸ್ ಸ್ಪಿನ್ನರ್‌ಗಳಿಗೆ ಮಹತ್ವದ ಸವಾಲೊಡ್ಡುವ ಸಾಧ್ಯತೆಯಿದೆ.

ಭಾರತ ತಂಡವು ಪಂದ್ಯಾವಳಿಗೆ ಐವರು ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಹಾಗೂ ವಾಶಿಂಗ್ಟನ್ ಸುಂದರ್‌ರನ್ನು ಆಯ್ಕೆ ಮಾಡಿದಾಗ ಪ್ರಶ್ನೆಗಳು ಉದ್ಬವಿಸಿದ್ದವು. ಇದೀಗ ಭಾರತ ತಂಡ ಹಲವು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಈ ತನಕ ಮೂವರು ಸ್ಪಿನ್ನರ್‌ಗಳಾದ-ಜಡೇಜ, ಅಕ್ಷರ್ ಹಾಗೂ ಕುಲದೀಪ್‌ರನ್ನು ಬಳಸಲಾಗಿದ್ದು, ಈ ಮೂವರು ಪಿಚ್ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಎದುರಾಳಿ ತಂಡಗಳಿಗೆ ಸವಾಲೊಡ್ಡುತ್ತಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ನಿರಂತರವಾಗಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್‌ಗಳಿಗೆ ಒತ್ತಡ ಹೇರುತ್ತಿದ್ದಾರೆ.

ನ್ಯೂಝಿಲ್ಯಾಂಡ್ ಬ್ಯಾಟಿಂಗ್ ಸರದಿಯಲ್ಲಿರುವ ಕೇನ್ ವಿಲಿಯಮ್ಸನ್, ವಿಲ್ ಯಂಗ್, ಟಾಮ್ ಲ್ಯಾಥಮ್, ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಸ್ಪಿನ್ ಬೌಲಿಂಗ್‌ನ ವಿರುದ್ಧ ದಿಟ್ಟವಾಗಿ ಆಡಬಲ್ಲರು.

ಟೀಮ್ ಮ್ಯಾನೇಜ್‌ಮೆಂಟ್ ಸೆಮಿ ಫೈನಲ್‌ಗಿಂತ ಮೊದಲು ನಾಯಕ ರೋಹಿತ್ ಶರ್ಮಾ ಹಾಗೂ ಮುಹಮ್ಮದ್ ಶಮಿಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ನೀಡುವ ಸಾಧ್ಯತೆಯಿದೆ.

ಪಾಕಿಸ್ತಾನದ ವಿರುದ್ಧದ ಪಂದ್ಯದ ವೇಳೆ ರೋಹಿತ್‌ಗೆ ಸ್ವಲ್ಪ ಅಸ್ವಸ್ಥತೆ ಕಾಡಿತ್ತು. ಸುಮಾರು 20 ನಿಮಿಷಗಳ ಕಾಲ ಮೈದಾನದಿಂದ ಹೊರಗಿದ್ದರು. ನಂತರ ಹಿಂತಿರುಗಿದ್ದರು. ಆದರೆ ಯಾವುದೆ ಸಮಸ್ಯೆ ಇಲ್ಲದೆ ಬ್ಯಾಟಿಂಗ್ ಮಾಡಿದ್ದರು.

ಒಂದು ವೇಳೆ ರೋಹಿತ್ ವಿಶ್ರಾಂತಿ ಪಡೆದರೆ ರಿಷಭ್ ಪಂತ್ ಪಂದ್ಯಾವಳಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಬಹುದು.

ಅದೇ ರೀತಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಶಮಿ ಬದಲಿಗೆ ಆಡುವ 11ರ ಬಳಗಕ್ಕೆ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಆಡಬಹುದು.

*ಪಂದ್ಯ ಆರಂಭದ ಸಮಯ: ಮಧ್ಯಾಹ್ನ 2:30

ತಂಡಗಳು

ಭಾರತ(ಸಂಭಾವ್ಯ): ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

ನ್ಯೂಝಿಲ್ಯಾಂಡ್(ಸಂಭಾವ್ಯ): ವಿಲ್ ಯಂಗ್, ಡೆವೊನ್ ಕಾನ್ವೆ, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಟಾಮ್ ಲ್ಯಾಥಮ್(ವಿಕೆಟ್‌ಕೀಪರ್), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೆಸ್‌ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಮ್ಯಾಟ್ ಹೆನ್ರಿ, ಕೈಲ್ ಜಮೀಸನ್, ವಿಲಿಯಮ್ ಒ’ ರೂರ್ಕಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News