×
Ad

ನಾಳೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ | ಪ್ರತಿಷ್ಠಿತ ಪ್ರಶಸ್ತಿಗಾಗಿ ಭಾರತ-ನ್ಯೂಝಿಲ್ಯಾಂಡ್ ಪೈಪೋಟಿ

Update: 2025-03-08 20:06 IST

PC : PTI 

ದುಬೈ: ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ರವಿವಾರ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ 2025ರ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಸೆಣಸಾಡಲಿವೆ. ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ 8 ವರ್ಷಗಳ ನಂತರ ಹೊಸ ಚಾಂಪಿಯನ್ ತಂಡವೊಂದು ಉದಯಿಸಲಿದೆ.

ಭಾರತ ತಂಡವು 2017ರಲ್ಲಿ ಕೊನೆಯ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿತ್ತು. ಆಗ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ್ದ ಸೋಲನುಭವಿಸಿ ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವುದರಿಂದ ವಂಚಿತವಾಗಿತ್ತು. ಆದರೆ ಈ ಬಾರಿ ಟೀಮ್ ಇಂಡಿಯಾವು ಸತತ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ತಲುಪಿದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ. ದಾಖಲೆಯ 5ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ತಂಡವು ಮೂರನೇ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಭಾರತ ತಂಡವು ಈ ಹಿಂದೆ 2002 ಹಾಗೂ 2013ರಲ್ಲಿ ಚಾಂಪಿಯನ್ ಆಗಿತ್ತು. 2000 ಹಾಗೂ 2017ರಲ್ಲಿ ರನ್ನರ್ಸ್ ಅಪ್ ಎನಿಸಿಕೊಂಡಿತ್ತು.

2000ರಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡ ಎದುರಾಳಿಯಾಗಿತ್ತು. ನೈರೋಬಿಯಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಸ್ಟೀಫನ್ ಫ್ಲೆಮಿಂಗ್ ನೇತೃತ್ವದ ಕಿವೀಸ್ ಪಡೆಯು ಸೌರವ್ ಗಂಗುಲಿ ನಾಯಕತ್ವದ ಭಾರತ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು.

2024ರ ಟಿ-20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿರುವ ರೋಹಿತ್ ಬಳಗವು ಸತತ ಎರಡನೇ ಐಸಿಸಿ ಪ್ರಶಸ್ತಿ ಗೆಲ್ಲುವತ್ತ ಚಿತ್ತಹರಿಸಿದೆ. 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತ ನಂತರ ಭಾರತ ಸತತ 4ನೇ ಬಾರಿ ಐಸಿಸಿ ಟೂರ್ನಿಯಲ್ಲಿ ಫೈನಲ್ ಪಂದ್ಯ ಆಡುತ್ತಿದೆ.

ಭಾರತ ಹಾಗೂ ನ್ಯೂಝಿಲ್ಯಾಂಡ್ ಒಂದೇ ಗುಂಪಿನಲ್ಲಿದ್ದರೂ ಉಭಯ ತಂಡಗಳ ಫೈನಲ್ ಹಾದಿ ವಿಭಿನ್ನವಾಗಿತ್ತು. ‘ಎ ಗುಂಪಿನಲ್ಲಿ ಭಾರತ ಎಲ್ಲ 3 ಪಂದ್ಯಗಳನ್ನು ಜಯಿಸಿ ಅಗ್ರ ಸ್ಥಾನ ಪಡೆದಿತ್ತು. ಸೆಮಿ ಫೈನಲ್‌ನಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿತ್ತು.

2000ರಲ್ಲಿ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗಿದ್ದ ನ್ಯೂಝಿಲ್ಯಾಂಡ್ ತಂಡವು ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿತ್ತು. ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 50 ರನ್ ಅಂತರದಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಪಂದ್ಯಾವಳಿಯುದ್ದಕ್ಕೂ ಪ್ರಾಬಲ್ಯ ಮೆರೆದಿದ್ದು, ನಾಲ್ವರು ಸ್ಪಿನ್ನರ್‌ಗಳನ್ನು ಒಳಗೊಂಡ ಸಮತೋಲಿತ ಬೌಲಿಂಗ್ ದಾಳಿ ಹಾಗೂ ಅಗ್ರ ಸರದಿಯನ್ನು ಹೆಚ್ಚು ಅವಲಂಬಿಸಿದೆ. ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು ಮಣಿಸುವ ಮೊದಲು ಗ್ರೂಪ್ ಹಂತದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನ್ಯೂಝಿಲ್ಯಾಂಡ್ ತಂಡಗಳನ್ನು ಸದೆಬಡಿದಿತ್ತು.

