×
Ad

ಪರಸ್ಪರರನ್ನು ಅಭಿನಂದಿಸಿದ ಭಾರತ-ಪಾಕ್ ಹಾಕಿ ಆಟಗಾರರು

Update: 2025-10-15 22:06 IST

Screengrab : X \ @MahamFazal_

ಕೌಲಾಲಂಪುರ, ಅ. 15: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರು ನಡೆಸಿದ ದಾಳಿ ಹಾಗೂ ಬಳಿಕ ಅದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆಯು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳಲ್ಲಿರುವ ಭಯೋತ್ಪಾದಕರನ್ನು ಗುರಿಯಾಗಿಸಿ ನಡೆಸಿದ ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ಕ್ರೀಡಾಳುಗಳು ಮೈದಾನಗಳಲ್ಲಿ ಪರಸ್ಪರ ಆಕ್ರಮಣಕಾರಿ ಧೋರಣೆಯನ್ನು ತೋರ್ಪಡಿಸಲು ಆರಂಭಿಸಿದರು. ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ಕ್ರಿಕೆಟಿಗರ ಕೈಕುಲುಕಲು ನಿರಾಕರಿಸಿದರು. ಫುಟ್ಬಾಲ್ ಮೈದಾನದಲ್ಲಿ ಉಭಯ ದೇಶಗಳ ಕ್ರಿಕೆಟಿಗರು ಪರಸ್ಪರ ಆಕ್ರಮಣಕಾರಿ ಸಂಜ್ಞೆಗಳನ್ನು ಮಾಡಿದರು.

ಆದರೆ, ಮಲೇಶ್ಯದಲ್ಲಿ ಮಂಗಳವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸುಲ್ತಾನ್ ಆಫ್ ಜೊಹೊರ್ ಕಪ್ ಪಂದ್ಯದಲ್ಲಿ ವಾತಾವರಣ ಸಂಪೂರ್ಣ ಭಿನ್ನವಾಗಿತ್ತು. ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡದ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಕ್ರೀಡಾ ಮನೋಭಾವ ಪ್ರದರ್ಶಿಸಿದರು.

ಪಂದ್ಯದ ವೇಳೆ, ಉಭಯ ತಂಡಗಳ ಅಂಡರ್-21 ಆಟಗಾರರು ಪರಸ್ಪರರನ್ನು ಅಭಿನಂದಿಸುವ ಮತ್ತು ಕೈಗಳನ್ನು ಪರಸ್ಪರ ತಟ್ಟುವುದನ್ನು ವೀಡಿಯೊಗಳು ಮತ್ತು ಚಿತ್ರಗಳು ತೋರಿಸಿವೆ.

ಈ ಪಂದ್ಯವು 3-3 ಗೋಲುಗಳಿಂದ ಡ್ರಾ ಆಗಿದೆ.

ಇತ್ತೀಚೆಗೆ ಯುಎಇಯಲ್ಲಿ ನಡೆದ ಏಶ್ಯ ಕಪ್ ಪಂದ್ಯಗಳಲ್ಲಿ ಮತ್ತು ಕೊಲಂಬೊದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನಿ ತಂಡಗಳು ಪರಸ್ಪರ ಕೈಕುಲುಕುವುದರಿಂದ ದೂರ ಸರಿದ ಬಳಿಕ, ಈ ಬೆಳವಣಿಗೆ ಸಂಭವಿಸಿದೆ. ಭಾರತೀಯ ಕ್ರಿಕೆಟ್ ತಂಡವು ಏಶ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹಾಗೂ ಪಾಕಿಸ್ತಾನಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮುಹ್ಸಿನ್ ನಖ್ವಿಯಿಂದ ಏಶ್ಯ ಕಪ್ ಟ್ರೋಫಿಯನ್ನೂ ಸ್ವೀಕರಿಸಲು ನಿರಾಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News