ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ | ರಿಷಭ್ ಪಂತ್ ಪುನರಾಗಮನ, ಮತ್ತೆ ಮುಹಮ್ಮದ್ ಶಮಿ ಕಡೆಗಣನೆ
ಹೊಸದಿಲ್ಲಿ, ನ.5: ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನ.14ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ರಿಷಭ್ ಪಂತ್ ಪುನರಾಗಮನ ಮಾಡಿದ್ದಾರೆ.
ಬುಧವಾರ ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಎನ್. ಜಗದೀಶನ್ ಬದಲಿಗೆ ವಿಕೆಟ್ ಕೀಪರ್-ಬ್ಯಾಟರ್ ಪಂತ್ ರನ್ನು ಸೇರಿಸಿಕೊಳ್ಳಲಾಗಿದೆ. ಪ್ರಸಿದ್ಧ ಕೃಷ್ಣ ಬದಲಿಗೆ ಆಕಾಶ ದೀಪ್ಗೆ ಅವಕಾಶ ನೀಡಲಾಗಿದೆ. ಈ ಋತುವಿನ ರಣಜಿ ಟ್ರೋಫಿಯಲ್ಲಿ ಬಂಗಾಳದ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಮುಹಮ್ಮದ್ ಶಮಿ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ.
ಜುಲೈನಲ್ಲಿ ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ವೇಳೆ ಕಾಲ್ಬೆರಳ ಮುರಿತಕ್ಕೊಳಗಾಗಿದ್ದ ಪಂತ್ ಇದೀಗ ಚೇತರಿಸಿಕೊಂಡಿದ್ದು, ಇತ್ತೀಚೆಗೆ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಪಂದ್ಯವನ್ನು ಆಡಿದ್ದರು.
ಬೆಂಗಳೂರಿನ ಬಿಸಿಸಿಐ ಮೈದಾನದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ್ದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಪಂತ್ ನಾಯಕತ್ವದ ಭಾರತ ‘ಎ’ ತಂಡವು ರೋಚಕ ಜಯ ಸಾಧಿಸಿತ್ತು. ಪಂತ್ 2ನೇ ಇನಿಂಗ್ಸ್ ನಲ್ಲಿ ನಿರ್ಣಾಯಕ 90 ರನ್ ಗಳಿಸಿ ಭಾರತ ‘ಎ’ ತಂಡದ 275 ರನ್ ಚೇಸ್ ಗೆ ನೆರವಾಗಿದ್ದರು.
ಇತ್ತೀಚೆಗೆ ವೆಸ್ಟ್ಇಂಡೀಸ್ ವಿರುದ್ಧ ಸ್ವದೇಶದಲ್ಲಿ ಆಡಿದ್ದ ಟೆಸ್ಟ್ ತಂಡವನ್ನು ಬಹುತೇಕ ಉಳಿಸಿಕೊಳ್ಳಲಾಗಿದೆ. ಭಾರತದ ಈಗಿನ ಟೆಸ್ಟ್ ತಂಡದಲ್ಲಿರುವ ಹೆಚ್ಚಿನ ಪ್ರಮುಖ ಆಟಗಾರರು ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ಆಡುತ್ತಿದ್ದಾರೆ.
ನ.8ರಂದು 5 ಪಂದ್ಯಗಳ ಟಿ20 ಸರಣಿಯು ಮುಕ್ತಾಯವಾದ ನಂತರ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, ಜಸ್ಪ್ರಿತ್ ಬುಮ್ರಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ಅವರು ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಟೆಸ್ಟ್ ಸರಣಿಯು 2 ಪಂದ್ಯಗಳನ್ನು ಒಳಗೊಂಡಿದ್ದು, ಮೊದಲ ಪಂದ್ಯವು ನ.14ರಿಂದ ಕೋಲ್ಕತಾದಲ್ಲಿ ಆರಂಭವಾದರೆ, 2ನೇ ಟೆಸ್ಟ್ ಪಂದ್ಯವು ಗುವಾಹಟಿಯಲ್ಲಿ ನ.22ರಿಂದ ಆರಂಭವಾಗಲಿದೆ. ಗುವಾಹಟಿ ನಗರವು ಇದೇ ಮೊದಲ ಬಾರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.
ಭಾರತದ ಟೆಸ್ಟ್ ತಂಡ: ಶುಭಮನ್ ಗಿಲ್(ನಾಯಕ),ರಿಷಭ್ ಪಂತ್(ವಿಕೆಟ್ ಕೀಪರ್, ಉಪ ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್, ಧ್ರುವ ಜುರೆಲ್, ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್, ಜಸ್ಪ್ರಿತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ ಕುಮಾರ್ ರೆಡ್ಡಿ, ಮುಹಮ್ಮದ್ ಸಿರಾಜ್, ಕುಲದೀಪ ಯಾದವ್ ಹಾಗೂ ಆಕಾಶ ದೀಪ್.