×
Ad

2036ರ ಒಲಿಂಪಿಕ್ಸ್ ಆತಿಥ್ಯ ಪಡೆಯಲು ಭಾರತದಿಂದ ಎಲ್ಲಾ ಪ್ರಯತ್ನ : ಪ್ರಧಾನಿ ಮೋದಿ

Update: 2025-01-28 23:35 IST

Photo: PTI

ಡೆಹ್ರಾಡೂನ್: 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯದ ಹಕ್ಕುಗಳನ್ನು ಪಡೆಯಲು ಭಾರತವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2036ರ ಒಲಿಂಪಿಕ್ಸ್ ಆತಿಥ್ಯವು ಭಾರತಕ್ಕೆ ದೊರೆತರೆ ಅದು ಭಾರತೀಯ ಕ್ರೀಡೆಗಳನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

‘‘2036ರ ಒಲಿಂಪಿಕ್ ಕ್ರೀಡಾಕೂಟವನ್ನು ಭಾರತದಲ್ಲಿ ಏರ್ಪಡಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಒಲಿಂಪಿಕ್ಸ್ ಕ್ರೀಡಾಕೂಟ ನಡೆದಾಗಲೆಲ್ಲ ಎಲ್ಲಾ ಕ್ಷೇತ್ರಗಳು ಅದರ ಲಾಭ ಪಡೆಯುತ್ತವೆ. ಅದು ಕ್ರೀಡಾಳುಗಳಿಗೆ ಉತ್ತಮ ಸೌಕರ್ಯಗಳನ್ನು ನಿರ್ಮಿಸುತ್ತದೆ’’ ಎಂದು ಮೋದಿ ನುಡಿದರು.

2023ರಲ್ಲಿ ಮುಂಬೈಯಲ್ಲಿ ನಡೆದ ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನದ ವೇಳೆ, 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವನ್ನು ವಹಿಸುವ ಭಾರತದ ಬಯಕೆಯನ್ನು ಮೋದಿ ವ್ಯಕ್ತಪಡಿಸಿದ್ದರು. ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಭಾರತದ ಇಚ್ಛೆಯನ್ನು ಅಧಿಕೃತವಾಗಿ ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಗೆ ಸಲ್ಲಿಸಿದೆ.

‘‘ನಿಮ್ಮ ಸಾಮರ್ಥ್ಯವನ್ನು ವೃದ್ಧಿಗೊಳಿಸುವುದು ನಮ್ಮ ಉದ್ದೇಶವಾಗಿದೆ. ನಿಮಗೆ ಹೇಗೆ ಬೆಂಬಲ ನೀಡುವುದು ಎಂಬ ಬಗ್ಗೆ ನಾವು ಗಮನ ಹರಿಸಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದಾಗಿ ನಾವು ಭಾವಿಸಿದ್ದೇವೆ’’ ಎಂದು ಉದ್ಘಾಟನಾ ಸಮಾರಂಭದಲ್ಲಿ ನೆರೆದ ಕ್ರೀಡಾಳುಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ ಹೇಳಿದರು.

ಕ್ರೀಡಾಕೂಟವು ಫೆಬ್ರವರಿ 14ರಂದು ಸಂಪನ್ನಗೊಳ್ಳುತ್ತದೆ. ಕ್ರೀಡೆಗಳ 32 ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಸುಮಾರು 10,000 ಕ್ರೀಡಾಳುಗಳು ಭಾಗವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News