ಐಸಿಸಿ ಪಂದ್ಯಾವಳಿಗಳಲ್ಲಿ ಯಾವಾಗಲೂ ತನ್ನ ಶಕ್ತಿಮೀರಿ ಪ್ರದರ್ಶನ ನೀಡುತ್ತಾ ಬಂದಿರುವ ನ್ಯೂಝಿಲ್ಯಾಂಡ್ ತಂಡ ಫೈನಲ್ ಹಾದಿಯಲ್ಲಿ ಸಾಕಷ್ಟು ಹೋರಾಟ ನಡೆಸಿದೆ. ‘ಎ’ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳನ್ನು ಬೆನ್ನುಬೆನ್ನಿಗೆ ಸೋಲಿಸಿ ಸೆಮಿ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿದ್ದ ನ್ಯೂಝಿಲ್ಯಾಂಡ್ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿತ್ತು.

12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಭಾರತದ ಕನಸನ್ನು ಭಗ್ನಗೊಳಿಸುವ ತನ್ನ ಸಾಮರ್ಥ್ಯದ ಮೇಲೆ ನ್ಯೂಝಿಲ್ಯಾಂಡ್ ತಂಡ ವಿಶ್ವಾಸ ಇರಿಸಿಕೊಂಡಿದೆ.

*ನ್ಯೂಝಿಲ್ಯಾಂಡ್ ವಿರುದ್ಧ ನಾಕೌಟ್ ಸಂಕಷ್ಟವನ್ನು ಭಾರತ ನಿವಾರಿಸಿಕೊಳ್ಳಬಹುದೇ?

ಐಸಿಸಿ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ನ್ಯೂಝಿಲ್ಯಾಂಡ್ ತಂಡವು ಭಾರತಕ್ಕೆ ‘ಕಂಟಕ’ವಾಗುತ್ತಾ ಬಂದಿದೆ. ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಕಿವೀಸ್ ಪಡೆಯು ಭಾರತ ತಂಡದ ವಿರುದ್ಧದ ಹೆಡ್-ಟು-ಹೆಡ್ ದಾಖಲೆಯಲ್ಲಿ 3-1 ರಿಂದ ಮುಂದಿದೆ. ಇದರಲ್ಲಿ 2019ರ ಏಕದಿನ ವಿಶ್ವಕಪ್ ಸೆಮಿ ಫೈನಲ್ ಹಾಗೂ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕೂಡ ಸೇರಿದೆ. ಪ್ರಸಕ್ತ ಪಂದ್ಯಾವಳಿಯ ಗ್ರೂಪ್ ಹಂತದಲ್ಲಿ ಭಾರತ ತಂಡವು ನ್ಯೂಝಿಲ್ಯಾಂಡ್ ತಂಡವನ್ನು 44 ರನ್ ಅಂತರದಿಂದ ಸೋಲಿಸಿದ್ದರೂ, ಹೆಚ್ಚಿನ ಒತ್ತಡದ ಪರಿಸ್ಥಿತಿಯಲ್ಲಿ ಕಿವೀಸ್ ಮೇಲುಗೈ ಸಾಧಿಸುತ್ತಾ ಬಂದಿದೆ ಎನ್ನುವುದನ್ನು ಇತಿಹಾಸ ಹೇಳುತ್ತಿದೆ.

ಭಾರತದ ಪಾಳಯಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪ್ರಮುಖ ಆಟಗಾರರಾಗಿದ್ದಾರೆ. ಆದರೆ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ತಂಡದ ಬ್ಯಾಟಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ.

