ಮೊದಲ ಏಕದಿನ | ಭಾರತಕ್ಕೆ ಸುಲಭ ತುತ್ತಾದ ಇಂಗ್ಲೆಂಡ್
Photo - x/BCCI
ನಾಗ್ಪುರ : ಅಗ್ರ ಸರದಿಯ ಆಟಗಾರ ಶುಭಮನ್ ಗಿಲ್(87 ರನ್, 96 ಎಸೆತ,14 ಬೌಂಡರಿ), ಶ್ರೇಯಸ್ ಅಯ್ಯರ್(59 ರನ್, 36 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಅಕ್ಷರ್ ಪಟೇಲ್(52 ರನ್, 47 ಎಸೆತ, 6 ಬೌಂಡರಿ, 1 ಸಿಕ್ಸರ್)ಅರ್ಧಶತಕದ ಕೊಡುಗೆ, ರವೀಂದ್ರ ಜಡೇಜ ಹಾಗೂ ಹರ್ಷಿತ್ ರಾಣಾರ ಉತ್ತಮ ಬೌಲಿಂಗ್ ನೆರವಿನಿಂದ ಟೀಮ್ ಇಂಡಿಯಾವು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನು 4 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 249 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು 5.2 ಓವರ್ಗಳಲ್ಲಿ 19 ರನ್ಗೆ ಯಶಸ್ವಿ ಜೈಸ್ವಾಲ್(15 ರನ್) ಹಾಗೂ ರೋಹಿತ್ ಶರ್ಮಾ(2 ರನ್)ವಿಕೆಟ್ ಗಳನ್ನು ಬೆನ್ನುಬೆನ್ನಿಗೆ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಶ್ರೇಯಸ್ ಹಾಗೂ ಅಕ್ಷರ್ 3ನೇ ವಿಕೆಟ್ ಗೆ 94 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಅಯ್ಯರ್ ಔಟಾದ ನಂತರ ಅಕ್ಷರ್ ಪಟೇಲ್ ಅವರೊಂದಿಗೆ ಕೈಜೋಡಿಸಿದ ಗಿಲ್ 4ನೇ ವಿಕೆಟ್ ಗೆ 108 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಭಾರತದ ಗೆಲುವಿಗೆ 14 ರನ್ ಅಗತ್ಯವಿದ್ದಾಗ ಗಿಲ್ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ(ಔಟಾಗದೆ 10)ಹಾಗೂ ರವೀಂದ್ರ ಜಡೇಜ(ಔಟಾಗದೆ 2)ತಂಡಕ್ಕೆ ಇನ್ನೂ 68 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.
►ಮಿಂಚಿದ ಜಡೇಜ, ರಾಣಾ, ಇಂಗ್ಲೆಂಡ್ 248 ರನ್
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡವು ಚೊಚ್ಚಲ ಪಂದ್ಯವನ್ನಾಡಿದ ವೇಗದ ಬೌಲರ್ ಹರ್ಷಿತ್ ರಾಣಾ ಹಾಗೂ ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜ ನೇತೃತ್ವದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 248 ರನ್ ಗಳಿಸಿ ಆಲೌಟಾಯಿತು.
ಇಂಗ್ಲೆಂಡ್ ಬ್ಯಾಟರ್ಗಳ ಪೈಕಿ ಜೋಸ್ ಬಟ್ಲರ್ ಹಾಗೂ ಜೇಕಬ್ ಬೆಥೆಲ್ ಅರ್ಧಶತಕಗಳನ್ನು ಗಳಿಸಿದ್ದು, ಉಳಿದವರು ಭಾರೀ ನಿರಾಶೆಗೊಳಿಸಿದರು.
