×
Ad

ಭಾರತಕ್ಕೆ ನಿಧಾನಗತಿಯ ಓವರ್ ಗೆ ದಂಡ ಹಾಕದಂತೆ ಒತ್ತಡ ಹೇರಲಾಗಿತ್ತು: ಮಾಜಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಗಂಭೀರ ಆರೋಪ

Update: 2025-10-28 16:12 IST

 ರೆಫರಿ ಕ್ರಿಸ್ ಬ್ರಾಡ್ | Photo Credit  : @ICC

ಲಂಡನ್: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯಲ್ಲಿ ಭಾರತ ತನ್ನ ಪ್ರಭಾವವನ್ನು ಬೀರುತ್ತಿದೆ ಎಂಬ ಗಂಭೀರ ಆರೋಪವನ್ನು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಹಾಗೂ ಪಂದ್ಯ ರೆಫರಿ ಕ್ರಿಸ್ ಬ್ರಾಡ್ ಮಾಡಿದ್ದಾರೆ. ನಿಧಾನಗತಿಯ ಓವರ್ ಮಾಡಿದ್ದಕ್ಕೆ ಭಾರತ ತಂಡದ ವಿರುದ್ಧ ಕ್ರಮ ಕೈಗೊಳ್ಳಬಾರದೆಂದು ತಮಗೆ ಒತ್ತಡ ಬಂದಿತ್ತು ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ʼದಿ ಟೆಲಿಗ್ರಾಫ್ʼ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬ್ರಾಡ್, “ನಾನು ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ಭಾರತ ತಂಡ ನಿಗದಿತ ಸಮಯಕ್ಕಿಂತ ಮೂರು-ನಾಲ್ಕು ಓವರ್‌ಗಳು ನಿಧಾನವಾಗಿ ಬೌಲಿಂಗ್ ಮಾಡಿತ್ತು. ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿಸುತ್ತಿದ್ದಾಗ ನನಗೊಂದು ಕರೆ ಬಂತು. ‘ಸ್ವಲ್ಪ ಸೌಮ್ಯವಾಗಿ ನಡೆದುಕೊಳ್ಳಿ, ಅದು ಭಾರತ ತಂಡ’ ಎಂದು ಹೇಳಲಾಯಿತು. ನಂತರ ನಾವು ಕೆಲವು ನಿಮಿಷಗಳನ್ನು ‘ಸಮಯದಲ್ಲಿ’ ಸೇರಿಸಿ ವಿಷಯವನ್ನು ಅಲ್ಲಿಗೇ ಮುಚ್ಚಬೇಕಾಯಿತು,” ಎಂದು ಬ್ರಾಡ್ ಆರೋಪಿಸಿದ್ದಾರೆ.

“ವಿನ್ಸ್ ವ್ಯಾನ್ ಡೆರ್ ಬಿಝ್ಲ್ (ಐಸಿಸಿ ಅಂಪೈರ್‌ಗಳ ನಿರ್ವಹಣಾಧಿಕಾರಿ) ಇದ್ದಾಗ ನಮ್ಮಂತಹ ಅಧಿಕಾರಿಗಳಿಗೆ ಬೆಂಬಲ ಸಿಕ್ಕಿತ್ತು. ಆದರೆ ಅವರು ಹೋದ ನಂತರ ನಿರ್ವಹಣೆ ದುರ್ಬಲವಾಯಿತು. ಈಗ ಭಾರತ ಕ್ರಿಕೆಟ್‌ ನಲ್ಲಿನ ಆರ್ಥಿಕ ಶಕ್ತಿಯಾಗಿದ್ದು, ಐಸಿಸಿಯ ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತಿದೆ. ಇಂದಿನ ದಿನಗಳಲ್ಲಿ ಐಸಿಸಿಯ ಸ್ಥಾನವು ಕ್ರೀಡೆಗಿಂತ ರಾಜಕೀಯವಾಗಿದೆ,” ಎಂದು ಕಟುವಾಗಿ ಟೀಕಿಸಿದ್ದಾರೆ.

2024ರಲ್ಲಿ ತನ್ನ ಸ್ಥಾನದಿಂದ ಹಿಂದೆ ಸರಿದ ಬ್ರಾಡ್, ಆಗಲೇ ಐಸಿಸಿಯು ತಮಗೆ ಮುಂದುವರಿಯಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದರು. ಅವರ ಇತ್ತೀಚಿನ ಹೇಳಿಕೆಗಳು ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಐಸಿಸಿಯಿಂದ ಈ ಕುರಿತು ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News