ಮತ್ತೊಂದೆಡೆ ನ್ಯೂಝಿಲ್ಯಾಂಡ್ ತಂಡವು ತನ್ನ ಆಲ್‌ರೌಂಡ್ ಶಕ್ತಿಯನ್ನು ಅವಲಂಬಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿ ಫೈನಲ್ ಪಂದ್ಯದ ಗೆಲುವಿಗೆ ರಚಿನ್ ರವೀಂದ್ರ ಹಾಗೂ ಕೇನ್ ವಿಲಿಯಮ್ಸನ್ ಮಹತ್ವದ ಕೊಡುಗೆ ನೀಡಿದ್ದರು.

ಕುಲದೀಪ್ ಯಾದವ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ಅವರನ್ನೊಳಗೊಂಡ ಸ್ಪಿನ್ ಬೌಲಿಂಗ್ ವಿಭಾಗವು ಪಂದ್ಯಾವಳಿಯುದ್ದಕ್ಕೂ ಭಾರತ ತಂಡದ ‘ಟ್ರಂಪ್‌ಕಾರ್ಡ್’ ಆಗಿದ್ದರು. ನಾಲ್ವರು ಸ್ಪಿನ್ನರ್‌ಗಳು ಟೂರ್ನಿಯಲ್ಲಿ ಒಟ್ಟು 21 ವಿಕೆಟ್‌ಗಳನ್ನು ಪಡೆದಿದ್ದಾರೆ. ನ್ಯೂಝಿಲ್ಯಾಂಡ್ ತಂಡದಲ್ಲೂ ಮಿಚೆಲ್ ಸ್ಯಾಂಟ್ನರ್, ಮೈಕಲ್ ಬ್ರೆಸ್‌ವೆಲ್, ರಚಿನ್ ರವೀಂದ್ರ ಹಾಗೂ ಗ್ಲೆನ್ ಫಿಲಿಪ್ಸ್‌ರಂತಹ ಸ್ಪಿನ್ ಬೌಲರ್‌ಗಳಿದ್ದು, ಒಟ್ಟು 17 ವಿಕೆಟ್‌ಗಳನ್ನು ಪಡೆದಿದ್ದು, ಭಾರತಕ್ಕೆ ಪೈಪೋಟಿ ನೀಡುವ ವಿಶ್ವಾಸದಲ್ಲಿದ್ದಾರೆ. ಫೈನಲ್ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ ನಿರ್ಣಾಯಕ ಅಂಶವಾಗಿದೆ.

► ದುಬೈ ಪಿಚ್ ರಿಪೋರ್ಟ್

ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಮ್ ಪಂದ್ಯಾವಳಿಯುದ್ದಕ್ಕೂ ಕಡಿಮೆ ಮೊತ್ತದ ಪಂದ್ಯಕ್ಕೆ ಸಾಕ್ಷಿಯಾಗುತ್ತಾ ಬಂದಿದೆ. ಪಾಕಿಸ್ತಾನದ ವಿರುದ್ಧ ಗ್ರೂಪ್ ಹಂತದಲ್ಲಿ ಭಾರತ ಆಡಿರುವ ಪಿಚ್‌ನಲ್ಲಿಯೇ ಫೈನಲ್ ಪಂದ್ಯವನ್ನು ಆಡಲಾಗುತ್ತಿದೆ. ಪಿಚ್ ನಿಧಾನಗತಿಯಲ್ಲಿ ವರ್ತಿಸಲಿದ್ದು, ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಭಾರತದ ಸ್ಪಿನ್ನರ್‌ಗಳು ಇಂತಹ ಪರಿಸ್ಥಿತಿಯಲ್ಲಿ ಮೇಲುಗೈ ಸಾಧಿಸಬಲ್ಲರು, ಆದರೆ ನ್ಯೂಝಿಲ್ಯಾಂಡ್‌ನ ಸ್ಪಿನ್ ಬೌಲರ್‌ಗಳು ಕೂಡ ಭಾರತದ ಬ್ಯಾಟರ್‌ಗಳಿಗೆ ಭೀತಿ ಹುಟ್ಟಿಸಬಹುದು. ಫೈನಲ್ ಪಂದ್ಯ 270ರಿಂದ 280ರ ನಡುವೆ ಸ್ಪರ್ಧಾತ್ಮಕ ಮೊತ್ತದ ಸ್ಪರ್ಧೆಯಾಗುವ ಸಾಧ್ಯತೆಯಿದೆ.