ಇಂಗ್ಲೆಂಡ್ ತಂಡ ಆಕ್ರಮಣಕಾರಿ ಆರಂಭ ಪಡೆದಿತ್ತು. ಭಾರತದ ಉತ್ತಮ ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗವು ಎದುರಾಳಿಯನ್ನು ಕಟ್ಟಿಹಾಕಿತು. ರಾಣಾ 53 ರನ್ಗೆ 3 ವಿಕೆಟ್ ಪಡೆದರೆ, ಜಡೇಜ 26 ರನ್ ನೀಡಿ 3 ವಿಕೆಟ್ ಗಳನ್ನು ಉರುಳಿಸಿದರು.
ಇಂಗ್ಲೆಂಡ್ ಪರ ಬಟ್ಲರ್ 52 ರನ್, ಬೆಥೆಲ್ 51 ರನ್ ಹಾಗೂ ಫಿಲ್ ಸಾಲ್ಟ್ 43 ರನ್ ಕೊಡುಗೆ ನೀಡಿದರು.
ಸಾಲ್ಟ್ ಅವರು ರಾಣಾ ಎಸೆದ ಮೊದಲ ಓವರ್ನಲ್ಲಿ 26 ರನ್ ಗಳಿಸಿ ಮುಗಿಬಿದ್ದರು. ಬೆನ್ ಡಕೆಟ್ 32 ರನ್ ಗಳಿಸಿ ಸಾಲ್ಟ್ರೊಂದಿಗೆ ಮೊದಲ ವಿಕೆಟ್ ಗೆ 75 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಸಾಲ್ಟ್ ಅವರು ಶ್ರೇಯಸ್ ಅಯ್ಯರ್ ನೇರ ಎಸೆತಕ್ಕೆ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಅವರಿಂದ ರನೌಟಾದ ನಂತರ ಪಂದ್ಯವು ತಿರುವು ಪಡೆಯಿತು.
ತನ್ನ ಮೊದಲ ಓವರ್ನಲ್ಲಿ 26 ರನ್ ನೀಡಿದ್ದರೂ ತಾನೆಸೆದ 4 ನೇ ಓವರ್ನಲ್ಲಿ ಎರಡು ವಿಕೆಟ್ ಗಳನ್ನು ಉರುಳಿಸಿ ಪಂದ್ಯದ ದಿಕ್ಕನ್ನು ಬದಲಿಸಿದರು. ರಾಣಾ ಎಸೆತ ಕೆಣಕಲು ಹೋದ ಡಕೆಟ್ ಅವರು ಯಶಸ್ವಿ ಜೈಸ್ವಾಲ್ ಆಕರ್ಷಕ ಕ್ಯಾಚ್ಗೆ ವಿಕೆಟ್ ಒಪ್ಪಿಸಿದರು.
2 ಎಸೆತಗಳ ನಂತರ ರಾಣಾ ಅವರು ಹ್ಯಾರಿ ಬ್ರೂಕ್ ವಿಕೆಟ್ ಉರುಳಿಸಿ ಇಂಗ್ಲೆಂಡ್ಗೆ ಶಾಕ್ ನೀಡಿದರು. ಆಗ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ಬಟ್ಲರ್, 4 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ಬಟ್ಲರ್ ಇನಿಂಗ್ಸ್ ಗೆ ಅಕ್ಷರ್ ಪಟೇಲ್ ತೆರೆ ಎಳೆದರು.
ಯುವ ಆಟಗಾರ ಬೆಥೆಲ್ 1 ಸಿಕ್ಸರ್, 3 ಬೌಂಡರಿಗಳ ಮೂಲಕ ಅರ್ಧಶತಕ ಗಳಿಸಿ ಒಂದಷ್ಟು ಪ್ರತಿರೋಧ ಒಡ್ಡಿದರು. ಅಂತಿಮವಾಗಿ ಜಡೇಜಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ತಂಡವು 47.4 ಓವರ್ಗಳಲ್ಲಿ 248 ರನ್ ಗಳಿಸಿ ಸರ್ವಪತನ ಕಂಡಿತು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28