×
Ad

ಮೊದಲ ಯೂತ್ ಏಕದಿನ ಪಂದ್ಯ : ಆಸ್ಟ್ರೇಲಿಯ ವಿರುದ್ಧ ಭಾರತ ತಂಡಕ್ಕೆ 7 ವಿಕೆಟ್ ಜಯ

Update: 2025-09-21 23:43 IST

Photo : BCCI

ಬ್ರಿಸ್ಬೇನ್, ಸೆ.21: ಅಭಿಜ್ಞಾನ್ ಕುಂಡು (ಔಟಾಗದೆ 87, 74 ಎಸೆತ)ಹಾಗೂ ವೇದಾಂತ್ ತ್ರಿವೇದಿ(61 ರನ್, 69 ಎಸೆತ) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತದ ಅಂಡರ್-19 ಕ್ರಿಕೆಟ್ ತಂಡವು ಆಸ್ಟ್ರೇಲಿಯದ ಅಂಡರ್-19 ತಂಡವನ್ನು ಮೊದಲ ಯೂತ್ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡವು ಜಾನ್ ಜೇಮ್ಸ್(ಔಟಾಗದೆ 77, 68 ಎಸೆತ) ಅವರ ಅರ್ಧಶತಕದ ಹೊರತಾಗಿಯೂ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 225 ರನ್ ಗಳಿಸಲಷ್ಟೇ ಶಕ್ತವಾಯಿತು.

ಆಸೀಸ್ ಪರ ಟಾಮ್ ಹೊಗನ್(41 ರನ್, 81 ಎಸೆತ) ಹಾಗೂ ಸ್ಟೀವನ್ ಹೋಗನ್(39 ರನ್, 82 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಆರಂಭಿಕ ಆಟಗಾರರಾದ ಅಲೆಕ್ಸ್ ಟರ್ನರ್ ಹಾಗೂ ಸಿಮೊನ್ ಬಾಡ್ಜ್ ರನ್ ಖಾತೆ ತೆರೆಯುವಲ್ಲಿ ವಿಫಲರಾದರು.

ಭಾರತದ ಪರ ಹೆನಿಲ್ ಪಟೇಲ್(3-38) ಯಶಸ್ವಿ ಪ್ರದರ್ಶನ ನೀಡಿದರು. ಕನಿಷ್ಕ್ ಚೌಹಾಣ್(2-39) ಹಾಗೂ ಕಿಶನ್ ಕುಮಾರ್(2-59)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಗೆಲ್ಲಲು 226 ರನ್ ಗುರಿ ಪಡೆದ ಭಾರತ ತಂಡಕ್ಕೆ 14ರ ಹರೆಯದ ಓಪನರ್ ವೈಭವ್ ಸೂರ್ಯವಂಶಿ(38 ರನ್, 22 ಎಸೆತ, 7 ಬೌಂಡರಿ, 1 ಸಿಕ್ಸರ್)ಬಿರುಸಿನ ಆರಂಭ ಒದಗಿಸಿದರು. ಭಾರತವು 5ನೇ ಓವರ್‌ನಲ್ಲಿ 50 ರನ್ ಕಲೆ ಹಾಕಿತು. ವೈಭವ್, ನಾಯಕ ಆಯುಷ್ ಮ್ಹಾತ್ರೆ (6 ರನ್)ಹಾಗೂ ವಿಹಾನ್ ಮಲ್ಹೋತ್ರಾ(9 ರನ್) ಔಟಾದಾಗ ಭಾರತವು 3 ವಿಕೆಟ್‌ಗೆ 75 ರನ್ ಗಳಿಸಿತ್ತು.

ಆಗ ಜೊತೆಯಾದ ಅಭಿಜ್ಞಾನ್(ಔಟಾಗದೆ 87, 74 ಎಸೆತ, 8 ಬೌಂಡರಿ,5 ಸಿಕ್ಸರ್) ಹಾಗೂ ವೇದಾಂತ್(ಔಟಾಗದೆ 61 ರನ್, 69 ಎಸೆತ, 8 ಬೌಂಡರಿ)4ನೇ ವಿಕೆಟ್‌ಗೆ 152 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಭಿಜ್ಞಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News