*ಏಕದಿನ ಕ್ರಿಕೆಟ್‌ನಲ್ಲಿ ಭಾರತ-ನ್ಯೂಝಿಲ್ಯಾಂಡ್ ಹೆಡ್-ಟು-ಹೆಡ್ ದಾಖಲೆ

ಆಡಿದ ಒಟ್ಟು ಪಂದ್ಯಗಳು: 119

ಭಾರತಕ್ಕೆ ಜಯ: 61

ನ್ಯೂಝಿಲ್ಯಾಂಡ್‌ಗೆ ಗೆಲುವು: 50

ಟೈ: 1

ಫಲಿತಾಂಶರಹಿತ: 7

ಏಕದಿನ ಕ್ರಿಕೆಟಿನ ಹೆಡ್-ಟು-ಹೆಡ್ ದಾಖಲೆಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ಸ್ವಲ್ಪ ಮೇಲುಗೈ ಸಾಧಿಸಿದೆ. 119 ಪಂದ್ಯಗಳಲ್ಲಿ 61ರಲ್ಲಿ ಜಯ ಸಾಧಿಸಿದರೆ, ಕಿವೀಸ್ ಪಡೆ 50 ಬಾರಿ ಜಯ ದಾಖಲಿಸಿದೆ. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದ್ದರೆ, 7 ಪಂದ್ಯಗಳು ರದ್ದಾಗಿವೆ.

►ಐಸಿಸಿ ಟೂರ್ನಿಗಳಲ್ಲಿ ಭಾರತ-ನ್ಯೂಝಿಲ್ಯಾಂಡ್ ಹೆಡ್-ಟು-ಹೆಡ್

ಆಡಿರುವ ಒಟ್ಟು ಪಂದ್ಯಗಳು: 12

ಭಾರತಕ್ಕೆ ಗೆಲುವು: 6

ನ್ಯೂಝಿಲ್ಯಾಂಡ್‌ಗೆ ಗೆಲುವು: 6

ಐಸಿಸಿ ಪಂದ್ಯಾವಳಿಯ ಇತಿಹಾಸದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ. 10 ವಿಶ್ವಕಪ್ ಪಂದ್ಯಗಳು ಹಾಗೂ ಎರಡು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ತಲಾ 6ರಲ್ಲಿ ಜಯ ಸಾಧಿಸಿವೆ. ವಿಶ್ವಕಪ್ ಟೂರ್ನಿಯಲ್ಲಿ 5-5 ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ 1-1ರಿಂದ ಸಮಬಲ ಸಾಧಿಸಿವೆ.

►ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಭಾರತ-ನ್ಯೂಝಿಲ್ಯಾಂಡ್

ಐಸಿಸಿ ಟೂರ್ನಿಯ ನಾಕೌಟ್ ಹಂತದ ಹಣಾಹಣಿಯಲ್ಲಿ ನ್ಯೂಝಿಲ್ಯಾಂಡ್ ತಂಡವು 4 ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿ ಮೇಲುಗೈ ಸಾಧಿಸಿದೆ.

2000 ಚಾಂಪಿಯನ್ಸ್ ಟ್ರೋಫಿ ಫೈನಲ್-ನ್ಯೂಝಿಲ್ಯಾಂಡ್‌ಗೆ ಜಯ

2019ರ ವಿಶ್ವಕಪ್ ಸೆಮಿ ಫೈನಲ್-ನ್ಯೂಝಿಲ್ಯಾಂಡ್‌ಗೆ ಗೆಲುವು

2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್-ನ್ಯೂಝಿಲ್ಯಾಂಡ್‌ಗೆ ಗೆಲುವು

2023ರ ವಿಶ್ವಕಪ್ ಸೆಮಿ ಫೈನಲ್-ಭಾರತಕ್ಕೆ ಗೆಲುವು

►ಅಂಕಿ-ಅಂಶ

*ಪ್ರಸಕ್ತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮ್ಯಾಟ್ ಹೆನ್ರಿ 16.70ರ ಸರಾಸರಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಐದು ವಿಕೆಟ್‌ಗಳನ್ನು ದುಬೈನಲ್ಲಿ ಭಾರತ ವಿರುದ್ಧ ಆಡಿರುವ ಗ್ರೂಪ್ ಪಂದ್ಯದಲ್ಲಿ ಉರುಳಿಸಿದ್ದರು.

* ಭಾರತ ತಂಡವು ಹಿಂದಿನ 14 ಐಸಿಸಿ ಟೂರ್ನಿಗಳಲ್ಲಿ 12 ಬಾರಿ ನಾಕೌಟ್ ಹಂತಕ್ಕೇರಿದೆ. ಮೂರು ಬಾರಿ ಜಯ ಸಾಧಿಸಿದೆ. ನ್ಯೂಝಿಲ್ಯಾಂಡ್ 8 ಬಾರಿ ನಾಕೌಟ್ ಹಂತಕ್ಕೇರಿದ್ದು, 1ರಲ್ಲಿ ಜಯ ಸಾಧಿಸಿದೆ.

* ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿರುವ ವೆಸ್ಟ್‌ಇಂಡೀಸ್ ದಂತಕತೆ ಕ್ರಿಸ್ ಗೇಲ್ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ 42 ರನ್ ಅಗತ್ಯವಿದೆ.

*ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್‌ನ ಸ್ಪಿನ್ನರ್‌ಗಳು 7 ವಿಕೆಟ್‌ಗಳನ್ನು ಕಬಳಿಸಿದ್ದರು. ಇದು 50 ಓವರ್ ಕ್ರಿಕೆಟ್‌ನಲ್ಲಿ ಜಂಟಿ ಗರಿಷ್ಠ ವಿಕೆಟ್ ಆಗಿದೆ. ಆದರೆ ಇದೇ ಸ್ಪಿನ್ನರ್‌ಗಳು ಭಾರತ ವಿರುದ್ಧ ಗ್ರೂಪ್ ಪಂದ್ಯದಲ್ಲಿ 128 ರನ್ ನೀಡಿ ಕೇವಲ 2 ವಿಕೆಟ್‌ಗಳನ್ನು ಪಡೆದಿದ್ದರು.

►ಟೀಮ್ ನ್ಯೂಸ್

ಭಾರತ ತಂಡವು ಈಗಾಗಲೆ ಗ್ರೂಪ್ ಹಂತದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಮಣಿಸಿದ್ದು, ವರುಣ್ ಚಕ್ರವರ್ತಿಯನ್ನು ಮತ್ತೊಮ್ಮೆ ಆಡಿಸಲು ಬಯಸಿದೆ.

3 ದಿನಗಳ ಹಿಂದೆ ಲಾಹೋರ್‌ನಲ್ಲಿ ನಡೆದಿದ್ದ ಸೆಮಿ ಫೈನಲ್‌ನಲ್ಲಿ ಕ್ಯಾಚ್ ಪಡೆಯುವ ಪ್ರಯತ್ನದಲ್ಲಿದ್ದಾಗ ಬಲ ಭುಜದ ಗಾಯಕ್ಕೀಡಾಗಿರುವ ವೇಗದ ಬೌಲರ್ ಮ್ಯಾಟ್ ಹೆನ್ರಿ ಲಭ್ಯವಾಗುವ ಕುರಿತು ಕಿವೀಸ್ ಚಿಂತಿತವಾಗಿದೆ. ಭಾರತ ವಿರುದ್ಧ ಪಂದ್ಯಕ್ಕೆ ಹೆನ್ರಿ ಅತ್ಯಂತ ಮುಖ್ಯವಾಗಿದ್ದಾರೆ. ಹೆನ್ರಿ ಅಲಭ್ಯ ಕಿವೀಸ್‌ಗೆ ಭಾರೀ ನಷ್ಟವಾಗಲಿದೆ.

*ಪಂದ್ಯ ಆರಂಭದ ಸಮಯ: ಮಧ್ಯಾಹ್ನ 2:30

►ವಿಜೇತ, ಪರಾಜಿತ ತಂಡಗಳಿಗೆ ಸಿಗುವ ಬಹುಮಾನ ಮೊತ್ತದ ವಿವರ

ಪಂದ್ಯಾವಳಿ ಆರಂಭಕ್ಕೆ ಮೊದಲು 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅಂದಾಜು 60.06 ಕೋಟಿ ರೂ. ಬಹುಮಾನ ಮೊತ್ತವನ್ನು ಐಸಿಸಿ ಘೋಷಿಸಿತ್ತು. ಇದು 2017ರ ಆವೃತ್ತಿಯ ಟೂರ್ನಿಯ ಬಹುಮಾನ ಮೊತ್ತಕ್ಕಿಂತ ಶೇ.53ರಷ್ಟು ಹೆಚ್ಚಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಪ್ರತೀ ತಂಡವು 1.08 ಕೋಟಿ ರೂ. ಬಹುಮಾನ ಖಚಿತವಾಗಿದೆ.

ಪ್ರತೀ ಗ್ರೂಪ್ ಪಂದ್ಯದ ಗೆಲುವಿಗೆ ಅಂದಾಜು 2.95 ಕೋಟಿ ರೂ. ಸಿಗಲಿದೆ. ಭಾರತ ತಂಡ ಮೊದಲ ಸುತ್ತಿನಲ್ಲಿ ಎಲ್ಲ 3 ಪಂದ್ಯಗಳನ್ನು ಜಯಿಸಿದ್ದು, ನ್ಯೂಝಿಲ್ಯಾಂಡ್ 2 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಭಾರತವು ಗ್ರೂಪ್ ಪಂದ್ಯಗಳ ಗೆಲುವಿಗಾಗಿ ಅಂದಾಜು 88 ಲಕ್ಷ ರೂ. ಹಾಗೂ ನ್ಯೂಝಿಲ್ಯಾಂಡ್ ತಂಡ ಅಂದಾಜು 59 ಲಕ್ಷ ರೂ. ಗಳಿಸಲಿದೆ.

ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳ ನಡುವಿನ ಫೈನಲ್ ಸ್ಪರ್ಧೆಯ ವಿಜೇತ ತಂಡವು 2.24 ಮಿಲಿಯನ್ ಡಾಲರ್(ಅಂದಾಜು 19.49 ಕೋಟಿ ರೂ.)ಬಹುಮಾನ ಪಡೆದರೆ, ರನ್ನರ್ಸ್ ಅಪ್ ತಂಡ 1.12 ಮಿಲಿಯನ್ ಡಾಲರ್(ಸುಮಾರು 9.74 ಕೋಟಿ ರೂ.)ಸ್ವೀಕರಿಸಲಿದೆ.

ಭಾರತ ತಂಡವು ಪ್ರಶಸ್ತಿ ಜಯಿಸಿದರೆ ಒಟ್ಟು 2.46 ಮಿಲಿಯನ್ ಡಾಲರ್(ಸುಮಾರು 21.4 ಕೋಟಿ ರೂ.)ಗಳಿಸಲಿದೆ. ನ್ಯೂಝಿಲ್ಯಾಂಡ್ ಚಾಂಪಿಯನ್ ಆದರೆ 2.43 ಮಿಲಿಯನ್ ಡಾಲರ್(ಅಂದಾಜು 21.1 ಕೋಟಿ ರೂ.)ಸಂಪಾದಿಸಲಿದೆ.

ಮತ್ತೊಂದೆಡೆ, ಭಾರತ ತಂಡವು ಫೈನಲ್‌ನಲ್ಲಿ ಸೋತರೆ 1.34 ಮಿಲಿಯನ್ ಡಾಲರ್(ಅಂದಾಜು 11.6 ಕೋಟಿ ರೂ.)ಹಾಗೂ ನ್ಯೂಝಿಲ್ಯಾಂಡ್ ಸೋತರೆ 1.31 ಮಿಲಿಯನ್ ಡಾಲರ್(11.4 ಕೋಟಿ ರೂ.)ಮನೆಗೊಯ್ಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News